ಶಿರಸಿ: ಬಿಟ್ಟುಬಿಡದೆ ಸುರಿದ ಮಳೆಯಿಂದಾಗಿ ಸರಿಯಾದ ಸಮಯಕ್ಕೆ ಅಡಿಕೆ ಬೆಳೆಗೆ ಔಷಧ ಸಿಂಪಡಿಸಲಾಗದೆ ರೈತ ತೀವ್ರ ತೊಂದರೆಗೆ ಒಳಗಾಗಿದ್ದಾನೆ. ಕೇವಲ ತೋಟಕ್ಕೆ ಅಷ್ಟೇ ಅಲ್ಲದೆ ಗದ್ದೆಗಳಿಗೂ ಕೂಡ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಅಡಿಕೆ ಬೆಳೆಗೆ ಕೊಳೆ ರೋಗ ತಗುಲಿ ಅಡಿಕೆ ಉದುರಿ ನೆಲಕಚ್ಚಿದೆ. ಬೇಸಿಗೆಯಲ್ಲಿ ವಿಪರೀತ ಉಷ್ಣ, ಮಳೆಗಾಲದಲ್ಲಿ ಅತಿಯಾದ ಮಳೆ ಇಂತಹ ವಾತಾವರಣದಲ್ಲಿ ರೈತ ತನ್ನ ಬೆಳೆಯನ್ನು ಸಂರಕ್ಷಿಸಿಕೊಳ್ಳುವಲ್ಲಿ ಹರ ಸಾಹಸ ಪಡುತ್ತಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತಾಪಿ ವರ್ಗವು ಅಸಹಾಯಕವಾಗಿ ಕುಳಿತುಕೊಳ್ಳುವ ಸಮಯ ದೂರವಿಲ್ಲ. ತಕ್ಷಣ ಸಂಬಂಧಿಸಿದ ಇಲಾಖೆಗಳು ಕೃಷಿ ತೋಟಗಾರಿಕೆಯ ಇಲಾಖೆಗಳು ರೈತನ ಸಹಾಯಕ್ಕೆ ಬರಬೇಕು ಎಂದು ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ. ಹೆಗಡೆ ಕೊಟ್ಟೆಗದ್ದೆ ಆಗ್ರಹಿಸಿದ್ದಾರೆ.
ಅವರು ಪ್ರಕಟಣೆಯಲ್ಲಿ ಅಭಿಪ್ರಾಯ ತಿಳಿಸಿ ತಮ್ಮ ಸಂಘದ ವ್ಯಾಪ್ತಿಯಲ್ಲಿ ಕಳೆದ ಜೂನ್ ಕೊನೆಯ ವಾರದಿಂದ ಇಲ್ಲಿಯವರೆಗೆ ಬಿಟ್ಟುಬಿಡದೆ ಸುರಿದ ಮಳೆ ತೋಟಗದ್ದೆಗಳಿಗೆ ಅಪಾರ ಹಾನಿಯನ್ನು ಮಾಡಿದೆ ತಮ್ಮ ಭಾಗದ ರೈತರು ತೀವ್ರ ತೊಂದರೆಯಲ್ಲಿದ್ದಾರೆ. ಕೇವಲ ನಿಯಮ ಎನ್ನುತ್ತಾ ಹಾಗೆ ಕುಳಿತರೆ ಸಾಲದು ತಕ್ಷಣ ಅಧಿಕಾರಿಗಳು ಕ್ಷೇತ್ರಕ್ಕೆ ಧಾವಿಸಬೇಕು ರೈತರ ಸಂಕಷ್ಟಕ್ಕೆ ನೆರವಾಗಬೇಕು ಸುಮ್ಮನೆ ಕುಳಿತರೆ ಸಾಲದು ಎಂದಿದ್ದಾರೆ. ಎಲ್ಲವನ್ನು ದೂರದಿಂದಲೇ ಆಲಿಸುತ್ತಾ ಕುಳಿತರೆ ರೈತನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಆದ್ದರಿಂದ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದಿದ್ದಾರೆ.