ದಾಂಡೇಲಿ : ಮೊದಲೆ ಮೊಸಳೆ ಎಂದರೆ ಭಯ. ಅದರಲ್ಲೂ ದಾಂಡೇಲಿಯಲ್ಲಂತೂ ಈವರೆಗೆ ಐವರನ್ನು ಮೊಸಳೆಗಳು ಬಲಿ ಪಡೆದುಕೊಂಡ ನಂತರ ಮೊಸಳೆಗಳ ಬಗ್ಗೆ ಮತ್ತಷ್ಟು ಭಯ ಉಂಟಾಗಿದೆ.
ಇಂತಹ ಭಯದ ನಡುವೆಯೂ ಜನತೆಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಸಂಕಲ್ಪ ಹೆಸ್ಕಾಂನದ್ದಾಗಿದೆ. ಈ ನಡುವೆ ನಗರದ ಕುಳಗಿ ರಸ್ತೆ ಪ್ರದೇಶ ವ್ಯಾಪ್ತಿಯಲ್ಲಿರುವ ಕಾಳಿ ನದಿಯ ನಡುಗಡ್ಡೆ ಪ್ರದೇಶದಲ್ಲಿ ಕುಳಗಿ-ಬೊಮ್ಮನಹಳ್ಳಿ ಗ್ರಾಮಗಳಿಗೆ ವಿದ್ಯುತ್ ಪೂರೈಸುವ 11 ಕೆ.ವಿ ವಿದ್ಯುತ್ ಮಾರ್ಗದಲ್ಲಿ ಮರದ ಟೊಂಗೆಯೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಮೊದಲೆ ನಡುಗಡ್ಡೆ ಪ್ರದೇಶ ಒಂದೆಡೆಯಾದರೆ, ಆ ಪ್ರದೇಶವನ್ನು ಮೊಸಳೆಗಳು ಆಕ್ರಮಿಸಿಕೊಂಡು ತಮ್ಮ ಸಾಮ್ರಾಜ್ಯವನ್ನಾಗಿಸಿಕೊಂಡಿದೆ. ಹೀಗಿರುವಾಗ ಅಲ್ಲಿ ಹೋಗಿ ದುರಸ್ತಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಹೆಸ್ಕಾಂ ಇಲಾಖೆ ಇಂತಹ ಧೈರ್ಯಕ್ಕೆ ಶನಿವಾರ ಬೆಳಿಗ್ಗಿನಿಂದಲೆ ದುರಸ್ತಿ ಕಾರ್ಯಕ್ಕಿಳಿದು ಸತತ 4 ಗಂಟೆಯವರೆಗೆ ಯಶಸ್ವಿಯಾಗಿ ದುರಸ್ತಿ ಕಾರ್ಯ ನಡೆಸಿ ಸಾಹಸ ಮೆರೆದಿದೆ.
ಕುಳಗಿ – ಬೊಮ್ಮನಹಳ್ಳಿ ಗ್ರಾಮಕ್ಕೆ ವಿದ್ಯುತ್ ಪೂರೈಕೆಗೆ ಕಾಳಿ ನದಿಯ ನಡುಗಡ್ಡೆ ಪ್ರದೇಶದಲ್ಲಿ ಸಮಸ್ಯೆಯಾಗಿರುವುದನ್ನು ಅರಿತ ಹೆಸ್ಕಾಂ ಸಿಬ್ಬಂದಿಗಳು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ ಮಲ್ಯ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ ಅವರ ಮಾರ್ಗದರ್ಶನದಲ್ಲಿ ಹೆಸ್ಕಾಂ ಶಾಖಾಧಿಕಾರಿ ರಾಹುಲ್ ಅವರ ನೇತೃತ್ವದಲ್ಲಿ ಶಾಖಾಧಿಕಾರಿ ಉದಯ ಅವರ ಸಹಕಾರದೊಂದಿಗೆ ಕಾಳಿ ನದಿಯ ನಡುಗಡ್ಡೆ ಪ್ರದೇಶದಲ್ಲಿ ವಿದ್ಯುತ್ ದುರಸ್ತಿ ಕಾರ್ಯಕ್ಕೆ ಮುಂದಾಯಿತು. ನಡುಗಡ್ಡೆ ಪ್ರದೇಶಕ್ಕೆ ತೆರಳುವ ಮುನ್ನ ಪುರುಷೋತ್ತಮ ಮಲ್ಯ ಮತ್ತು ದೀಪಕ ನಾಯಕ ಅವರು ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನವನ್ನು ನೀಡಿ ಸುರಕ್ಷತಾ ಪರಿಕರಗಳೊಂದಿಗೆ ಕಳುಹಿಸಿಕೊಟ್ಟರು.
ನದಿ ದಾಟಿ ನಡುಗಡ್ಡೆ ಪ್ರದೇಶಕ್ಕೆ ಹೋಗಲು ರಾಫ್ಟ್ ಅನಿವಾರ್ಯವಾಗಿ ಬೇಕಾಗಿತ್ತು. ಈ ಸಮಯದಲ್ಲಿ ಸಹಾಯಕ್ಕೆ ಬಂದವರು ದಾಂಡೇಲಿಯ ಜಂಗಲ್ ಲಾಡ್ಜಸ್ ಮತ್ತು ಪ್ರವಾಸೋದ್ಯಮಿ ವಿಷ್ಣುಮೂರ್ತಿ ರಾವ್ ಅವರು. ತಕ್ಷಣವೇ ವಿಷ್ಣುಮೂರ್ತಿ ರಾವ್ ಅವರು ನದಿ ದಾಟಲು ನುರಿತ ಸಿಬ್ಬಂದಿಗಳನ್ನು ಹೆಸ್ಕಾಂ ಸಿಬ್ಬಂದಿಗಳ ಜೊತೆ ನಡುಗಡ್ಡೆ ಪ್ರದೇಶಕ್ಕೆ ಹೋಗಲು ಸಹಕರಿಸಿದ್ದಾರೆ. ಈ ಕಾರ್ಯಕ್ಕೆ ಹೆಸ್ಕಾಂ ಇಲಾಖೆಯ ಜೊತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈಜೋಡಿಸಿದ್ದಾರೆ.
ಮೊಸಳೆಗಳಿರುವ ಹಿನ್ನೆಲೆಯಲ್ಲಿ ಅವಶ್ಯ ಸುರಕ್ಷಾ ಪರಿಕರಗಳ ಜೊತೆಗೆ ರಾಪ್ಟ್ ಮೂಲಕ ಕಾಳಿ ನದಿಯ ನಡುಗಡ್ಡೆ ಪ್ರದೇಶಕ್ಕೆ ತೆರಳಿದ ಹೆಸ್ಕಾಂ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ರಾಪ್ಟ್ ಸಿಬ್ಬಂದಿಗಳ ಸಹಕಾರದಲ್ಲಿ ಮೊಸಳೆಗಳ ಮಧ್ಯೆಯೆ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಮರದ ಟೊಂಗೆಯನ್ನು ತೆರೆವುಗೊಳಿಸಿ ವಿದ್ಯುತ್ ಲೈನನ್ನು ದುರಸ್ತಿಗೊಳಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮವನ್ನು ಕೈಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಒಟ್ಟಿನಲ್ಲಿ ರಾಪ್ಟ್ ಸಿಬ್ಬಂದಿಗಳ ಸಹಕಾರದಲ್ಲಿ ಹೆಸ್ಕಾಂ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.