ಶಿರಸಿ : ಕರಡು ಕಸ್ತೂರಿ ರಂಗನ್ ವರದಿ ಪ್ರಕಟಣೆ ಮತ್ತು 2015ರ ನಂತರದ ಅರಣ್ಯ ಭೂಮಿಯಿಂದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಅರಣ್ಯ ಸಚಿವರ ಆದೇಶದಿಂದ ಉಂಟಾಗಿರುವ ಗೊಂದಲ ಮತ್ತು ವ್ಯತಿರಿಕ್ತ ಪರಿಣಾಮ ಕುರಿತು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಅರಣ್ಯ ಸಚಿವ ಈಶ್ವರ್ ಖಂಡ್ರೆ,ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳೆ, ಕಾನೂನು ಸಚಿವ ಎಚ್.ಕೆ. ಪಾಟೀಲ್ ಮತ್ತು ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್. ವಿ ದೇಶಪಾಂಡೆ ಅವರುಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು.
ಅರಣ್ಯ ಭೂಮಿ ಮೇಲೆ ಅವಲಂಬಿತವಾಗಿರುವ ಅರಣ್ಯವಾಸಿಗಳು ತಲತಲಾಂತರದಿಂದ ವಾಸ್ತವ್ಯ ಮತ್ತು ಸಾಗುವಳಿ ಉದ್ದೇಶಕ್ಕಾಗಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು ಅರಣ್ಯ ಹಕ್ಕು ಕಾಯಿದೆ ಅನುಷ್ಠಾನವಾಗದ ಹಿನ್ನಲೆಯಲ್ಲಿ, ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಹಿತವನ್ನು ಮತ್ತು ಪರಿಸರ ನಿಸರ್ಗದ ಸಮತೋಲನದೊಂದಿಗೆ ಸರ್ಕಾರವು ಕಾರ್ಯತಂತ್ರ ಜರುಗಿಸುವುದು ಅವಶ್ಯವೆಂದು ಅವರು ಪ್ರತಿಪಾದನೆ ಮಾಡಿದ್ದಾರೆ.
ಕಸ್ತೂರಿ ರಂಗನ್ – ತೀರ್ಮಾನವಾಗಿಲ್ಲ:
ಕರಡು ಕಸ್ತೂರಿ ರಂಗನ್ ವರದಿ ಜಾರಿಗೆ ಕುರಿತು ಸರ್ಕಾರ ಇಂದಿನವರೆಗೆ ಯಾವುದೇ ಅಂತಿಮ ತಿರ್ಮಾನ ಪ್ರಕಟಿಸಿಲ್ಲ ಎಂದು ಭೇಟಿಯಾದ ಸಂದರ್ಭದಲ್ಲಿ ಸಚಿವರು ಹೇಳಿದರು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ದೇಶಪಾಂಡೆಯವರ ಸೂಚನೆ :
ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆಯಲ್ಲಿ ಈ ಹಿಂದೆ ಸರ್ಕಾರ ತೆಗೆದುಕೊಂಡ ತೀರ್ಮಾನ ಮತ್ತು ಕಾನೂನು ಮೀರಿ ಕ್ರಮ ಜರುಗಿಸದಿರಿ ಯಾವ ಕಾರಣಕ್ಕೂ ಅಲ್ಲಿಯ ಅರಣ್ಯ ಅತಿಕ್ರಮಣ ಮತ್ತು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದವರನ್ನ ಒಕ್ಕಲೇಬ್ಬಿಸದ್ದೀರಿ ಎಂದು ಅರಣ್ಯ ಇಲಾಖೆಯ ಕಾರ್ಯದರ್ಶಿ ಪ್ರಭಾ ಚಂದ್ರ್ ರಾಯ್ ಅವರಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆಯವರು ನೀರ್ದೇಶನ ನೀಡಿದರು.