ಸಂಸತ್ ಅಧಿವೇಶನದಲ್ಲಿ ಶಿರೂರು ದುರಂತ ಪ್ರಸ್ತಾಪ | ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ
ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತದ ಕುರಿತಾಗಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸತ್ ಅಧಿವೇಶನದಲ್ಲಿ ಪ್ರಸ್ರಾಪ ಮಾಡಿ, ಈ ನಿಟ್ಟಿನಲ್ಲಿ ದೇಶದ ಗಮನ ಸೆಳೆದಿದ್ದಾರೆ.
ಬುಧವಾರ ಅವರು, ಲೋಕಸಭೆಯ ನಿಯಮ 197ರ ಅಡಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಪಶ್ಚಿಮ ಘಟ್ಟದ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿಯ ಕುರಿತು ಗಮನ ಸೆಳೆದು ಮಾತನಾಡಿದರು. ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಬರುವ ಕೇರಳದ ವೈನಾಡಿನಲ್ಲಿ ಆಗಿರುವ ದುರಂತದಂತೆ ಉತ್ತರ ಕನ್ನಡದ ಅಂಕೋಲಾದ ಶಿರೂರು ಗುಡ್ಡ ಕುಸಿತದಿಂದಾಗಿರುವ ಅನಾಹುತದ ತೀವ್ರತೆಯ ಕುರಿತು ಮಾತನಾಡಿದರು.
ಈಗಾಗಲೇ ಸ್ಥಳದಲ್ಲಿ ಆಗಿರುವ ರಕ್ಷಣಾ ಚಟುವಟಿಕೆ ಮತ್ತು ಆಗಬೇಕಾದ ಕಾರ್ಯಗಳ ಕುರಿತು ಗಮನಸೆಳೆಯುವುದರ ಜೊತೆಗೆ, ಹೆಚ್ಚುವರಿಯಾಗಿ ಇನ್ನೊಂದು ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಬೇಕೆಂದು ಕೋರಿದರು.
ಪಶ್ಚಿಮ ಘಟ್ಟದ ಧಾರಣ ಸಾಮರ್ಥ್ಯದ ಬಗ್ಗೆ ಅಧ್ಯಯನವಾಗಲೆಂದು ಹಾಗೂ ಶಿರೂರು ದುರಂತದಲ್ಲಿ ಮಡಿದವರಿಗೆ ಮತ್ತು ತೊಂದರೆಗೊಳಗಾದವರಿಗೆ ವಿಶೇಷ ಪರಿಹಾರ ನೀಡುವ ಕುರಿತು ಆಗ್ರಹಿಸಿ, ಲೋಕಸಭೆಯ ಗಮನಕ್ಕೆ ತಂದರು.
ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿಯನ್ನು ಕೈಗೊಳ್ಳುವಾಗ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು.
- ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಡಿಸಿ ಆದೇಶ:
ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಜುಲೈ 16 ರಂದು ಭೂ ಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. 14 ದಿನಗಳ ನಂತರ ರಸ್ತೆ ಮೇಲೆ ಬಿದ್ದಿದ್ದ ಮಣ್ಣು ತೆರವು ಮಾಡುವ ಜೊತೆ ಎಂಟು ಶವ ಪತ್ತೆ ಮಾಡಿದ್ದರು. ಆದರೇ ಮೂರು ಶವಗಳ ಶೋಧಕ್ಕೆ ಕಾರ್ಯಾಚರಣೆ ನಡೆಸಲಾಗುತಿತ್ತು. ಇದೀಗ 16 ದಿನದ ನಂತರ ಶಿರೂರು ಭಾಗದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದ್ದು ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಯಾರವರು ಆದೇಶ ಮಾಡಿದ್ದಾರೆ. ಈ ಮೂಲಕ ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.