ಯಲ್ಲಾಪುರ: ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ಶುಕ್ರವಾರ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಾತೆಯರು ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿ ಚಾಲನೆ ನೀಡಿದ ಸ್ವರ್ಣವಲ್ಲೀ ಮಹಾಸಂಸ್ಥಾನದ ಸಂಸ್ಕೃತ ಮಹಾಪಾಠಶಾಲೆಯ ನಿವೃತ್ತ ಉಪನ್ಯಾಸಕ ಡಾ.ಶಂಕರ ಭಟ್ಟ ಬಾಲಿಗದ್ದೆ ಮಾತನಾಡಿ, ಶ್ರಾವಣ ಮಾಸದಲ್ಲಿ ಜಗನ್ಮಾತೆಯ ಆರಾಧನೆಯಿಂದ ಅನೇಕ ಶುಭ ಫಲಗಳು ಪ್ರಾಪ್ತವಾಗುತ್ತವೆ. ಕುಂಕುಮದೃವ್ಯದಿಂದ ಮಹಾಮಾತೆಯನ್ನು ಅರ್ಚಿಸಿದರೆ ವಿಶೇಷ ಪುಣ್ಯ ಲಭ್ಯವಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಸ್ವರ್ಣವಲ್ಲೀ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಅನುಗ್ರಹದಿಂದ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆಯು ಯಶಸ್ವಿಯಾಗಿ ನಡೆಯುತ್ತಾ ಬಂದಿದೆ ಎಂದರು.
ದೇವಾಲಯದ ಅರ್ಚಕ ವಿದ್ವಾನ್ ಗೋಪಾಲಕೃಷ್ಣ ಭಟ್ ಕುಂಕಿಪಾಲ, ಮಾತೃಮಂಡಳಿಯ ಅಧ್ಯಕ್ಷೆ ರಮಾ ದೀಕ್ಷಿತ್, ದೇವಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಜಗದೀಶ ದೀಕ್ಷಿತ್, ಕಾರ್ಯದರ್ಶಿ ನರಸಿಂಹ ಗೇರಗದ್ದೆ, ಪ್ರಮುಖರಾದ ಎಸ್.ವಿ.ಹೆಗಡೆ, ಜಿ.ಎನ್.ಭಟ್ ತಟ್ಟಿಗದ್ದೆ, ಎನ್.ಎಸ್.ಭಟ್, ವಾಸುದೇವ ಹೆಗಡೆ, ಮಾತೃಮಂಡಳಿಯ ಗಂಗಾ ಭಟ್, ಮಹಾದೇವಿ ಭಟ್ ಮುಂತಾದವರು ಇದ್ದರು.
ಕುಂಕುಮಾರ್ಚನೆಯ ನಂತರ ಶಾರದಾಂಬಾ ದೇವರಿಗೆ ಮಹಾ ಪೂಜೆ ನಡೆಯಿತು.