ಶಿರಸಿ: ರೋಟರಿ ಸದಸ್ಯರು ತಮ್ಮ ಅಮೂಲ್ಯವಾದ ಸಮಯ, ಸಂಪತ್ತು ಮತ್ತು ಸಾಮರ್ಥ್ಯವನ್ನು ಧಾರೆ ಎರೆದು ಸಮಾಜಸೇವೆಯನ್ನು ಮಾಡುತ್ತಾರೆ. ರಿಲೇ ಮಾದರಿಯಲ್ಲಿ ಎಲ್ಲ ಸದಸ್ಯರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಮಾತ್ರವೇ ಒಂದು ವರ್ಷ ಅವಧಿಗೆ ಸೀಮಿತವಾಗಿ ಲಭಿಸುವ ರೋಟರಿ ವರ್ಷ ಯಶಸ್ವಿಯಾಗುವುದು. ಸಾಂಘಿಕ ಶಕ್ತಿಯೇ ರೋಟರಿಯ ಜೀವಾಳ. 1989ರಿಂದ ರೋಟರಿಯಲ್ಲಿ ಮಹಿಳೆಯರಿಗೆ ಸಮಾನ ಸದಸ್ಯತ್ವ ಪ್ರಾಪ್ತವಾಗಿ ಅಲ್ಲಿಂದೀಚೆಗೆ ಯಾವುದೇ ವ್ಯತ್ಯಾಸವಾಗದಂತೆ ಎಲ್ಲರೂ ಸಮಾನತೆಯಿಂದ ರೋಟರಿಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶಿರಸಿಮಟ್ಟಿಗೆ ತಡವಾಗಿಯಾದರೂ ಇದೇ ಪ್ರಥಮವಾಗಿ ಬಹುಮುಖ ಪ್ರತಿಭೆಯ ಡಾ. ಸುಮನ್ ಅವರು ದಕ್ಷ ಕಾರ್ಯದರ್ಶಿ ಸರಸ್ವತಿ ಮತ್ತು ತಂಡದೊಂದಿಗೆ ಸೇವಾಸನ್ನದ್ಧರಾಗಿದ್ದಾರೆ. ಅವರು ಪ್ರಸಕ್ತ ವರ್ಷವನ್ನು ಇನ್ನೂ ಹೆಚ್ಚು ಉಜ್ವಲವಾಗಿಸಲಿ ಎಂದು ರೋ.ಅಂ. ಜಿಲ್ಲೆ 3181ರ ನಿಕಟಪೂರ್ವ ಪ್ರಾಂತಪಾಲ ಕೇಶವ ಹೆಬ್ಬಳೆ ಆರ್. ಹಾರೈಸಿದ್ದಾರೆ.
ಶಿರಸಿ ರೋಟರಿಯ 2024-25ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ನೂತನ ಸದಸ್ಯರೊಬ್ಬರನ್ನು ಶಿರಸಿ ರೋಟರಿಗೆ ಸೇರ್ಪಡೆಗೊಳಿಸಿ ಮಾತನಾಡಿ ಉತ್ತಮ ಯೋಜನೆ, ಹೃದಯವಂತಿಕೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಮಾನವೀಯತೆ ಗೆಲ್ಲುತ್ತದೆ. ಇದು ರೋಟರಿಯ ಉತ್ಕೃಷ್ಟ ಸಂಸ್ಕಾರ ಮತ್ತು ಸಂಸರ್ಗದ ಫಲವಾಗಿ ಸಾಧ್ಯವಾಗುವುದು. ಆದುದರಿಂದಲೇ ಸದಸ್ಯರು ಹೆಮ್ಮೆಯಿಂದ ಧರಿಸುವ ರೋಟರಿ ಲ್ಯಾಪಲ್ ಪಿನ್ ಕೂಡ ಆಭರಣ ಮೀರಿದ ಘನತೆಯನ್ನು ಬಿಂಬಿಸುತ್ತದೆ. ಅದರಿಂದಾಗಿ ರೋಟರಿ ಸದಸ್ಯರಿಂದ ಸಮಾಜಮುಖೀ ಕಾರ್ಯ ಸಾಧ್ಯವಾಗುವುದು ಎಂದರು.
