ಕಾರವಾರ: ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗ ಅತ್ಯಂತ ಸಹಾಯಕಾರಿಯಾಗಿದ್ದು, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಆರೋಗ್ಯ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ, ಶಿಕ್ಷಣ ಇಲಾಖೆ, ನಗರಸಭೆ ಎನ್.ಸಿ.ಸಿ,ಎನ್.ಎಸ್.ಎಸ್, ರೆಡ್ ಕ್ರಾಸ್, ರೋಟರಿ ಕ್ಲಬ್ ಜಿಲ್ಲಾ ನೌಕಕರ ಸಂಘ ಹಾಗೂ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 10 ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ಅಯೋಜಿಸಲಾದ ಯೋಗ ನಡಿಗೆ ಜಾಥಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಪತಂಜಲಿ ಮಹರ್ಷಿಗಳು ಯೋಗದ ಮಹತ್ವವನ್ನು ಕ್ರಿ.ಶ 5 ಶತಮಾನದಲ್ಲಿ ತಿಳಿಸಿಕೊಟ್ಟರು. ಮನುಷ್ಯನಿಗೆ ಸ್ವಾಭಾವಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವಂತ ದೊಡ್ಡ ಔಷಧಿ ಯೋಗವಾಗಿದೆ. ಹಿಂದಿನ ಕಾಲದಲ್ಲಿ ಯೋಗ ಮತ್ತು ಧ್ಯಾನವನ್ನು ಮಾಡಿಕೊಂಡು ಆಸ್ಪತ್ರೆಗೆ ಹೋಗದೆ ನೂರು ವರ್ಷಗಳ ಕಾಲ ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದರು ಇಂದಿನ ಕಾಲದಲ್ಲಿ ಆಸ್ಪತ್ರೆಗೆ ಹೋಗದೇ ಇರುವವರು ಯಾರು ಇಲ್ಲ . ಆದ್ದರಿಂದ ಯೋಗವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ , ಪ್ರತಿನಿತ್ಯ ಮಾಡುವುದರ ಮೂಲಕ ಆರೋಗ್ಯದ ಸ್ವಾಸ್ಥವನ್ನು ಕಾಪಾಡಿಕೊಳ್ಳಬೇಕು ಎಂದರು.
ಮನುಷ್ಯನಿಗೆ ನೈಸರ್ಗಿಕವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೊಡ್ಡ ಔಷಧಿ ಯೋಗ ಎಂದರೇ ತಪ್ಪಿಲ್ಲಾ, ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ 10 ದಿವಸದ ಯೋಗೋತ್ಸವ ಆಚರಣೆಯೊಂದಿಗೆ ಯೋಗದ ಮಹತ್ವವನ್ನು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಸಾರ್ವಜನಿಕರಿಗೆ ಆಯುಷ್ ಇಲಾಖೆ ವತಿಯಿಂದ ಯೋಗಭ್ಯಾಸವನ್ನು ಹೇಳಿಕೊಡಲಾಗುತ್ತಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ ಹೇಳಿದರು.
ಯೋಗಾ ನಡಿಗೆ ಜಾಥಾವು ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡು ಕೋರ್ಟ್ ರಸ್ತೆ, ಸುಭಾಸ್ ಸರ್ಕಲ್, ಸವಿತಾ ಸರ್ಕಲ್ ಮೂಲಕ ಜಿಲ್ಲಾ ಆಯುಷ್ ಇಲಾಖೆಯಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಜಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು, ವಿದ್ಯಾಥಿಗಳು, ಸಾರ್ವಜನಿಕರು, ಭಾಗವಹಿಸಿದ್ದರು.