ಶಿರಸಿ: ಸರಕಾರದ ಕ್ರಾಪ್ ಸರ್ವೆ ತಂತ್ರಾಂಶದಲ್ಲಿ ರೈತರ ಬೆಳೆ ಕ್ಷೇತ್ರದ ವಿವರ ವ್ಯತ್ಯಾಸವಾಗಿರುವುದರಿಂದ ರೈತರು ವಾಸ್ತವವಾಗಿ ಹೊಂದಿರುವ ಸಂಪೂರ್ಣ ಕೃಷಿ ಕ್ಷೇತ್ರಕ್ಕೆ ವಿಮಾ ಪ್ರೀಮಿಯಂ ತುಂಬಲಾಗದೇ ವಿಮಾ ಪರಿಹಾರ ದೊರಕುವ ಸಂದರ್ಭದಲ್ಲಿ ರೈತರಿಗೆ ನಷ್ಟ ಸಂಭವಿಸುವ ಆತಂಕ ಎದುರಾಗಿದೆ.
ಈ ಕುರಿತು ಶಿರಸಿಯ ಟಿಆರ್‌ಸಿಯಿಂದ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ಹಾಗೂ ತೋಟಗಾರಿಕಾ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು ಸಮಸ್ಯೆಯನ್ನು ಶೀಘ್ರ ಪರಿಹರಿಸಿಕೊಡುವಂತೆ ಆಗ್ರಹಿಸಲಾಗಿದೆ. ಪ್ರಸಕ್ತ ವರ್ಷ ಬೆಳೆ ವಿಮೆ ಪ್ರೀಮಿಯಂ ಪಾವತಿಗೆ ಸರಕಾರದ ಕ್ರಾಪ್ ಸರ್ವೆ ತಂತ್ರಾಂಶದ ಸನ್ 2023ನೇ ಸಾಲಿನ ಡೇಟಾವನ್ನು ಬೆಳೆ ವಿಮೆ ಡೇಟಾ ತಂತ್ರಾಂಶವಾದ ಸಂರಕ್ಷಣೆ ಪೋರ್ಟಲ್‌ನೊಂದಿಗೆ ಲಿಂಕ್ ಮಾಡಲಾಗಿದೆ.
ಕ್ರಾಪ್ ಸರ್ವೆ ಪೋರ್ಟಲ್‌ನಲ್ಲಿ ರೈತರು ವಾಸ್ತವವಾಗಿ ಹೊಂದಿರುವ ಬೆಳೆ ಕ್ಷೇತ್ರದ ಬದಲಾಗಿ ಕಡಿಮೆ ಕ್ಷೇತ್ರವನ್ನು ಹಾಗೂ ಕೆಲ ರೈತರ ಸಂಪೂರ್ಣ ಕ್ಷೇತ್ರದಲ್ಲಿ ಬೆಳೆ ವಿವರವೇ ಇಲ್ಲವಾಗಿದೆ. ಸರಕಾರದ ಫ್ರೂಟ್ಸ್ ತಂತ್ರಾಂಶದಲ್ಲಿ ಸಹ ಇದೇ ಮಾಹಿತಿ ಅಪ್‌ಲೋಡ್ ಆಗಿರುತ್ತದೆ.
ವಿಮಾ ಪ್ರೀಮಿಯಂ ಅಪ್ಲೋಡ್ ಮಾಡಲು ಸರಕಾರದ ಫ್ರೂಟ್ಸ್ ತಂತ್ರಾಂಶದ ದಾಖಲೆ ಸಹ ಅವಶ್ಯವಿರುವುದರಿಂದ ಫ್ರೂಟ್ಸ್ ಡಾಟಾ ಸಂರಕ್ಷಣೆ ಪೋರ್ಟಲ್‌ನಲ್ಲಿ ಕೆಲ ರೈತರ ನೈಜ ದಾಖಲೆ ಅಪ್‌ಲೋಡ್ ಆಗದಿರುವುದರಿಂದ ರೈತರಿಂದ ಪಡೆದ ಬೆಳೆ ವಿಮೆ ಪ್ರೀಮಿಯಂ ತುಂಬಲು ಸಹಕಾರ ಸಂಘಗಳಿಗೆ ಸಾಧ್ಯವಾಗುತ್ತಿಲ್ಲ. ಸನ್ 2024ನೇ ಸಾಲಿನಲ್ಲಿ ಕೆಲ ರೈತರ ಪಹಣಿ ಹಕ್ಕು ಬದಲಾವಣೆ ಹಾಗೂ ವಾರಸಾ ಯಾವುದೇ ರೀತಿಯ ವ್ಯತ್ಯಾಸವಾದ ಸಂದರ್ಭದಲ್ಲಿ ಕ್ರಾಪ್ ಸರ್ವೆ ತಂತ್ರಾಂಶದೊಂದಿಗೆ ಈ ಮಾಹಿತಿ ಲಿಂಕ್ ಆಗದಿರುವುದಿಂದ ಬೆಳೆ ವಿಮೆ ಮಾಡಲು ಸಾಧ್ಯವಾಗುತ್ತಿಲ್ಲ.
