ಸಂದೇಶ್ ಎಸ್.ಜೈನ್, ದಾಂಡೇಲಿ
ಜೋಯಿಡಾ : ಅವರು ಅಂತಿಂಥವರಲ್ಲ, ಒಟ್ಟಿನಲ್ಲಿ ಸುಮ್ಮನೆ ಕೂರುವ ಜಾಯಮಾನದವರಂತೂ ಅಲ್ಲವೇ ಅಲ್ಲ. ಏನೇ ಮಾಡಿದರೂ ಅದು ಡಿಫ್ರೆಂಟ್ ಇರಬೇಕು ಅಂದುಕೊಂಡವರು ಅವರು. ಹಾಲನ್ನು ಕರೆಯಲು ಯಂತ್ರದ ಬಳಕೆ ಇತ್ತೀಚಿನ ಕೆಲವು ವರ್ಷಗಳಿಂದ ಸಾಮಾನ್ಯವಾಗಿದೆ. ನಂತರದ ದಿನಗಳಲ್ಲಿ ಮೊಸರಿನಿಂದ ಮಜ್ಜಿಗೆ ಮಾಡಲು ಕೂಡ ಯಂತ್ರ ಬಂದು ಕಡಗೋಲನ್ನು ಒದ್ದೋಡಿಸಿತು.
ಜೋಯಿಡಾ ತಾಲೂಕಿನ ಗಾಂಗೋಡ ಗ್ರಾಮದ ಪ್ರಗತಿಪರ ಕೃಷಿಕರಾಗಿರುವ ಸುಬ್ರಾಯ ಹೆಗಡೆಯವರಲ್ಲಿ ವರ್ಷದ 365 ದಿನವೂ ಹಾಲು,ಮಜ್ಜಿಗೆ, ಮೊಸರು ತಪ್ಪಿದ್ದಲ್ಲ. ಬೆಣ್ಣೆ, ತುಪ್ಪವಂತು ಯಾವಾಗಲೂ ಇವರ ಮನೆಯಲ್ಲಿ ಸ್ಟಾಕ್ ಇರುತ್ತದೆ. ಇವರ ಮನೆಯಲ್ಲಿ ಮಜ್ಜಿಗೆ ಕಡೆಯಲು ವಿದ್ಯುತ್ ಯಂತ್ರದ ಬಳಕೆ ಮಾಡಲಾಗುತ್ತದೆ. ಆದ್ರೆ ಈ ಬಾರಿ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ತಿಂಗಳುಗಳ ಕಾಲ ವಿದ್ಯುತ್ ವ್ಯತ್ಯಯವಾಗಿ ಮೊಸರಿನಿಂದ ಮಜ್ಜಿಗೆ ಮಾಡಲು ಮತ್ತೆ ಕಡಗೋಲಿನತ್ತ ಮುಖ ಮಾಡಲು ಮನೆ ಮಂದಿ ಹೇಳಿದರೂ, ಸುಬ್ರಾಯ ಹೆಗಡೆಯವರು ಮಾತ್ರ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು, ಕರೆಂಟ್ ಹೋದ್ರೆ ಏನಾಯ್ತು ಅಂತ ಯೋಚಿಸಿ, ತೋಟದಲ್ಲಿ ಕಳೆ ತೆಗೆಯಲು ಬಳಸುವ ಯಂತ್ರದ ಕೊನೆಯಲ್ಲಿ ಕಳೆ ಕತ್ತರಿಸುವ ಭಾಗವನ್ನು ತೆಗೆದು ಅದನ್ನು ಸ್ವಚ್ಛಗೊಳಿಸಿ ಅಲ್ಲಿಗೆ ಮಜ್ಜಿಗೆ ಕಡೆಯುವ ಕಡಗೋಲನ್ನು ಕೂಡಿಸಿದ್ದಾರೆ.
ಚೆನ್ನಾಗಿ ಸ್ವಚ್ಛಗೊಳಿಸಿದ ಮೇಲೆ ಅದರಿಂದ ಇದೀಗ ಮಜ್ಜಿಗೆ ಕಡೆಯಲು ಆರಂಭಿಸಿದ್ದಾರೆ. ಆದರೆ ಈ ಯಂತ್ರ ಪೆಟ್ರೋಲ್‌ನಿಂದ ನಡೆಯುತ್ತಿರುವ ಕಾರಣ ಇದಕ್ಕೆ ವಿದ್ಯುತ್ ಅವಶ್ಯಕತೆ ಇಲ್ಲ. ಕಳೆದು ಒಂದು ತಿಂಗಳಿನಿಂದ ಸುಬ್ರಾಯ ಹೆಗಡೆಯವರ ಮನೆಯಲ್ಲಿ ಪೆಟ್ರೋಲ್ ಯಂತ್ರದ ಮೂಲಕ ಮೊಸರಿನಿಂದ ಮಜ್ಜಿಗೆ ಮಾಡಲಾಗುತ್ತದೆ. ಮೊಸರು ಮತ್ತು ಮೊಸರಿನ ಪಾತ್ರೆಯ ಗಾತ್ರವನ್ನು ನೋಡಿ ಯಂತ್ರದ ವೇಗವನ್ನು ಅದಕ್ಕೆ ಅನುಗುಣವಾಗಿ ಮಾಡಲಾಗುತ್ತದೆ.
ಒಟ್ಟಿನಲ್ಲಿ ಸುಬ್ರಾಯ ಹೆಗಡೆಯವರ ಈ ಕ್ರಿಯಾಶೀಲತೆಯನ್ನು ಮಾತ್ರ ಮೆಚ್ಚಲೇಬೇಕು. ಪ್ರಯೋಗಶೀಲರಾದ ಸುಬ್ರಾಯ ಹೆಗಡೆಯವರ ಈ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳೋಣ.