ಕಾರವಾರ: ಮಹಾತ್ಮ ಗಾಂಧಿ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ತಳಮಟ್ಟದಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ನಡುವೆ ಉತ್ತಮ ಸಮನ್ವಯತೆ ಇರಬೇಕು. ಪರಸ್ಪರ ಸಹಕಾರದಿಂದ ನಿಗದಿತ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವರ್ತರಾಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ ಹೇಳಿದರು.
ಅವರು ಗುರುವಾರ ಪ್ರಾದೇಶಿಕ ಅರಣ್ಯ ವಿಭಾಗದ ಕಛೇರಿಯ ಸಭಾ ಭವನದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕುರಿತು ಅರಣ್ಯ ಇಲಾಖೆಗೆ ತಾಂತ್ರಿಕ ತರಬೇತಿ ನೀಡುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ಸಭೆಯಲ್ಲಿ ಅರಣ್ಯ ಇಲಾಖೆಗೆ ಮನರೇಗಾ ಯೋಜನೆ ಬಗ್ಗೆ ತಾಂತ್ರಿಕ ವಿಷಯದ ಬಗ್ಗೆ ಕಾರ್ಯಾಗಾರ ನಡೆಸುವ ಅಗತ್ಯವಿದೆ ಎಂಬ ಅಹವಾಲು ಬಂದ ಹಿನ್ನೆಲೆ ಜಿಲ್ಲೆಯ ಆರು ಅರಣ್ಯ ವಲಯದ ಅಧಿಕಾರಿಗಳಿಗೆ ಐದು ವಿವಿಧ ಸ್ಥಳಗಳಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಇದರಿಂದ ತಾಂತ್ರಿಕ ವಿಷಯದ ಬಗ್ಗೆ ಹೆಚ್ಚಿನ ಜ್ಞಾನ ಪಡೆದು, ಯೋಜನೆ ಅನುಷ್ಠಾನಗೊಳಿಸಲು ಅನುಕೂಲವಾಗಲಿದೆ. ಕಾರವಾರದ ವಲಯದಿಂದ ಉತ್ತಮ ಸಹಕಾರ ದೊರಕಿದ್ದರಿಂದ ಭೀಮ್‌ಕೋಲ್ ದಂತಹ ಮಾದರಿ ಅಮೃತ ಸರೋವರ ನಿರ್ಮಿಸಲು ಸಾಧ್ಯವಾಯಿತು. ಅದರಂತೆ ಉಳಿದ ಕಾಮಗಾರಿಗಳಲ್ಲಿ ಸಹಕಾರ ನೀಡಿ, ಯೋಜನೆಯ ಯಶಸ್ಸಿಗೆ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾತನಾಡಿ, ಅರಣ್ಯ ಇಲಾಖೆ ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗದಿರುವುದಕ್ಕೆ ಕಾರಣ ಎನೆಂಬುದನ್ನು ಅರಿತು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ವ್ಯಾಪ್ತಿಯಲ್ಲಿರುವ ಫಾಲ್ಸ್, ಟ್ರೆಕ್ಕಿಂಗ್, ಪ್ರವಾಸಿ ತಾಣಗಳನ್ನು ಗುರುತಿಸಿ, ನರೇಗಾ ಅಡಿ ಅಭಿವೃದ್ಧಿ ಪಡಿಸುವ ಮೂಲಕ ಪರಿಸರ ಪ್ರವಾಸೋದ್ಯಮಕ್ಕೂ ನೆರವಾಗಬೇಕು. ತರಬೇತಿಯ ಸದುಪಯೋಗ ಪಡೆದು ಮುಂದಿನ ದಿನಗಳಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲುಮುಂದಾಗಿ ಎಂದುಹೇಳಿದರು.
ಕಾರ್ಯಾಗಾರದಲ್ಲಿ ಕಾರವಾರ ತಾಲೂಕು ಪಂಚಾಯತ್ ನರೇಗಾ ಸಹಾಯಕ ನಿರ್ದೇಶಕ ಸಂದೀಪ್ ಕೊತ್ತಾರ್ಕರ್ ಮನರೇಗಾ ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಅಂಕೋಲಾ ತಾಲೂಕು ಪಂಚಾಯತ್ ನರೇಗಾ ತಾಂತ್ರಿಕ ಸಂಯೋಜಕ ಅನಿಲ್ ಗಾಯತ್ರಿ ತಾಂತ್ರಿಕ ವಿಷಯಗಳ ಕುರಿತು, ಜಿಲ್ಲಾ ಎಮ್‌ಐಎಸ್ ಸಂಯೋಜಕ ಶಿವಾಜಿ ಬೊಬ್ಲಿ ಮತ್ತು ತಾಲೂಕು ಎಮ್‌ಆಯ್‌ಎಸ್ ಸಂಯೋಜಕಿ ವಿನೂತಾ ನಾಯ್ಕ್ ನರೇಗಾ ಎಮ್‌ಐಎಸ್ ಕುರಿತು, ಸೋಷಿಯಲ್ ಆಡಿಟ್ ತಾಲೂಕು ಸಂಯೋಜಕ ನಾಗರಾಜ ಹಬ್ಬು ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರು ಐಇಸಿ ವಿಷಯದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಈ ವೇಳೆ ಕ್ರಿಯಾ ಯೋಜನೆ ತಯಾರಿ, ಎಮ್‌ಐಎಸ್, ಎನ್‌ಎಮ್‌ಎಮ್‌ಎಸ್, ಆಧಾರ್ ಪೇಮೆಂಟ್, ಜಿಯೋ ಟ್ಯಾಗಿಂಗ್, ಸೋಷಿಯಲ್ ಆಡಿಟ್, ಕಡತ ನಿರ್ವಹಣೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಕರೀಂ ಅಸಾದಿ, ಸಾಮಾಜಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಆರ್‌ಎಫ್‌ಓ, ಡಿಆರ್‌ಎಫ್‌ಓ, ಸೆಕ್ಷನ್ ಡಿಆರ್‌ಎಫ್‌ಓ, ಎಡಿ, ಡಿಎಮ್‌ಆಯ್‌ಎಸ್, ಡಿಆಯ್‌ಇಸಿ, ಟಿಸಿ, ಟಿಎಇ ಉಪಸ್ಥಿತರಿದ್ದರು.