ಉತ್ತರಕನ್ನಡ ಜಿಲ್ಲೆಯಲ್ಲಿ ಸುಮಾರು 2.36ಲಕ್ಷ ಕೃಷಿ ಕುಟುಂಬಗಳಿದ್ದು ಸುಮಾರು 1 ಲಕ್ಷಕ್ಕೂ ಹೆಚ್ಚಿನ ರೈತರು ಬೆಳೆ ಸಾಲ ಪಡೆದುಕೊಳ್ಳುತ್ತಿದ್ದಾರೆ.
ಬೆಳೆಸಾಲ ಪಡೆದುಕೊಳ್ಳುತ್ತಿರುವ ಬಹುತೇಕ ರೈತರು ಪ್ರಧಾನಮಂತ್ರಿ ಹವಾಮಾನ ಆಧಾರಿತ ವಿಮಾ ಯೋಜನೆ ಹಾಗೂ ಫಸಲ್ ಬಿಮಾ ಯೋಜನೆಗೆ ಒಳಪಡಲು ಬಯಸಿರುತ್ತಾರೆ. ಇಂತಹ ಕೃಷಿಕ ಸದಸ್ಯರುಗಳ ವಿಮಾ ಪ್ರೀಮಿಯಂಗಳನ್ನು ಸಂರಕ್ಷಣೆ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವ ಕೆಲಸವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೇ ನಿರ್ವಹಿಸುತ್ತಿವೆ.
ಈ ವರ್ಷ ಅತಿವೃಷ್ಟಿ ಉಂಟಾಗಿದ್ದು, ಬಿರುಗಾಳಿಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಮರಗಳೂ ಸಹ ನೆಲಕ್ಕುರುಳಿವೆ. ಅಲ್ಲದೇ ಕೊಳೆ ರೋಗವೂ ಸಹ ವ್ಯಾಪಕವಾಗಿ ಹರಡುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೆಚ್ಚಿನ ಕೃಷಿಕರು ಈ ಕಾರಣದಿಂದಾಗಿ ವಿಮಾ ಪ್ರೀಮಿಯಂ ತುಂಬಲು ಪ್ರಾಥಮಿಕ ಪತ್ತಿನ ಸಂಘಗಳನ್ನು ಒತ್ತಾಯಿಸುತ್ತಿದ್ದಾರೆ. ಹಲವು ರೈತರ ಕ್ಷೇತ್ರಗಳಲ್ಲಿ ಅಡಿಕೆ ಮುಖ್ಯ ಬೆಳೆ ಇದ್ದರೂ ಸಹ ಪಹಣಿಯಲ್ಲಿ ಬೆಳೆ ವಿವರ ಕಡಿಮೆ ದಾಖಲಾಗಿರುತ್ತದೆ. ಈ ಕಾರಣದಿಂದ ಸಹ ವಿಮಾ ಪ್ರೀಮಿಯಂ ಅಪ್ ಲೋಡ್ ಮಾಡುವ ಸಂರಕ್ಷಣೆ ಪೋರ್ಟಲ್‌ನಲ್ಲಿ ಸಹ ಬೆಳೆ ಕ್ಷೇತ್ರ ಕಡಿಮೆ ದಾಖಲಾಗಿರುತ್ತದೆ.
ಸರಕಾರದ ಮಟ್ಟದಲ್ಲಿ ಈ ದೋಷಗಳನ್ನು ಸರಿಪಡಿಸಲು ತೋಟಗಾರಿಕಾ ಇಲಾಖೆ ಮೂಲಕ ಮಾಹಿತಿ ಸಲ್ಲಿಸಲು ತಿಳಿಸಿದ್ದು, ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮಾಹಿತಿ ಒದಗಿಸಿದ್ದರೂ ಸಹ ತಾಂತ್ರಿಕ ಸಮಸ್ಯೆ ಸರಿಪಡಿಸುವಿಕೆಯಲ್ಲಿ ವಿಳಂಬವಾಗುತ್ತಿರುವುದರಿಂದ ರೈತರು ಬೆಳೆ ವಿಮಾ ಯೋಜನೆಯಿಂದ ವಂಚಿತರಾಗುವ ಆತಂಕ ಎದುರಾಗಿದೆ.
