ಶಿರಸಿ: ಗ್ರಾಮ ಪಂಚಾಯತ ಸೋಂದಾ, ಶ್ರೀ ಸೋಂದಾ ವಾದಿರಾಜ ಮಹಾಸಂಸ್ಥಾನ, ಜಾಗೃತ ವೇದಿಕೆ ಸೋಂದಾ (ರಿ.), ಶ್ರೀ ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಸೋಂದಾ, ಮಾತೃ ಮಂಡಳಿ ಸೋಂದಾ, ಶಾಲಾ ಅಭಿವೃದ್ಧಿ ಸಮಿತಿ ಸ.ಕಿ.ಪ್ರಾ. ಶಾಲಾ ವಾದಿರಾಜ ಮಠ ಇವರುಗಳ ಸಂಯುಕ್ತಾಶ್ರಯದಲ್ಲಿ ಜಾಗತಿಕ ಪರಿಸರ ದಿನಾಚರಣೆ ಅಂಗವಾಗಿ “ಸಸ್ಯಾರೋಪಣ” ಹಾಗೂ ಮಕ್ಕಳಿಗೆ ವಿವಿಧ ಪರಿಸರ ಸಂಬಂಧಿಸಿದ ಸ್ಪರ್ಧೆಗಳನ್ನು ಜೂ.20, ಗುರುವಾರದಂದು ಸ.ಕಿ.ಪ್ರಾ.ಶಾಲೆ ವಾದಿರಾಜ ಮಠದಲ್ಲಿ ನಡೆಸಲಾಯಿತು.
ಮುಂಜಾನೆ 10 ಘಂಟೆಗೆ ಶಾಲಾ ಆವಾರದಲ್ಲಿ ಕಲ್ಪವೃಕ್ಷ ಸಸ್ಯಾರೋಪಣವನ್ನು ವಾದಿರಾಜ ಮಹಾಸಂಸ್ಥಾನದ ಪ್ರಧಾನ ವ್ಯವಸ್ಥಾಪಕ ಮಧುಸೂದನ ಪುತ್ತುರಾಯರು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರಕ್ಕೆ ಪೂರಕ ಸ್ಪರ್ಧೆ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. 12 ಘಂಟೆಗೆ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಜರುಗಿಸಲಾಯಿತು.
ಸಭಾಧ್ಯಕ್ಷರಾಗಿದ್ದ ಗ್ರಾ.ಪಂ. ಸೋಂದಾ ಅಧ್ಯಕ್ಷ ರಾಮಚಂದ್ರ ಹೆಗಡೆ ಹೊಸಗದ್ದೆ, ಇವರು ಮಾತನಾಡಿ ಸ್ಪರ್ಧೆಯ ಉದ್ದೇಶ ಮಕ್ಕಳಿಗೆ ಪರಿಸರದ ಬಗ್ಗೆ ಸಾಮಾನ್ಯ ತಿಳುವಳಿಕೆ ನೀಡುವುದು ಅವರ ರಜಾ ಅವಧಿಯಲ್ಲಿ ಪಾಲಕರು ತಮ್ಮ ಸುತ್ತಲಿನ ಪ್ರಕೃತಿಯ ಕುರಿತು ಮಾಹಿತಿ ನೀಡುವುದರೊಂದಿಗೆ ಸಸ್ಯಗಳ ಕುರಿತು ತಿಳುವಳಿಕೆ ನೀಡಬೇಕು. ಇದು ನಮ್ಮ ಮುಂದಿನ ಜನಾಂಗದವರಿಗೆ ಬಳುವಳಿಯಾಗಲಿದೆ. ಹಾಗೂ ಈ ನಾಡಿನ ಪರಿಸರ ಉಳಿಸುವಲ್ಲಿ – ನಾಡಿನ ರಕ್ಷಣೆಯಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದು ಕರೆ ಇತ್ತರು.
ಮುಖ್ಯ ಅತಿಥಿ ಸ್ಥಾನದಿಂದ ಗ್ರಾ.ಪಂ. ಸದಸ್ಯ ಮಂಜುನಾಥ ಭಂಡಾರಿ ಸ್ವರ್ಣವಲ್ಲೀ ಇವರು ಕಳೆದ ಜೂನ 5 ರಿಂದ ವಿಶ್ವಪರಿಸರ ದಿನಾಚರಣೆಯನ್ನು ಪ್ರಾರಂಭಿಸಿ ಜೂನ್ ಕೊನೆಯವರೆಗೆ ನಡೆಸಲಾಗುವುದು. ಇಂದು ಕಲುಷಿತ ನೀರು, ಮಣ್ಣಿನ ಸವಕಳಿಯೊಂದಿಗೆ ವಾತಾವರಣ ಹಾಳಾಗುತ್ತಿದೆ. ಅದನ್ನು ಉಳಿಸಬೇಕು. ಅಂದರೆ ನಾವು ಮರ-ಗಿಡಗಳನ್ನು ಬೆಳೆಸಿ ಸಮೃದ್ಧಿಗೊಳಿಸಬೆಕು. ಪ್ರಕೃತಿಯಲ್ಲಿ ಇರುವೆ ಹಾಗೂ ಆನೆ ಎಲ್ಲ ಪ್ರಾಣಿಗಳೊಂದಿಗೆ ಮಾನವರಿಗೂ ಸಮಾನ ಹಕ್ಕಿದೆ. ಅದನ್ನು ಎಲ್ಲರೂ ಬಳಸಿಕೊಳ್ಳೋಣ ಎಂದರು.
ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಈ ಸ್ಪರ್ಧೆಗಳು ಮಕ್ಕಳಲ್ಲಿ ಜಾಗೃತಿ ಉಂಟು ಮಾಡುವಲ್ಲಿ ಸಹಕಾರಿಯಾಗಿವೆ.ಇಂತಹ ಕೃಷಿಪೂರಕ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ನಮಗೆಲ್ಲ ಸಂತಸ ತಂದಿದೆ. ನಮ್ಮ ಮಕ್ಕಳು ಅತ್ಯುತ್ಸಾಹದಿಂದ ಇದರಲ್ಲಿ ಪಾಲ್ಗೊಂಡಿದ್ದು, ಮುಂದಿನ ದಿನಗಳಲ್ಲಿ ನಾವು ಪಾಲಕರೆಲ್ಲ ನಮ್ಮ ಮಕ್ಕಳಲ್ಲಿ ಪರಿಸರ ರಕ್ಷಣೆ ಜಾಗೃತಗೊಳಿಸಲು ಪ್ರಯತ್ನಿಸೋಣ. ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಈ ಪರಿಸರ ಉಳಿಸುವ ಜಾಗೃತಿ ಕಾರ್ಯದಲ್ಲಿ ನಾವೆಲ್ಲ ಕೈ ಜೋಡಿಸೋಣ ಎಂದರು.
ವಾದಿರಾಜ ಮಠ ಶಾಲಾ ಮಕ್ಕಳು ಪ್ರಾರ್ಥನೆಗೈದರು. ಜಾಗೃತ ವೇದಿಕೆಯ ಕಾರ್ಯಾಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯ ಸದಸ್ಯ ಗಂಗಾಧರ ಪರಾಂಜಪೆ ಸ್ವಾಗತಿಸಿದರು. ಸೋಂದಾ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಕುಮದ್ವತಿ ಗುಡಿಗಾರ ಹಾಗೂ ಶ್ರೀಮತಿ ಮಮತಾ ಜೈನ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಿಕ್ಷಕಿಯರಾದ ಶ್ರೀಮತಿ ಸುನಂದಾ ಹೆಗಡೆ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜಾಗೃತ ವೇದಿಕೆಯ ಕಾರ್ಯದರ್ಶಿ ಶ್ರೀಧರ ಹೆಗಡೆ ಗುಡ್ಡೇಮನೆ ಮತ್ತು ಸ.ಹಿ.ಪ್ರಾ. ಶಾಲೆಯ 6 ಮಕ್ಕಳು ಸ್ಪರ್ಧೆ ಚೆನ್ನಾಗಿ ನಡೆಯಲು ಸಹಕರಿಸಿದರು. ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿ ಚಿತ್ರಕಲಾ ನಿವೃತ್ತ ಶಿಕ್ಷಕ ಶಿವರಾಮ ಹೆಗಡೆ ಹಳೆಯೂರು (ಶಿರಸಿ) ಕಾರ್ಯನಿರ್ವಹಿಸಿದರು. ಕೊನೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುರುರಾಜ ಮೋಹನ ಚನ್ನಯ್ಯಾ ಬಾಳೇಜಡ್ಡಿ ಎಲ್ಲರಿಗೂ ವಂದನಾರ್ಪಣೆ ಮಾಡಿದರು.
ಬಾಕ್ಸ್
ನಾಲ್ಕು ಮತ್ತು ಐದನೇ ತರಗತಿಯ (ಹಿರಿಯರ ವಿಭಾಗ) ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
ಪ್ರಥಮ ಸ್ಥಾನ- ಪ್ರತೀಕಾ ಪಾಂಡುರಂಗ ದೇವಾಡಿಗ
ದ್ವಿತೀಯ ಸ್ಥಾನ – ವಾಣಿ ಅನಂತ ಮರಾಠಿ
ತೃತೀಯ ಸ್ಥಾನ – ರಕ್ಷಾ ಆನಂದ ದೇವಾಡಿಗ
ಒಂದರಿಂದ ಮೂರನೇ ತರಗತಿಯ ಮಕ್ಕಳಿಗೆ (ಕಿರಿಯರ ವಿಭಾಗ) ಅಭಿನಯ ಗೀತೆ ಸ್ಪರ್ಧೆ
ಪ್ರಥಮ ಸ್ಥಾನ- ಹರಿ ಗುರುರಾಜ ಆಚಾರ್ಯ
ದ್ವಿತೀಯ ಸ್ಥಾನ – ಧನ್ಯಾ ಗುರುರಾಜ ಚನ್ನಯ್ಯ
ತೃತೀಯ ಸ್ಥಾನ- ದಿಗಂತ ಪರಮೇಶ್ವರ ಮರಾಠಿ
ಅಂಗನವಾಡಿ ಮಕ್ಕಳಿಗೆ ತರಕಾರಿ ಗುರುತಿಸುವ ಸ್ಪರ್ಧೆ
ಪ್ರಥಮ ಸ್ಥಾನ- ಸುರಭಿ ಎಸ್ ಹೆರೇಕಲ್
ದ್ವಿತೀಯ ಸ್ಥಾನ -ಪ್ರಣವ್ ವೆಂಕಟರಮಣ ಹೆಗಡೆ.
ತೃತೀಯ ಸ್ಥಾನ -ಮಹೀಧರ ವ್ಯಾಸ ಉಪಾಧ್ಯಾಯ.