ದಾಂಡೇಲಿ: ನಗರದ ಹಳಿಯಾಳ ರಸ್ತೆಯಲ್ಲಿ ಬರುವ ಮೂರು ನಂಬರ್ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಅಕ್ರಮವಾಗಿ ಕೂಡಿಟ್ಟಿದ್ದ 22 ಜಾನುವಾರುಗಳ ಪೈಕಿ ಐದು ಕರುಗಳನ್ನು ಗೋಶಾಲೆಗೆ ಕಳುಹಿಸಿ ಉಳಿದಿರುವ 17 ಗೋವುಗಳ ರಕ್ಷಣೆಗೆ ಕಾನೂನು ಬದ್ಧವಾಗಿ ಕ್ರಮವನ್ನು ಕೈಗೊಳ್ಳಬೇಕೆಂದು ನಗರದಲ್ಲಿ ಗೋ ಸಂರಕ್ಷಣಾ ಸಮಿತಿಯು ಆಗ್ರಹಿಸಿದೆ.
ಮಂಗಳವಾರ ನಗರದಲ್ಲಿ ಗೋ ಸಂರಕ್ಷಣ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು ಮಾಧ್ಯಮದ ಜೊತೆ ಮಾತನಾಡಿದರು. ಮೊನ್ನೆ ದಿನ ಅಕ್ರಮವಾಗಿ ಜಾನುವಾರುಗಳನ್ನು ಕಟ್ಟಿಟ್ಟಿರುವ ಬಗ್ಗೆ ಹಿಂದುಪರ ಸಂಘಟನೆಯ ಕಾರ್ಯಕರ್ತರಾಗಿ ಗೋ ಸಂರಕ್ಷಣಾ ಸಮಿತಿಯು ಆಗ್ರಹವನ್ನು ಮಾಡಿತ್ತು. ನಮ್ಮ ಆಗ್ರಹದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು 22 ಗೋವುಗಳಿದೆ ಎಂದು ಹೇಳಿ ಅದರಲ್ಲಿ ಐದು ಕರುಗಳನ್ನು ಗೋ ಶಾಲೆಗೆ ಕಳುಹಿಸಿ ಉಳಿದ 17 ಗೋವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರು. ಆ ನಿಟ್ಟಿನಲ್ಲಿ 17 ಗೋವುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಇಂದು ಪಶುವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡು ಆನಂತರ ಪೊಲೀಸ್ ವೃತ್ತ ನಿರೀಕ್ಷಕರನ್ನು ಭೇಟಿಯಾಗಿ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಈ ಸಂದರ್ಭದಲ್ಲಿ ಸಿ.ಪಿ.ಐ ಭೀಮಣ್ಣ ಸೂರಿ ಅವರಲ್ಲಿ 17 ಗೋವುಗಳ ರಕ್ಷಣೆಗೆ ಕಾನೂನಾತ್ಮಕವಾಗಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇವೆ ಎಂದು ವಾಸುದೇವ ಪ್ರಭು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರೋಷನ್ ನೇತ್ರಾವಳಿ, ದಯಾನಂದ ಮರಾಠೆ, ಲಿಂಗಯ್ಯ ಪೂಜಾರ್, ದಶರಥ ಬಂಡಿವಡ್ಡರ, ರವಿ ಅರ್ಮುಗಂ, ರಮೇಶ ಹೊಸಮನಿ, ಅಶೋಕ್ ಬ್ಯಾಳಿ, ಗಣೇಶ ಶೇಟ್ ಮೊದಲಾದವರು ಉಪಸ್ಥಿತರಿದ್ದರು.