ಶಿರಸಿ: ಅರಣ್ಯಭೂಮಿ ಹಕ್ಕಿಗೆ ಸಂಬಂಧಿಸಿ ಸುಪ್ರೀಂ ಕೋರ್ಟಿನಲ್ಲಿ ಪರಿಸರವಾದಿ ಸಂಘಟನೆಗಳು ದಾಖಲಿಸಿದ ಪ್ರಕರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸುವುದು ಅವಶ್ಯ ಇಲ್ಲದಿದ್ದಲ್ಲಿ, ಅರಣ್ಯವಾಸಿಗಳು ನಿರಾಶ್ರಿತರಾಗುವರು ಎಂದು ವಿಶ್ರಾಂತ ನ್ಯಾಯಮೂರ್ತಿ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟದ ಮಾರ್ಗದರ್ಶಕರಾಗಿರುವ ಎಚ್.ಎನ್.ನಾಗ್ ಮೋಹನದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ದೇಶದ ಅರಣ್ಯವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆಯು ಅವಶ್ಯ. ಪಕ್ಷಗಾರರಾಗಿ ಸೇರ್ಪಡೆಗೊಂಡಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟನಲ್ಲಿ ಹೋರಾಟಗಾರರ ವೇದಿಕೆಯ ತೆಗೆದುಕೊಳ್ಳಬೇಕಾದ ಕಾನೂನಾತ್ಮಕ ಅಂಶಗಳ ಕುರಿತು ಅಧ್ಯಕ್ಷ ರವೀಂದ್ರ ನಾಯ್ಕ ಜೊತೆ ಅವರ ಬೆಂಗಳೂರು ಕಛೇರಿಯಲ್ಲಿ ಚರ್ಚಿಸುವ ಸಂದರ್ಭದಲ್ಲಿ ಮೇಲಿನಂತೆ ಅವರು ಹೇಳಿದರು.
ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಕಾನೂನು ಅರ್ಥೈಸುವಿಕೆಯ ಗೊಂದಲದಿಂದ ಅರಣ್ಯವಾಸಿಗಳ ಅರ್ಜಿಗಳು ತಿರಸ್ಕಾರವಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಮತ್ತು ಭೂಮಿ ಹಕ್ಕು ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರವು ಸುಪ್ರೀಂ ಕೋರ್ಟನಲ್ಲಿ ದೃಢ ನಿಲುವನ್ನು ಪ್ರಕಟಿಸುವುದು ಅವಶ್ಯವೆಂದು ಅವರು ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ೧೭ ವರ್ಷಗಳಾದರೂ ಅರ್ಹ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಪಡೆಯುವಲ್ಲಿ ವಿಳಂಬವಾಗುತ್ತಿರುವುದು ವಿಷಾದಕರ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳ ಭದ್ದತೆ:
ದೇಶದ ಕಾನೂನು ರಚಿಸುವುದು ಮತ್ತು ತಿದ್ದುಪಡಿ ಮಾಡುವ ಸರ್ವಾಧಿಕಾರ ಜನಪ್ರತಿನಿಧಿಗಳಿಗೆ ಇರುವುದರಿಂದ ಅರಣ್ಯವಾಸಿಗಳಿಗೆ ಭೂಮಿ ಸಾಗುವಳಿ ಹಕ್ಕಿಗೆ ಸಂಬಂಧಿಸಿ ಜನ ಪ್ರತಿನಿಧಿಗಳು ಬದ್ಧತೆಯನ್ನು ಪ್ರಕಟಿಸಬೇಕೇಂದು ಈ ಸಂದರ್ಭದಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.