ಕಾರವಾರ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉತ್ತಮ ಗುಣಮಟ್ಟದ ಹಣ್ಣು ಹಾಗೂ ತೆಂಗಿನಕಾಯಿ ಸಿಗಲಿ ಎಂಬ ಉದ್ದೇಶದಿಂದ ಹಾಗೂ ಪರಿಸರ ಕಾಳಜಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್ ತಮ್ಮ ಸ್ವಂತ ವೆಚ್ಚದಲ್ಲಿ ಮಾವಿನ ಗಿಡ ಮತ್ತು ತೆಂಗಿನ ಗಿಡಗಳನ್ನು ವಿತರಿಸಿದ್ದಾರೆ.
ಭಾನುವಾರ ಅಂಕೋಲಾದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ 35 ಅಂಗನವಾಡಿಗಳಿಗೆ ತೆಂಗಿನ ಮತ್ತು ಮಾವಿನ ಗಿಡಗಳನ್ನು ವಿತರಿಸಿದರು.
ಅಂಗನವಾಡಿಯ ಮಕ್ಕಳಿಗಾಗಿಯೇ ವಿಶೇಷವಾಗಿ ಉತ್ತಮ ಗುಣಮಟ್ಟದ ಮಾವಿನ ಗಿಡಗಳನ್ನು ಹಳಿಯಾಳದಿಂದ ಹಾಗೂ ಉತ್ತಮ ಗುಣಮಟ್ಟದ ತೆಂಗಿನ ಗಿಡಗಳನ್ನು ಅಂಕೋಲಾದಿಂದ ಸ್ವಂತ ವೆಚ್ಚದಲ್ಲಿ ಖರೀದಿಸಿ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರಿಗೆ ವಿತರಿಸಿದ ಅವರು, ಈ ಗಿಡಗಳನ್ನು ಹೆಚ್ಚಿನ ಕಾಳಜಿ ವಹಿಸಿ ಆರೈಕೆ ಮಾಡಿ, ಇವುಗಳ ಫಲಗಳನ್ನು ಮಕ್ಕಳಿಗೆ ಒದಗಿಸಬೇಕು ಎಂದು ಕೋರಿದರು.
ಈ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿರೂಪಾಕ್ಷ ಪಾಟೀಲ್ ಗೌಡ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿನೋದ್ ಅಣ್ವೇಕರ್ ಅಧ್ಯಕ್ಷತೆ ವಹಿಸಿದ್ದರು.
ಅಂಕೋಲಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ ಜಿ. ಭಟ್, ಅಂಕೋಲಾ ತಾಲೂಕಿನ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತರು ಹಾಗೂ ಸಹಾಯಕರು ಹಾಜರಿದ್ದರು.