ಅತಿಥಿಗಳಾಗಿ ಪಾಲ್ಗೊಂಡ ಸಹಾಯಕ ಪ್ರಾಂತಪಾಲ ಕಾರವಾರದ ರಾಘವೇಂದ್ರ ಪ್ರಭು 2024-25ರ ಅಂತರ್ರಾಷ್ಟ್ರೀಯ ರೋಟರಿ ಧ್ಯೇಯವಾಕ್ಯ ಪಟವನ್ನು ಅನಾವರಣಗೊಳಿಸಿ, ರವಿ ಹೆಗಡೆ ಗಡಿಹಳ್ಳಿ ಮತ್ತು ಸಂಪಾದಕ ಮಂಡಳಿಯಿಂದ ಪ್ರಕಟಿಸಲಾದ ಅಧಿಕೃತ ಹೊತ್ತಿಗೆ ರೋಟರಿ ವೊಯ್ಸ್ ಬಿಡುಗಡೆಗೊಳಿಸಿ, ಫಲಾನುಭವಿ ಶ್ರೀಮತಿ ಅಶ್ವಿನಿ ಅವರಿಗೆ ತಾವೇ ಸ್ವತಃ ಹೊಲಿಗೆ ಯಂತ್ರವನ್ನು ದೇಣಿಗೆಯಾಗಿ ನೀಡಿ ಮಾತನಾಡಿ ಶುಭ ಹಾರೈಸಿದರು.
ಸ್ವಾಗತಿಸಿದ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಹೆಗಡೆ ಅನಿಸಿಕೆ ತಿಳಿಸಿದರು. ನೂತನ ಅಧ್ಯಕ್ಷೆ ಡಾ. ಸುಮನ್ ಸೇವಾಧಿಕಾರ ಸ್ವೀಕೃತಿ ನುಡಿಯೊಂದಿಗೆ ತಮ್ಮ ನಿರ್ದೇಶಕ ಮಂಡಳಿಯನ್ನು ಪ್ರಕಟಿಸಿ, ರೋಟರಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡಿದರು. ವಿನಾಯಕ ಜೋಶಿ ಸೂಚಿತ ನೂತನ ಸದಸ್ಯ ಸುಮಂತ ಹೆಗಡೆಯವರನ್ನು ಶಿರಸಿ ರೋಟರಿಗೆ ಸೇರಿಸಿಕೊಳ್ಳಲಾಯಿತು.
ನಿಕಟಪೂರ್ವ ಕಾರ್ಯದರ್ಶಿ ಗಣಪತಿ ಹೆಗಡೆ ಪವರ್ ಪಾಯಿಂಟ್ ಮೂಲಕ ವಾರ್ಷಿಕ ವರದಿ ಸಾದರಪಡಿಸಿದರು. ಡಾ. ದಿನೇಶ ಹೆಗಡೆ ಮತ್ತು ಅರುಣ ನಾಯಕ ಅತಿಥಿಗಳನ್ನು ಹಾಗೂ ಡಾ. ಶಿವರಾಮ, ಪ್ರೊ.ಕೆ.ಎನ್. ಹೊಸ್ಮನಿ, ಪ್ರವೀಣ ನಾಯಕ ಮತ್ತು ಗಣೇಶ ಎನ್. ಹೆಗಡೆ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಸರಸ್ವತಿ ಎನ್. ರವಿ ವಂದಿಸಿದರು. ಕಿರಣ ಭಟ್ ಮತ್ತು ಅಶೋಕ ಹಬೀಬ ನಿರ್ವಹಿಸಿದರು.