ಯಲ್ಲಾಪುರ: ಹಿತ್ಲಕಾರಗದ್ದೆಯಲ್ಲಿ ಹಾದು ಹೋದ ವಿದ್ಯುತ್ ತಂತಿ ತುಂಡಾದ ಪರಿಣಾಮ ಅಲ್ಲಿ ಮೇವಿಗೆ ತೆರಳಿದ್ದ ಮೂರು ದೊಡ್ಡ ಹಸು ಹಾಗೂ ಒಂದು ಕರು ಸೇರಿದಂತೆ ನಾಲ್ಕು ಜಾನುವಾರು ಸಾವನಪ್ಪಿದೆ.
ಸಾವನಪ್ಪಿದ್ದ ಮೂರು ಹಸುಗಳು ದೇಶಿಯ ಹಸುಗಳಾಗಿದ್ದು, ಒಂದು ಮಾತ್ರ ಜರ್ಸಿ ತಳಿಯಾಗಿದೆ. ಹಿತ್ಲಕಾರಗದ್ದೆಯ ಲಕ್ಷ್ಮೀ ನಾಯ್ಕ ಹಾಗೂ ತುಕಾರಾಮ ನಾಯ್ಕ ಎಂಬಾತರು ಈ ಜಾನುವಾರುಗಳನ್ನು ಸಾಕಿದ್ದರು. ರಭಸ ಗಾಳಿ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ನೀರಿನಲ್ಲಿ ಬಿದ್ದಿದೆ. ಆ ವೇಳೆ ಅಲ್ಲಿ ಮೇವಿಗೆ ತೆರಳಿದ್ದ 13 ವರ್ಷದ ಒಂದು ಹಸು, 5 ಹಾಗೂ 4 ವರ್ಷದ ಇನ್ನೆರಡು ಹಸುವಿನ ಜೊತೆ 1 ವರ್ಷದ ಕರು ವಿದ್ಯುತ್ ಸ್ಪರ್ಶದಿಂದ ಸಾವನಪ್ಪಿದೆ.
ಒಂದು ಹಸು ಮಾತ್ರ ಪಶು ಸಂಗೋಪನಾ ಇಲಾಖೆಯಲ್ಲಿ ನೋಂದಣಿಯಾಗಿದ್ದು, ಅದರ ಸಹಾಯದಿಂದ ಹಸುಗಳ ಮಾಲಕರನ್ನು ಪತ್ತೆ ಮಾಡಲಾಯಿತು. ಹೆಸ್ಕಾಂ ಅಧಿಕಾರಿ ರಮಾಕಾಂತ ಹಾಗೂ ಪಶು ಇಲಾಖೆಯ ಡಾ.ಸುಬ್ರಾಯ ಭಟ್ಟ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ವಿದ್ಯುತ್ ಸರಬರಾಜು ಆಗುತ್ತಿದ್ದ ಹಿನ್ನಲೆ ಹೆಸ್ಕಾಂ ಸಿಬ್ಬಂದಿ ಅದನ್ನು ಸ್ಥಗಿತಗೊಳಿಸಿದರು.