Slide
Slide
Slide
previous arrow
next arrow

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಸ್ವಾಮೀಜಿ: ಪ್ರಕಾಶ್ ರಜಪೂತ್

300x250 AD

ಕಾರವಾರ: ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಅವರ ಮನಸ್ಸನ್ನು ಪರಿವರ್ತಿಸಿ, ಅವರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಬೇಡುವುದರ ಮೂಲಕ, ದುರ್ವ್ಯಸನಗಳು ಹಾಗೂ ದುಶ್ಚಟಗಳಿಗ ಪ್ರೇರಣೆ ನೀಡುವ ವಸ್ತುಗಳನ್ನು ಸಂಗ್ರಹಿಸಿ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ವಿಶಿಷ್ಠ ಮತ್ತು ಅತ್ಯಂತ ಅಪರೂಪದ ಸ್ವಾಮೀಜಿಗಳು ಡಾ. ಮಹಾಂತ ಶಿವಯೋಗಿ ಸ್ವಾಮಿಗಳು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹೇಳಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ 12 ನೇ ಶತಮಾನದಿಂದ ಅನೇಕ ಮಂದಿ ಶರಣರು , ಮಹಾ ಪರುಷರು, ಸಾಧು ಸಂತರು, ಸಾರ್ವಜನಿಕರು ತಮ್ಮ ಬದುಕನ್ನು ಹೇಗೆ ಪರಿಪೂರ್ಣವಾಗಿ ಹಾಗೂ ಸಮಾಜದ ಒಳಿತಿಗಾಗಿ ಯಾವ ರೀತಿಯಲ್ಲಿ ಬಳಸಬೇಕು ಎಂಬ ಬಗ್ಗೆ ತಿಳಿಸಿದ್ದಾರೆ ಆದರೆ ಇವರೆಲ್ಲರ ನಡುವೆ ಸಾರ್ವಜನಿಕರು ದುಶ್ಚಟಗಳಿಗೆ ಬಲಿಯಾಗಬಾರದೆಂದು, ಮನೆ ಮನೆಗಳಿಗೆ ತೆರಳಿ , ವ್ಯಸನಗಳ ಬಗ್ಗೆ ಅರಿವು ಮೂಡಿಸಿ, ಅವರಲ್ಲಿನ ದುಶ್ಚಟಗಳ ಸಂಗ್ರಹಕ್ಕೆ ಇಡೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಲಕ್ಷಾಂತರ ಜನರನ್ನು ದುಶ್ಚಟಗಳಿಂದ ಬಿಡಿಸಿ, ಕುಟುಂಬಗಳನ್ನು ರಕ್ಷಿಸಿದ ಡಾ. ಮಹಾಂತ ಶಿವಯೋಗಿಗಳು ಅತ್ಯಂತ ಅಪರೂಪದ ಸ್ವಾಮೀಜಿಯಾಗಿದ್ದಾರೆ ಎಂದರು.
ಸಾರ್ವಜನಿಕರು ಕ್ಷಣಿಕ ಸುಖಕ್ಕಾಗಿ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ. ದುಶ್ಚಟಗಳಿಂದ ದೂರವಿದ್ದಷ್ಟು ಉತ್ತಮ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಆದರಿಂದ ವ್ಯಸನ ಯಾವುದೇ ರೀತಿಯ ವ್ಯಸನಗಳಿಗೆ ಬಲಿಯಾಗದೇ ತಮ್ಮ ಕುಟುಂಬ ಮತ್ತು ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕಾರವಾರ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ರಮೇಶ ಹೂಗಾರ್, ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ವ್ಯಸನಗಳಿಂದ ಮುಕ್ತಿಗೊಳಿಸುವ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಸುಹಾಸ್, ದುಶ್ಚಟಗಳು ವ್ಯಕ್ತಿಯ ವೈಯಕ್ತಿಕ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆಯು, ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ವಿದ್ಯಾರ್ಥಿಗಳು ಕುತೂಹಲ ಮತ್ತು ಮನರಂಜನೆಗೆ ಎಂದು ಪ್ರಾರಂಭಿಸುವ ದುಶ್ಚಟಗಳು ಮುಂದೆ ವ್ಯಸನವಾಗಿ ಮಾರ್ಪಾಡಾಗುತ್ತವೆ , ಇದರಿಂದಾಗಿ ಅವರ ಶೈಕ್ಷಣಿಕ ಪ್ರಗತಿಗೂ ತೊಂದರೆಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಮದ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳ ವ್ಯಸನ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಹೊಂದಿರಬೇಕು ಎಂದ ಅವರು ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಯುವ ಜನತೆ ಎಚ್ಚರದಿಂದಿರಬೇಕು ಎಂದರು.
ಈ ಹಿಂದೆ ವ್ಯಸನ ಪೀಡಿತರಾಗಿದ್ದು, ಪ್ರಸ್ತುತ ವ್ಯಸನ ಮುಕ್ತರಾಗಿರುವ, ಮಾರುತಿ ಹುವಾ ಗೌಡ ಮಾತನಾಡಿ, ಈ ಮೊದಲು ಮದ್ಯ ಸೇವನೆಯಿಂದಾಗಿ ನಾನು ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ ಇದರಿಂದ ಕುಟುಂಬವನ್ನು ನಿರ್ವಹಣೆ ತುಂಬಾ ಕಷ್ಠಕರವಾಗಿತ್ತು. ನನ್ನ ತಂದೆಯವರು ನನ್ನನ್ನು ಮದ್ಯ ವರ್ಜನಾ ಶಿಬಿರಕ್ಕೆ ಸೇರಿಸಿದ ನಂತರ ಕಳೆದ 14 ವರ್ಷದಿಂದ ಮದ್ಯ ಸೇವನೆ ನಿಲ್ಲಿಸಿದ್ದೇನೆ. ಈಗ ಸ್ವಂತ ಮನೆ ನಿರ್ಮಾಣ ಮಾಡಿ, ಮದುವೆಯಾಗಿ, ಸುಖ ಸಂಸಾರವನ್ನು ನಿರ್ವಹಿಸುತ್ತಿದ್ದು, ಮದ್ಯ ಸೇವನೆಯಿಂದಾಗಿ ಅನುಭವಿಸುತ್ತಿದ್ದ ಕಷ್ಟಗಳಿಂದ ವಿಮುಕ್ತಿ ಹೊಂದಿ ಉತ್ತಮ ಜೀವನ ನಡೆಸುತ್ತಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ದುಶ್ಚಟಗಳಿಗೆ ಒಳಗಾಗಿ ನಂತರ ವ್ಯಸನ ಮುಕ್ತರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸುತ್ತಿರುವ ವ್ಯಸನ ಮುಕ್ತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಶಂಕರ್ ರಾವ್ ಮತ್ತಿತ್ತರರು ಉಪಸ್ಥಿತರಿದ್ದರು. ಶಿಕ್ಷಕಿ ವನಿತಾ ಸಂಗಡಿಗರು ಪ್ರಾರ್ಥಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶಿವಕುಮಾರ್ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸವರಾಜ್ ನಿರೂಪಿಸಿ ವಂದಿಸಿದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

300x250 AD
Share This
300x250 AD
300x250 AD
300x250 AD
Back to top