ಸೊಳ್ಳೆ ಕಾಟಕ್ಕೆ ರೋಸಿ ಹೋದ ಜನತೆ : ತುರಿಸಿಕೊಳ್ಳುವುದರಲ್ಲೇ ಕಾಲ ಹರಣ
ಹೊನ್ನಾವರ : ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಮಳೆಯಾಗುತ್ತಿದ್ದು, ಬೇಸಿಗೆಯ ಬಿಸಿಲಿಗೆ ಬಸವಳಿದಿದ್ದ ಜನರಿಗೆ ಮಳೆ ತಂಪೆರೆಯುತ್ತಿದೆ. ಆದ್ರೆ, ಮಳೆಗಾಲ ಆರಂಭ ಆಗಿರುವುದು ಜನರ ಸಂತಸ ಎಷ್ಟು ಹೆಚ್ಚಿಸಿದೆಯೋ ಅಷ್ಟೇ ಆತಂಕವನ್ನು ಕೂಡ ಹೆಚ್ಚಿಸುತ್ತಿದೆ. ಅನೇಕ ಸಾಂಕ್ರಾಮಿಕ ರೋಗಗಳ ಆತಂಕ ಇದೀಗ ಎದುರಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವುದರಿಂದ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಪ್ರಕರಣಗಳು ಹೆಚ್ಚಾಗುವ ಆತಂಕ ಜನರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಕಾಡುತ್ತಿದೆ.
ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕ ಮೂಡಿಸಿದೆ. ತಾಲೂಕಿನಲ್ಲಿ 18 ಡೆಂಗ್ಯೂ ಜ್ವರ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಶಂಕಿತರನ್ನು ಗುರುತಿಸಿ ತಪಾಸಣೆ ನಡೆಸುವ ಕಾರ್ಯ ನಡೆಯುತ್ತಿದೆ.
ಕಳೆದ ಜನವರಿಯಿಂದ ಜೂನ್ ತಿಂಗಳ ತನಕ 18 ಪ್ರಕರಣಗಳು ದಾಖಲಾಗಿದ್ದು, ಪ್ರಾರಂಭದಲ್ಲಿ ಜನವರಿಯಿಂದ ಏಪ್ರಿಲ್ ತನಕ ಕಡಿಮೆ ಪ್ರಮಾಣದಲ್ಲಿತ್ತು, ಬೇರೆಕಡೆಯಿಂದ ಬಂದವರಲ್ಲಿ ಮಾತ್ರ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಮೇ ದಿಂದ ಜೂನ್ ತಿಂಗಳಲ್ಲಿ 14 ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಗರಬಸ್ತಿಕೇರಿ 5, ಚಿಕ್ಕನಕೋಡ 5, ಕೆಳಗಿನೂರು 3, ಮಂಕಿ 1 ಇವಿಷ್ಟು ಸದ್ಯ ದಾಖಲಾಗಿರುವ ಪ್ರಕರಣಗಳಾಗಿವೆ.
ಆರೋಗ್ಯ ಇಲಾಖೆ ಡೆಂಗ್ಯೂ ಜಾಗೃತಿಗೆ ಕ್ರಮ ಕೈಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಅನುಸರಿಸ ಬೇಕಾದ ಕ್ರಮದ ಬಗ್ಗೆ ತಿಳುವಳಿಕೆ ಹೇಳುತ್ತಿದ್ದಾರೆ. ಸೂಕ್ತವಾಗಿ ಕಸ ವಿಲೇವಾರಿ ಮಾಡಲು, ಇಲಾಖೆಯ ಆದೇಶದಂತೆ ಸ್ಥಳೀಯ ಗ್ರಾ. ಪಂ. ಕ್ಕೆ ಮಾಹಿತಿ ನೀಡುತ್ತಿದ್ದಾರೆ. ಗ್ರಾ. ಪಂ. ಪ. ಪಂ. ಕಸವಿಲೇವಾರಿ ವಾಹನದಲ್ಲಿ ಆಡಿಯೋ ಮೂಲಕ ಜಾಗೃತಿ ಪ್ರಚಾರ ನಡೆಸಲಾಗುತ್ತಿದೆ. ಇನ್ನೂ ಪ. ಪಂ. ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ವಾರದಲ್ಲಿ ಒಂದುದಿನ ಮನೆ ಭೇಟಿ ಮಾಡಿ ಮಾಹಿತಿ ನೀಡುತ್ತಿದ್ದರು. ಇದೀಗ ನಾಲ್ಕು ದಿನ ಎಲ್ಲರೂ ಗೂಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಡೆಂಗ್ಯೂ ಹೇಗೆ ಹರಡುತ್ತದೆ?
ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.
