ಶಿರಸಿ: ಇಲ್ಲಿಯ ರಾಗಮಿತ್ರ ಪ್ರತಿಷ್ಠಾನವು ಸ್ವರ್ಣವಲ್ಲಿ ಸಂಸ್ಥಾನದ ಶ್ರೀಗಳವರ 33ನೇ ಪೀಠಾರೋಹಣದ ಅಂಗವಾಗಿ ಪ್ರತೀ ತಿಂಗಳ ಮೊದಲನೇ ಸೋಮವಾರದಂದು ಶಿರಸಿ ಯೋಗ ಮಂದಿರ ಸಭಾಭವನದಲ್ಲಿ ಸಂಘಟಿಸುತ್ತಿರುವ ಗುರು ಅರ್ಪಣೆ -ಕಲಾ ಅನುಬಂಧ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಹಾಗೂ ಮೂರ್ತಿ ತಯಾರಿಕಾ ಕಲಾವಿದ,ವೈದಿಕರೂ ಆದ ವಿವೇಕಾನಂದ ನಗರದ ಸರಸ್ವತಿ ಸಂಗೀತ ಶಾಲೆಯ ಪ್ರಾಚಾರ್ಯ ವಿದ್ವಾನ್ ವಿಘ್ನೇಶ್ವರ ಭಟ್ಟ ಕೊಡೆಗದ್ದೆಯವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ,ಸನ್ಮಾನ ನೆರವೇರಿಸಿ ಮಾತನಾಡಿದ ಶಿರಸಿ ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ಟ ಉಪಾಧ್ಯ ಮಾತನಾಡಿ ಎಲೆಮರೆಯ ಕಾಯಿಯಂತಿರುವ ಬಹುಮುಖ ಪ್ರತಿಭೆಯ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ. ಶಾಸ್ತ್ರೀಯ ಸಂಗೀತ ಎಲ್ಲ ಕಲಾ ಪ್ರಕಾರಗಳಿಗೆ ಮೂಲವಾಗಿದ್ದು, ಅದರ ಅಭ್ಯಾಸ ಹಾಗೂ ಆಲಿಸುವುದು ಜೀವನದ ಗುರಿ ಸಾಧನೆಗೆ ಮಹತ್ತರ ಮೆಟ್ಟಿಲುಗಳಾಗಿವೆ ಎಂದರು.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ. ವಿಘ್ನೇಶ್ವರ ಭಟ್ಟ ಕೊಡೆಗದ್ದೆ, ತನ್ನ ನಲವತ್ತು ವರ್ಷದ ಸಂಗೀತಾಭ್ಯಾಸ ಹಾಗೂ ಸಾಧನೆಯ ಸಂದರ್ಭದಲ್ಲಿ ಸಹಕರಿಸಿದವರನ್ನು ಸ್ಮರಿಸುತ್ತ ಕೃತಜ್ಞತೆಯನ್ನು ತಿಳಿಸಿದರು. ವೇದಿಕೆಯಲ್ಲಿ ರಾಗಮಿತ್ರ ಪ್ರತಿಷ್ಠಾನದ ಅಧ್ಯಕ್ಷ ಎಮ್.ಎನ್.ಹೆಗಡೆ ಮಾಳೇನಳ್ಳಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಆರ್.ಎನ್.ಭಟ್ಟ ಸುಗಾವಿ ವಹಿಸಿ ಶುಭ ಹಾರೈಸಿದರು.
ನಂತರ ನಡೆದ ಕಲಾ ಅನುಬಂಧ ಸಂಗೀತ ಕಾರ್ಯಕ್ರಮದಲ್ಲಿ ಆರಂಭಿಕವಾದ ಭಕ್ತಿ ಸಂಗೀತದಲ್ಲಿ ಶಿರಸಿ ಅಂಜನಾದ್ರಿಯ ಮಾರುತಿ ಭಜನಾ ಮಂಡಳಿಯ ಮಾತೆಯರು ಸುಂದರವಾಗಿ ಹಾಡಿ ಮೆರಗು ತಂದರು.ಅವರಿಗೆ ತಬಲಾದಲ್ಲಿ ಎಸ್.ಆರ್.ಹೆಗಡೆ ಹೆಗಡೆಕಟ್ಟಾ ಹಾಗೂ ಹಾರ್ಮೋನಿಯಂನಲ್ಲಿ ಎಸ್.ಆರ್.ಭಟ್ಟರವರು ಸಹಕರಿಸಿದರು. ತದನಂತರದಲ್ಲಿ ನಡೆದ ಕೊಳಲು ವಾದನದಲ್ಲಿ ಸಮರ್ಥ ಹೆಗಡೆ ತಂಗಾರಮನೆ ರಾಗ್ ಯಮನ್‌ನಲ್ಲಿ ಕೊಳಲು ವಾದನ ನುಡಿಸುತ್ತ ಒಂದು ಗಂಟೆಗೂ ಮಿಕ್ಕಿ ಮುರಳಿವಾದನದ ರಸದೂಟ ನೀಡುವಲ್ಲಿ ಯಶಸ್ವಿಯಾದರು. ತಂಗಾರಮನೆ ಕೊಳಲು ವಾದನಕ್ಕೆ ತಬಲಾ ವಾದಕ ಗಣೇಶ ಗುಂಡ್ಕಲ್ ಸಮರ್ಥವಾಗಿ ತಬಲಾ ಸಾಥ್ ನೀಡಿ ಸೈ ಎನಿಸಿಕೊಂಡರು.
ಮುಂದುವರೆದ ಸಂಗೀತ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ವಿ.ವಿಘ್ನೇಶ್ವರ ಭಟ್ಟ ಕೊಡೆಗದ್ದೆ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಆರಂಭದಲ್ಲಿ ರಾಗ್ ಮಾರುಭಿಹಾಗ್ ಅನ್ನು ವಿಸ್ತಾರವಾಗಿ ಹಾಡಿದರು. ರಾಗ್ ಘಟದೀಪನಲ್ಲಿ ಹಾಡಿ ನಂತರ ಭಕ್ತಿ ಪ್ರಧಾನ ಹಾಡನ್ನು ಹಾಡುತ್ತ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು. ಕೊಡೆಗದ್ದೆಯವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಹಾಗೂ ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಮತ್ತು ಹಿನ್ನೆಲೆಯ ತಂಬುರಾದಲ್ಲಿ ಮಮತಾ ಹಾಗೂ ಸಾಗರ್ ಅವರು ಸಹಕರಿಸಿದರು.
ಕಾರ್ಯಕ್ರಮ ಸಂಘಟಕ ವಿ.ಪ್ರಕಾಶ ಹೆಗಡೆ ಯಡಳ್ಳಿ ಸ್ವಾಗತಿಸಿದರೆ, ಗಿರಿಧರ ಕಬ್ನಳ್ಳಿ ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.