ಸಿದ್ದಾಪುರ: ದೇಶದ ಪ್ರತಿ ಹಳ್ಳಿಗೂ ನೆಟ್ವರ್ಕ್ ದೊರೆತಾಗ ಮಾತ್ರ ಡಿಜಿಟಲ್ ಇಂಡಿಯಾ ಕನಸು ಪೂರ್ತಿಗೊಳ್ಳಲು ಸಾಧ್ಯ. ನೆಟ್ವರ್ಕ್ ಕವರೇಜ್ ಇಲ್ಲದ ಹಳ್ಳಿಗಳಿಗೆ ನೆಟ್ವರ್ಕ್ ಸೌಲಭ್ಯ ಒದಗಿಸಲು 4G ಸ್ಯಾಚುರೇಶನ್ ಎಂಬ ಪ್ರತ್ಯೇಕವಾದ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲ್ಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೇಕೊಂಬು ಗ್ರಾಮದ ಕಾರೆಸಾಲನಲ್ಲಿ ಕೇಂದ್ರ ಸರ್ಕಾರದ 4G ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹೊಸ ಟವರ್ ಉದ್ಘಾಟಿಸಿ ಗುರುವಾರ ಮಾತನಾಡಿದರು.
ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಒಂದು ಕನಸಿನ ಯೋಜನೆಯಾಗಿದೆ. ಈ ಯೋಜನೆ ಬಿಎಸ್ಏನ್ಎಲ್ ವತಿಯಿಂದ ಅನುಷ್ಠಾನಗೊಳ್ಳುತ್ತಿದೆ. ನಮ್ಮ ಜಿಲ್ಲೆಗೆ ಇದರಿಂದ ಹೆಚ್ಚಿನ ಸಹಾಯ ದೊರಕುತ್ತಿದ್ದು , ಈ ವರ್ಷದ ಕೊನೆಯಲ್ಲಿ ಇನ್ನೂ 50 ಟವರ್ ಗಳನ್ನು ನಿರ‍್ಮಿಸಲು ಯೋಜನೆ ರೂಪುಗೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜೂನಿಯರ್ ಟೆಲಿಕಾಂ ಆಫಿಸರ್ ದೀಪಕ್, ತಾಲ್ಲೂಕು ಮಂಡಲ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ, ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಬಿಜೆಪಿ ಮಂಡಲ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.