ಶಿರಸಿ: ಮಾದಕ ದ್ರವ್ಯ ಬಳಸುವ ಯುವಜನತೆಯ ಸಂಖ್ಯೆ ಅಧಿಕವಾಗುತ್ತಿದೆ. ಶೇಕಡ 90ರಷ್ಟು ಯುವಕರು ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ ಎಂದು ಶಿರಸಿ ಮಾರುಕಟ್ಟೆ ಠಾಣೆಯ ಹವಾಲ್ದಾರ್ ರಮೇಶ್ ಮುಚ್ಚಂಡಿ ಹೇಳಿದರು.
ಅವರು ಶಿರಸಿ ಹೊಸ ಮಾರುಕಟ್ಟೆ ಠಾಣೆ ವತಿಯಿಂದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಿಮಿತ್ತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಗಾಂಜಾ,ಬೀಡಿ,ಸಿಗರೇಟ್ ಇವುಗಳನ್ನು ಹೊರತುಪಡಿಸಿ ವೈಟ್ನರ್,ಫೆವಿಕಾಲ್,ವಿಕ್ಸ್, ಜಂಡುಬಾಮ್, ಚರಸ್ ಕೂಡ ಹಾನಿಕಾರಕ ಮಾದಕ ವಸ್ತುಗಳು ಇವುಗಳ ಬಳಕೆ ಕಡಿಮೆ ಮಾಡಬೇಕು. ಇಂದಿನ ದಿನದಲ್ಲಿ ಅಪಘಾತವಾಗುತ್ತಿರುವವರಲ್ಲಿ ಶೇಕಡ 60 ಯುವಜನತೆಯೇ ಇದ್ದಾರೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಠಾಣೆಯನ್ನು ಭೇಟಿ ಮಾಡಬಹುದು ಎಂದರು.
ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ರತ್ನ ಕುರಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧದ ಬಗ್ಗೆ ಪ್ರತಿಜ್ಞೆ ಮಾಡಿಸಿದರು.ನಂತರ ಮಾತನಾಡಿ ಗಣತಿಯ ಪ್ರಕಾರ ಕ್ರೈಮ್ ಲೀಸ್ಟ್ ನಲ್ಲಿ ಯುವಜನತೆಯ ಹೆಸರುಗಳು ಹೆಚ್ಚಿವೆ, ಈ ವಯಸ್ಸಿನಲ್ಲಿ ಯಾವುದಾದರೂ ಕೇಸ್ ದಾಖಲಾದರೆ ಜೀವನದಲ್ಲಿ ಸರ್ಕಾರಿ ನೌಕರಿ ಸೇರಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಭಾವಿ ಪ್ರಾಚಾರ್ಯ ಪ್ರೊ. ಜಿ.ಟಿ.ಭಟ್ ಇಂದು ಯುವಜನತೆ ತಮ್ಮ ನಿಷ್ಕಾಳಜಿಯಿಂದ ದುಶ್ಚಟಗಳಿಗೆ ಬಲಿಯಾಗಿ ಜೀವನಕ್ಕೆ ಕಾಲಿಡುವ ಪೂರ್ವದಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ನಿಮ್ಮ ಮುಂದೆ ಉತ್ತಮವಾದ ಜೀವನವಿದೆ ಜೀವನ ಉತ್ತಮಗೊಳಿಸುವ ಎಲ್ಲಾ ಸಶಕ್ತತೆಯು ನಿಮ್ಮ ಕೈಯಲ್ಲಿಯೇ ಇದೆ ಅದನ್ನ ಹಾಳು ಮಾಡಿಕೊಳ್ಳಬಾರದು. ಉತ್ತಮ ಜೀವನವನ್ನು ನಡೆಸಬೇಕು ಬಾಳಿ ಬದುಕಬೇಕಾದ ನೀವು ನಿಮ್ಮ ಭವಿಷ್ಯವನ್ನ ನೀವೇ ಹಾಳು ಮಾಡಿಕೊಳ್ಳುತ್ತಿದ್ದೀರಿ ಮೊಬೈಲ್ ಗೀಳು ಡ್ರಗ್ಸ್ ನಂತಹ ಚಟಗಳು ಕ್ಷಣಿಕ ಖುಷಿಯನ್ನು ನೀಡುತ್ತವೆ ಅವುಗಳಿಂದ ದೂರವಿರಿ ಎಂದರು. ಮಾರುಕಟ್ಟೆ ಠಾಣೆಯ ಎಎಸ್ಐ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.