ಹೊನ್ನಾವರ: ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊನ್ನಾವರ ರೋಟರಿಯ ಮಾಜಿ ಅಧ್ಯಕ್ಷರಾದ ಮತ್ತು ಸಮಾಜ ಸೇವಕರಾದ ಮಹೇಶ್ ಕಲ್ಯಾಣಪುರವರು ಸಾವಿರ ವರ್ಷಗಳ ಕಾಲ ಹಾಳಾಗದ ಪ್ಲಾಸ್ಟಿಕ್ನ್ನು ದುರ್ಬಳಕೆ ಮಾಡಿಕೊಳ್ಳುತ್ತಾ, ಅದರ ಪರಿಣಾಮವನ್ನು ಮಾನವ ಸಮಾಜ ಎದುರಿಸಬೇಕಾಗಿದೆ. ಚಂದ್ರನ ಮೇಲೆ ನಿಂತು ನೋಡಿದರೆ ಸಮುದ್ರದ ಆಳದಲ್ಲಿ ಕಂಡುಬರುವ ಪ್ಲಾಸ್ಟಿಕ್ ಸಂಗ್ರಹ ಮನುಷ್ಯನ ಬೇಜವಾಬ್ದಾರಿಯ ಪ್ರತೀಕವಾಗಿದೆ ಎಂದು ಸ್ಲೈಡ್ ಗಳ ಮೂಲಕ ತೋರಿಸಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ದೃಷ್ಟಾಂತದ ಮೂಲಕ ವಿವರಿಸಿದರು. ನಾವು ಗಿಡಮರಗಳನ್ನು ಬೆಳೆಸಿ ಪೋಷಿಸಿದರೆ ಅದು ನಮ್ಮನ್ನು ನಿರಂತರವಾಗಿ ಪೋಷಿಸುತ್ತದೆ. ಪರಿಸರದ ಜೊತೆಗೆ ಬೆಳೆಯುವುದೇ ಮಾನವ ನೈಜ ಅಭಿವೃದ್ಧಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಾಧ್ಯಾಪಕರಾದ ಎಲ್. ಎಮ್. ಹೆಗಡೆ ಇವರು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬಾಲ್ಯದಲ್ಲಿ ಪರಿಸರವನ್ನು ರಕ್ಷಿಸುವ, ಪೋಷಿಸುವ ಕಾರ್ಯವನ್ನು ಹಮ್ಮಿಕೊಳ್ಳುತ್ತಾ ಪರಿಸರ ರಕ್ಷಣಾ ಭಾವವನ್ನ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ರೋಟರಿ ಇಂಟರ್ಯಾಕ್ಟ್ ಕ್ಲಬ್ ಮತ್ತು ಶರಾವತಿ ಎಕೋ ಕ್ಲಬ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ರೋಟರಿಯ ಕಾರ್ಯದರ್ಶಿಯಾದ ರಾಜೇಶ್ ನಾಯಕ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಡೆಂಗ್ಯೂ ಬಗ್ಗೆ ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ವೇದಿಕೆಯಲ್ಲಿರುವ ಸರ್ವರನ್ನು ಇಕೋ ಕ್ಲಬ್ ಸಂಚಾಲಕರಾದ ಶ್ರೀಕಾಂತ ಹಿಟ್ನಳ್ಳಿ ಸ್ವಾಗತಿಸಿದರು. ಶ್ರೀಮತಿ ಸೀಮಾ ಭಟ್ಟ ಸರ್ವರನ್ನು ವಂದಿಸಿದರು. ಶ್ರೀಮತಿ ಮುಕ್ತ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಎಲ್ಲ ಸಿಬ್ಬಂದಿಗಳು ಸಹಕರಿಸಿದರು.