ಕೃಷಿಕರು ತಮ್ಮ ಪೂರ್ತಿ ಬೆಳೆ ಕ್ಷೇತ್ರಕ್ಕೆ ವಿಮಾ ಪ್ರೀಮಿಯಂ ತುಂಬದೇ ವಿಮಾ ಪರಿಹಾರದಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಇಲಾಖೆ ಶೀಘ್ರವಾಗಿ ಕ್ರಮಕೈಗೊಂಡು ರೈತರು ಹೊಂದಿರುವ ಪೂರ್ತಿ ಕ್ಷೇತ್ರಕ್ಕೆ ಬೆಳೆ ವಿಮೆ ಮಾಡಿಸಲು ಅನುಕೂಲ ಕಲ್ಪಿಸಬೇಕೆಂಬುದು ಪ್ರಾಥಮಿಕ ಸಹಕಾರ ಸಂಘಗಳ ಒತ್ತಾಯವಾಗಿದೆ.
ಟಿಆರ್‌ಸಿಯಿಂದ ಮನವಿ
ರೈತರು ವಾಸ್ತವವಾಗಿ ಹೊಂದಿರುವ ಬೆಳೆ ಕ್ಷೇತ್ರಕ್ಕೆ ವಿಮಾ ಪ್ರೀಮಿಯಂ ಸಂರಕ್ಷಣಾ ಪೋರ್ಟಲ್‌ನಲ್ಲಿ ಅಪ್ಲೋಡ್ ಆಗುವಂತೆ ಶೀಘ್ರ ಕ್ರಮ ಕೈಗೊಳ್ಳಲು ತೋಟಗಾರಿಕಾ ಇಲಾಖೆಗೆ ಹಾಗೂ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ಗೆ ಈ ಬಗ್ಗೆ ಟಿಆರ್‌ಸಿಯಿಂದ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಈ ರೀತಿ ತಾಂತ್ರಿಕ ತೊಂದರೆ ಉಂಟಾಗಿರುವುದರಿಂದ ಬೆಳೆ ವಿಮಾ ಪ್ರೀಮಿಯಂ ಅಪ್ಲೋಡ್ ಮಾಡಲು ಅಗಸ್ಟ್ 30ರವರೆಗೆ ಕಾಲಾವಕಾಶ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಪರಿಹಾರವೇನು?
ಕ್ರಾಪ್ ಸರ್ವೆ ತಂತ್ರಾಂಶದಲ್ಲಿರುವ ಬೆಳೆ ವಿವರ ಮಾಹಿತಿಗಳು 2023ನೇ ಸಾಲಿನದ್ದಾಗಿದ್ದು, ತೋಟಗಾರಿಕಾ ಇಲಾಖೆಗೆ ಸಹಕಾರ ಸಂಘಗಳು ನಿಗದಿತ ನಮೂನೆಯಲ್ಲಿ ನೀಡಿದ ಮಾಹಿತಿಯಂತೆ ಸಂರಕ್ಷಣೆ ತಂತ್ರಾAಶದಲ್ಲಿ ಡೇಟಾ ಲಭ್ಯವಾಗುವಂತೆ ಮಾಡಬೇಕು. ಇಲ್ಲವಾದರೆ ಕ್ರಾಪ್ ಸರ್ವೆ ತಂತ್ರಾಂಶದೊಂದಿಗಿನ ಡೇಟಾ ಲಿಂಕ್ ಅನ್ನು ಕೈಬಿಟ್ಟು ಈ ಹಿಂದಿನ ವರ್ಷಗಳಂತೆಯೆ ಬೆಳೆವಿಮೆ ಎಂಟ್ರಿಗೆ ಅನುಕೂಲ ಕಲ್ಪಿಸಬೇಕು.
ಪ್ರಸಕ್ತ ವರ್ಷ ನಮ್ಮ ಸಂಘದಿAದ 2200ಕ್ಕಿಂತಲೂ ಅಧಿಕ ರೈತರಿಗೆ ಬೆಳೆ ಸಾಲ ವಿತರಿಸಲಾಗಿದೆ. ಈ ಎಲ್ಲ ರೈತರ ಬೆಳೆ ವಿಮೆ ಡೇಟಾ ಎಂಟ್ರಿ ಕಾರ್ಯ ನಡೆಯುತ್ತಿದೆ. ಆದರೆ ಕ್ರಾಪ್ ಸರ್ವೆ ತಂತ್ರಾಂಶದಲ್ಲಿ ಹೆಚ್ಚಿನ ರೈತರ ಬೆಳೆ ವಿವರ ವ್ಯತ್ಯಾಸವಾಗಿರುವುದರಿಂದ ಸಂಪೂರ್ಣ ಕ್ಷೇತ್ರಕ್ಕೆ ಬೆಳೆ ವಿಮೆ ಪ್ರೀಮಿಯಂ ತುಂಬಲು ತಾಂತ್ರಿಕ ಸಮಸ್ಯೆ ಎದುರಾಗಿರುವ ಬಗ್ಗೆ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗಿದೆ. ಸದಸ್ಯರಿಗೂ ಸಹ ಸಮಸ್ಯೆಯ ಕುರಿತು ತಿಳಿವಳಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ.
- ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಅಧ್ಯಕ್ಷರು, ಟಿಆರ್‌ಸಿ