ಶಿರಸಿ: ಯಕ್ಷಗಾನ ಕಲೆಯು ಗಂಡುಮೆಟ್ಟಿನ ಕಲೆಯಾಗಿದ್ದು ಪ್ರೇಕ್ಷಕರೇ ಯಕ್ಷಗಾನ ಕಲೆಯ ಜೀವಾಳ ಎಂದು ಹಿರಿಯ ಯಕ್ಷಗಾನ ಕಲಾವಿದರಾದ ಗೋಡೆ ನಾರಾಯಣ ಹೆಗಡೆ ಹೇಳಿದರು.
ಅವರು ಶಿರಸಿ ಸಮೀಪದ ಕೊಳಗಿಬೀಸ್ ಶ್ರೀ ಮಾರುತಿ ದೇವಸ್ಥಾನದಲ್ಲಿ ಅಲ್ಲಿಯ ಶ್ರೀ ಸಹಜಾನಂದ ಅವಧೂತ ಮಹಾಸ್ವಾಮಿಗಳ 58ನೇ ಆರಾಧನಾ ಮಹೋತ್ಸವದಲ್ಲಿ ಸದ್ಭಾವನಾ ಸೇವಾ ಸಂಸ್ಥೆ, ಶ್ರೀ ಗುರು ಅಯ್ಯಪ್ಪ ಸಾಂಸ್ಕೃತಿಕ ಸಂಘ, ಕೆಂಗ್ರೆಮಠ, ಹಾಗೂ ಶ್ರೀ ವಿಘ್ನೇಶ್ವರ ದೇವರ ಟ್ರಸ್ಟ್, ಕೆಂಗ್ರೆಮಠಗಳು ಸಂಯುಕ್ವಾಗಿ ಆಯೋಜಿಸಿದ್ದ ಮೂಲಕಾಸುರ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಯಕ್ಷಗಾನದಲ್ಲಿ ರಂಗ ಕಲೆಯ ಎಲ್ಲಾ ಆಯಾಮಗಳಿವೆ. ಬೇರೆ ರಂಗದಿಂದ ತರುವಂಥದ್ದೇನೂ ಇಲ್ಲಿ ಇಲ್ಲ. ಯಕ್ಷಗಾನದಲ್ಲಿ ಎಲ್ಲವೂ ಇದೆ. ಇಲ್ಲ ಎನ್ನುವುದು ಯಾವುದೂ ಇಲ್ಲ ಎಂದ ಅವರು ಸಮಾಜದ ಒಳಿತಿಗಾಗಿ ಕೊಡುವ ಎಲ್ಲ ಸಂದೇಶಗಳೂ ಯಕ್ಷಗಾನ ಪ್ರದರ್ಶನದಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ಆಧುನಿಕ ಯುಗದಲ್ಲಿ ಯಕ್ಷಗಾನ ಕಲೆ ಕುಂಠಿತವಾಗುತ್ತಿದೆ ಎಂಬ ಆತಂಕ ಎದುರಾಗ್ತಾ ಇದೆ. ಯಕ್ಷಗಾನ ಕಲಾಭಿಮಾನಿಗಳು ಸದಾ ಪ್ರೋತ್ಸಾಹ, ಬೆಂಬಲ ನೀಡಬೇಕು. ಯಕ್ಷಗಾನ ಕಲೆಯನ್ನು ಮತ್ತೆ ಪ್ರವರ್ದಮಾನಕ್ಕೆ ತರಬೇಕು ಎಂದು ವಿನಂತಿಸಿಕೊಂಡರು.
ಅಧ್ಯಕ್ಷತೆಯನ್ನು ವಹಿಸಿದ್ದ ದೇವಸ್ಥಾನದ ಪ್ರಧಾನ ಅರ್ಚಕ ವೇ.ಬ್ರ.ಕುಮಾರ ಭಟ್ ಮಾತನಾಡಿ ಭಾರತೀಯ ಸಂಸ್ಕೃತಿ ಅನಾವರಣಗೊಳ್ಳುವುದೇ ಯಕ್ಷಗಾನ ತಾಳಮದ್ದಲೆಗಳಲ್ಲಿ. ಇತ್ತೀಚಿನ ದಿನಗಳಲ್ಲಿ ತಾಳ ಮದ್ದಲೆಗಳಿಗೆ ಪ್ರೇಕ್ಷಕರು ಬರುವುದೇ ಕಡಿಮೆಯಾಗಿದೆ ಎಂದು ಇತ್ತೀಚೆಗೆ ದೇವಸ್ಥಾನದಲ್ಲಿ ಜರುಗಿದ ತಾಳಮದ್ದಲೆಯ ಉದಾಹರಣೆ ನೀಡಿದರು. ಸದ್ಭಾವನಾ ಸೇವಾ ಸಂಸ್ಥೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಯಕ್ಷಗಾನಕ್ಕೆ ಭರತನಾಟ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶಮಾಡಿಕೊಡುತ್ತಿರುವುದು ಶ್ಲಾಘನೀಯ ಎಂದರು.
ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ಸಾಂದರ್ಭಿಕ ಮಾತನಾಡಿದರು. ಸದ್ಭಾವನಾ ಸಂಸ್ಥೆಯ ಜಿ.ವಿ.ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.