ತಡೆಗೆ ಜಾಗೃತಿ ವಹಿಸಬೇಕು :
ಮನೆಯ ಸುತ್ತ ಮುತ್ತ, ಟೈರ್, ಎಳ ನೀರು ಚಿಪ್ಪು, ನಿರುಪಯುಕ್ತ ಪಾತ್ರೆ ಇತ್ಯಾದಿಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಆಗುತ್ತಿದೆ. ಕೆಲವು ಹೋಟೆಲ್ ಇನ್ನಿತರ ವಾಣಿಜ್ಯ ಉದ್ಯಮ ಪ್ರದೇಶದಿಂದ ಬಿಡುವ ನೀರು ಸರಿಯಾಗಿ ಹರಿದು ಹೋಗದೆ ಅಲ್ಲಲ್ಲೇ ನಿಂತು ಸೊಳ್ಳೆ ಉತ್ಪತ್ತಿ ತಾಣ ಗಳಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಉಪಯೋಗಿಸಿದ ಕೆಲವು ವಸ್ತುಗಳನ್ನು ಕಂಡಕಂಡಲ್ಲಿ ಎಸೆದು ಅದರಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುತ್ತಿದೆ. ಪರಿಸರ ಸ್ವಚ್ಛ ವಾಗಿಡದೆ ಜನರ ನಿರ್ಲಕ್ಷದಿಂದ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತಿದೆ. ತಮ್ಮ ಮನೆ, ಊರು, ಸ್ಥಳೀಯ ಪ್ರದೇಶವನ್ನು ಸ್ವಚ್ಛ ವಾಗಿಡಿಸಿ, ಸೊಳ್ಳೆ ಉತ್ಪತ್ತಿ ಆಗದಂತೆ ಜಾಗೃತಿ ವಹಿಸುವುದರ ಜೊತೆಗೆ ಇಲಾಖೆ ಸೂಚಿಸುವ ಕ್ರಮಕ್ಕೆ ಸಹಕಾರ ಕೊಡಬೇಕಿದೆ.
ಈ ವರ್ಷ ಅತೀ ಹೆಚ್ಚು ಸೊಳ್ಳೆ ಕಾಟ :
ಇತ್ತೀಚಿನ ವರ್ಷಗಳಲ್ಲಿ ನೋಡಿದರೆ, ಈ ವರ್ಷ ಅತೀ ಹೆಚ್ಚು ಸೊಳ್ಳೆ ಕಾಟಕ್ಕೆ ಜನರು ಬೇಸತ್ತಿದ್ದಾರೆ. ಬೇಸಿಗೆಯಲ್ಲಿಯು ವಿಪರೀತ ಸೊಳ್ಳೆ ಜನರನ್ನು ಕಡಿದಿದೆ. ಮನೆ, ಅಂಗಡಿ, ಆಸ್ಪತ್ರೆ ಹೀಗೆ ಎಲ್ಲಾ ಕಡೆ, ಹಗಲು ರಾತ್ರಿ ಎನ್ನದೆ ಸಣ್ಣ ಮರಿಸೊಳ್ಳೆ ಜನರನ್ನು ಮುತ್ತಿಕೊಂಡಿದೆ. ಮೈಯೆಲ್ಲ ಗದ್ದಲೆ ಆಗುವಷ್ಟು ಸೊಳ್ಳೆ ಕಡಿತಕ್ಕೆ ಮಾನವ ತುತ್ತಾಗಿದ್ದಾನೆ. ರಾತ್ರಿ ಪ್ಯಾನ್ ಹಚ್ಚತೆ ಮಲಗುವ ಪರಿಸ್ಥಿತಿ ಇಲ್ಲವಾಗಿದೆ. ಮುಸುಕು ಹಾಕಿ ಮಲಗಿದರು ಗೂಯ್ ಎಂದು ಒಳ ಹೊಕ್ಕುತ್ತಿದೆ. ಒಂದೊಮ್ಮೆ ವಿದ್ಯುತ್ ಹೋದಲ್ಲಿ ಬೆಳಿಗ್ಗೆ ತನಕ ಜಾಗರಣೆ ಮಾಡುವಂತಾಗಿದೆ. ಒಟ್ಟಾರೆ ವಿಪರೀತ ಸೊಳ್ಳೆ ಕಾಟಕ್ಕೆ ಜನರಿಗೆ ತುರಿಸಿ ಕೊಳ್ಳುವುದೇ ಒಂದು ಕೆಲಸ ಆಗಿ ಬಿಟ್ಟಿದೆ.
ಜ್ವರದ ಲಕ್ಷಣ ಕಂಡುಬಂದಲ್ಲಿ, ಸ್ಥಳೀಯ ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆಶಾ ಕಾರ್ಯಕರ್ತರಿಗೆ ಮಾಹಿತಿ ನೀಡಲು ಮರೆಯಬೇಡಿ. ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ. ಸೊಳ್ಳೆ ಉತ್ಪತ್ತಿ ಆಗದಂತೆ ಜಾಗೃತಿ ವಹಿಸಿ.– ಡಾ. ಉಷಾ ಹಾಸ್ಯಗಾರ ತಾಲೂಕಾ ಆರೋಗ್ಯಧಿಕಾರಿ ಹೊನ್ನಾವರ