ಸಿದ್ದಾಪುರ: ಯಕ್ಷಗಾನ ಕಲೆ ನಮ್ಮ ಜೀವನದ ಭಾಗವಾಗಬೇಕು ಹಾಗೂ ಕಲೆಯ ಅಭಿವೃದ್ಧಿಗಾಗಿ ಶ್ರಮಿಸುವ ಗುಣವನ್ನು ಹೊಂದಿರಬೇಕು. ಕಲೆಯ ಕುರಿತಾದ ಪ್ರೀತಿ ಬಹುಮುಖ್ಯ. ದೈನಂದಿನ ಜೀವನದಲ್ಲಿ ಕಲೆಗಾಗಿ ನಮ್ಮ ಸಮಯವನ್ನು ತೊಡಗಿಸಿಕೊಳ್ಳಬೇಕು ಎಂದು ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ತಾಲೂಕಿನ ಕವಲಕೊಪ್ಪ ಸಿದ್ಧಿವಿನಾಯಕ ದೇವಾಲಯದ ಸಭಾಂಗಣದಲ್ಲಿ ಬೆಳಸಲಿಗೆ ಯಕ್ಷಕಲಾ ಪ್ರತಿಷ್ಠಾನ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿದ್ದ ಮುಂಗಾರು ಯಕ್ಷಸಂಭ್ರಮವನ್ನು ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.ಬೆಳಸಲಿಗೆ ಗಣಪತಿ ಹೆಗಡೆ ಅವರು 28ಕ್ಕಿಂತ ಹೆಚ್ಚಿನ ಯಕ್ಷಗಾನ ಪ್ರಸಂಗವನ್ನು ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದವರಾಗಿದ್ದಾರೆ ಎಂದು ಹೇಳಿದರು.
ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ ಬೆಳಸಲಿಗೆ ಅವರ ಕಲಾಸೇವೆ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ. ಜಿಲ್ಲೆಯ ಬೇರೆ ಬೇರೆ ಊರುಗಳಲ್ಲಿ ಅವರ ಕಲಾತ್ಮಕ ಪ್ರಯೋಗಗಳನ್ನು ಪ್ರದರ್ಶಿಸುವುದರ ಮೂಲಕ ಯಕ್ಷಸಾಹಿತಿಗೆ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು.
ಪ್ರಮುಖರಾದ ಎನ್.ವಿ. ಹೆಗಡೆ ಮುತ್ತಿಗೆ, ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಅಧ್ಯಕ್ಷತೆವಹಿಸಿದ್ದರು.
ಬಿದ್ರಕಾನ ಗ್ರಾಪಂ ಅಧ್ಯಕ್ಷೆ ಶಾಮಲಾ ಗೌಡ, ಯಕ್ಷಗಾನ ಪೋಷಕ ಅಶೋಕ ಹೆಗಡೆ ಹಿರೇಕೈ ಮಾತನಾಡಿದರು.
ಕಾತ್ಯಾಯನಿ ಹೆಗಡೆ ಸ್ವಾಗತಿಸಿದರು. ಗೀತಾ ಹೆಗಡೆ ಬೆಳಸಲಿಗೆ ವಂದಿಸಿದರು.ಸುಜಾತಾ ದಂಟಕಲ್ ನಿರ್ವಹಿಸಿದರು.
ನಂತರ ನಡೆದ ಹಿಮ್ಮೇಳ ವೈಭವದಲ್ಲಿ ಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ಮಾಧವ ಭಟ್ಟ ಕೊಳಗಿ,ಗಿರೀಶ ಹೆಗಡೆ ಗೊದ್ಲಬೀಳು ಉತ್ತಮವಾಗಿ ರಂಜಿಸಿದರು. ಅವರಿಗೆ ಮದ್ದಳೆಯಲ್ಲಿ ಶರತ್ ಹೆಗಡೆ ಜಾನಕೈ, ಮಂಜುನಾಥ ಹೆಗಡೆ ಗುಡ್ಡೆದಿಂಬ ಹಾಗೂ ಚಂಡೆಯಲ್ಲಿ ಕು.ಶ್ರೀರಮಣ ಭಟ್ಟ ಮುರೂರು, ಕು.ಶ್ರೀವತ್ಸ ಹೆಗಡೆ ಗುಡ್ಡೆದಿಂಬ ಉತ್ತಮವಾಗಿ ಸಾಥ್ ನೀಡಿ ರಂಜಿಸಿದರು.