ಸಿದ್ದಾಪುರ: ಸರ್ಕಾರದಿಂದ ಕೃಷಿಕರಿಗೆ ಸಿಗುವ ಎಲ್ಲ ಸೌಲಭ್ಯಗಳಿಗೂ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮತ್ತು ಪ್ರೂಟ್ಸ್ ಮತ್ತು ಐಡಿ ಪಡೆಯುವುದು ಕಡ್ಡಾಯ. ಅದರೆ ಸರ್ವರ್ ಸಮಸ್ಯೆ ಸೇರಿದಂತೆ ಹಲವು ಕುಂಟು ನೆಪ ಹೇಳುತ್ತ ತಾಲೂಕಿನ ಅಧಿಕಾರಿಗಳು ರೈತರಿಗೆ ಪ್ರೂಟ್ಸ್ ಐಡಿ ಮಾಡಿಕೊಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಹೊಸೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಪಶು ವೈದ್ಯಕೀಯ ಇಲಾಖೆಗಳಲ್ಲಿ ಪ್ರೂಟ್ಸ್ ಐಡಿ ಮಾಡಿಸಲು ರೈತರಿಗೆ ಅವಕಾಶ ಇದೆ. ನಾಲ್ಕೈದು ಇಲಾಖೆಗಳಲ್ಲಿ ಅವಕಾಶ ಇರುವುದನ್ನೇ ನೆಪ ಮಾಡಿಕೊಂಡ ಕೆಲವು ಅಧಿಕಾರಿಗಳು ಸರ್ವರ್ ಡೌನ್, ಒಪಿಟಿ ಬರುತ್ತಿಲ್ಲ ಎಂಬ ಕುಂಟು ನೆಪ ಹೇಳುತ್ತ ಇಲಾಖೆಯಿಂದ ಇಲಾಖೆಗೆ ರೈತರನ್ನು ಅಲೆದಾಡಿಸುತ್ತ ಅವರನ್ನು ಹೈರಾಣಾಗಿಸುತ್ತಿದ್ದಾರೆ.
ಸರ್ಕಾರದಿಂದ ರೈತರಿಗೆ ಬೆಳೆಸಾಲ ಕೊಡುತ್ತಿರುವ ಈ ಸಮಯದಲ್ಲಿ ಪ್ರೂಟ್ಸ್ ಐಡಿ ಇಲ್ಲದ ಕಾರಣಕ್ಕಾಗಿ ರೈತರಿಗೆ ಬೆಳೆಸಾಲ ಸಿಗುತ್ತಿಲ್ಲ. ಹತ್ತಾರು ಸಲ ಒಂದೇ ಕೆಲಸಕ್ಕಾಗಿ ಅಲೆದಾಡುವುದು ಮಳೆಗಾಲದ ಪ್ರಾರಂಭದ ಈ ಸಮಯದಲ್ಲಿ ಕೃಷಿಕರಿಗೆ ತೊಂದರೆ ಆಗುತ್ತಿದೆ. ಅಲ್ಲದೇ ರೈತರಿಗೆ ಯಾವ ಇಲಾಖೆಯಿಂದ ಸರಿಯಾದ ಸ್ಪಂದನೆಯೂ ಸಿಗುತ್ತಿಲ್ಲ.
ಈ ಕುರಿತು ಶಾಸಕರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ.