ಹೊನ್ನಾವರ: ತಾಲೂಕಿನ ಗೇರುಸೊಪ್ಪ ವಿದ್ಯುತ್ ವಿಭಾಗದ ವ್ಯಾಪ್ತಿಯ ಮಹಿಮೆ ಕಾಗೋಡು ಎಂಬಲ್ಲಿ ಹೆಸ್ಕಾಂ ಅಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದು ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ತಾಲೂಕಿನ ಮಹಿಮೆ, ಕಂಚಿಬೀಳು ನಿವಾಸಿ ಗಣೇಶ ಮಾದೇವ ನಾಯ್ಕ ಗಾಯಗೊಂಡ ವ್ಯಕ್ತಿ.ಘಟನೆಗೆ ಸಂಬಂಧ ಪಟ್ಟಂತೆ ಗಣೇಶ ಮಾದೇವ ನಾಯ್ಕ ನೀಡಿದ ದೂರಿನಂತೆ ಗೇರುಸೊಪ್ಪ ವಿದ್ಯುತ್ ವಿಭಾಗದ ಜ್ಯುನಿಯರ್ ಇಂಜಿನಿಯರ್ ವಿನಾಯಕ ನಾಗೇಶ ನಾಯ್ಕ ಮತ್ತು ಲೈನ್ ಮೇನ್ ಫ್ರಾನ್ಸಿಸ್ ಚಿಂತಾಂಚಿ ರೊಡ್ರಿಗ್ರಿಸ್ ವಿರುದ್ದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಮೆ ಗ್ರಾಮದ ಕಾಗೋಡುದಲ್ಲಿ ಕಳೆದ 15 ದಿನಗಳಿಂದ ವಿದ್ಯುತ ಸಂಪರ್ಕ ಇಲ್ಲದಿರುವುದರಿಂದ ಗೇರುಸೊಪ್ಪ ವಿದ್ಯುತ ವಿಭಾಗದವರಿಗೆ ತಿಳಿಸಿದ್ದು ಜೋಡು ವಿದ್ಯುತ ಕಂಬಕ್ಕೆ ಹತ್ತಲು ಹೇಳಿದ್ದರು. ಈ ವೇಳೆ ನನಗೆ ಯಾವುದೇ ಸುರಕ್ಷತಾ ಸಾಧನ ಮತ್ತು ಮುಂಜಾಗೃತ ಸಾಧನವನ್ನು ನೀಡಿಲ್ಲ. ನಿರ್ಲಕ್ಷ್ಯತನದಿಂದ ಕಂಬವನ್ನು ಹತ್ತುವಂತೆ ಹೇಳಿದ್ದರು. ಇದರಿಂದ ತನಗೆ ವಿದ್ಯುತ ಸ್ಪರ್ಶಿಸಿ ಸೊಂಟಕ್ಕೆ ಗಂಭೀರ ಒಳಗಾಯನೋವಾಗಿದೆ. ಕಾನೂನಿನಂತೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.