ಶಿರಸಿ: ಬೆಳೆ ಸರ್ವೆ ಪೋರ್ಟಲ್‌ನಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ ಬೆಳೆ ವಿಮೆ ಪ್ರೀಮಿಯಂ ಪಾವತಿಸಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ರಾಗಿಹೊಸಳ್ಳಿ ಸೊಸೈಟಿ ಅಧ್ಯಕ್ಷರಾದ ವಿಷ್ಣು ಹೆಗಡೆ ಕಡಮನೆ ಹಾಗೂ ಟಿಆರ್‌ಸಿ ನಿರ್ದೇಶಕರಾದ ಸಂತೋಷಕುಮಾರ ಗೌಡರ ಕಸಗೆ ನೇತೃತ್ವದಲ್ಲಿ ರೈತರು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತೋಟಗಾರ ಇಲಾಖೆ ಶಿರಸಿಯ ಆಶ್ರಯದಲ್ಲಿ ಡಾ.ಎಂ.ಎಚ್. ಮರಿಗೌಡ ಇವರ ಜನ್ಮದಿನ ಪ್ರಯುಕ್ತ ವಿದ್ಯಾರ್ಥಿಗಳಿಗೆ ತೋಟಗಾರಿಕೆ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಬಂಡಲ ಪ್ರೌಢಶಾಲಾ ಸಭಾಭವನದಲ್ಲಿ ನಡೆದ ತರಕಾರಿ ಬೀಜ ಕಿಟ್ ವಿತರಣೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಹಲವು ರೈತರ ಕ್ಷೇತ್ರಗಳಲ್ಲಿ ಅಡಿಕೆ ಮುಖ್ಯ ಬೆಳೆ ಇದ್ದಾಗ್ಯೂ ಸಹ ಪಹಣಿಯಲ್ಲಿ ಬೆಳೆ ವಿವರಗಳನ್ನು ಕಡಿಮೆ ದಾಖಲು ಮಾಡಿರುತ್ತಾರೆ. ಈ ಕಾರಣದಿಂದಾಗಿ ಸಹ ಬೆಳೆ ವಿಮಾ ಪ್ರೀಮಿಯಂ ಅಪ್ ಲೋಡ್ ಮಾಡುವ ಸಂರಕ್ಷಣೆ ಪೋರ್ಟಲ್ ನಲ್ಲಿಯೂ ಸಹ ಕಡಿಮೆ ಕ್ಷೇತ್ರ ದಾಖಲಾಗಿರುತ್ತದೆ. ಬೆಳೆದರ್ಶಕದಲ್ಲಿಯೂ ಸಹ ವಾಸ್ತವವಾಗಿ ಬೆಳೆ ಇರುವುದನ್ನು ಖಚಿತಪಡಿಸಲಾಗಿದ್ದು, ಬೆಳೆ ಸರ್ವೆ ಪೋರ್ಟಲ್ ನಲ್ಲಿ ಕಡಿಮೆ ಕ್ಷೇತ್ರ ದಾಖಲಾಗಿರುವುದರಿಂದ ಕೃಷಿಕರು ತಮ್ಮ ಪೂರ್ತಿ ಬೆಳೆ ಕ್ಷೇತ್ರಕ್ಕೆ ವಿಮಾ ಪ್ರೀಮಿಯಂ ತುಂಬದೇ ವಿಮಾ ಪರಿಹಾರದಿಂದ ವಂಚಿತರಾಗುವ ಸಮಸ್ಯೆ ಎದುರಾಗಿದೆ.
ಕಾರಣ ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದು ವಾಸ್ತವವಾಗಿ ಬೆಳೆ ಇರುವ ಕ್ಷೇತ್ರಕ್ಕೆ ಪ್ರೀಮಿಯಂ ಸಂರಕ್ಷಣಾ ಪೋರ್ಟಲ್‌ನಲ್ಲಿ ಅಪ್ಲೋಡ್ ಆಗುವಂತೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.