ನಿಯಮ ಉಲ್ಲಂಘನೆ, ಕರ್ತವ್ಯ ಲೋಪ ಆರೋಪ | ಮತ್ತೆ ಹಾಲಿ ಅಧ್ಯಕ್ಷ ವೈದ್ಯರ ಬಣ ಒಂದು ಹೆಜ್ಜೆ ಮುಂದು
ಕಾರವಾರ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾಗಿರುವ ಶಿರಸಿಯ ಟಿಎಸ್ಎಸ್ ಸಂಸ್ಥೆಗೆ ವಿಶೇಷಾಧಿಕಾರಿ ನೇಮಕ ಮಾಡಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆವೆಂಬ ಆರೋಪದ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಉಪ ನಿಬಂಧಕ ಮಂಜುನಾಥ ಸಿಂಗ್ ಎಸ್ ಜಿ ಇವರನ್ನು ವಿಚಾರಣೆ ಬಾಕಿಯಿರಿಸಿ ಅಮಾನತ್ ಗೊಳಿಸಲಾಗಿದೆ ಎಂದು ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಇಲ್ಲಿನ ಟಿಎಸ್ಎಸ್ ಚುನಾವಣೆ ಕ್ರಮಬದ್ದವಾಗಿಲ್ಲ ಚುನಾವಣೆಯನ್ನೇ ರದ್ದು ಮಾಡಿ, ಆಡಳಿತ ಮಂಡಳಿಯನ್ನು ಅಮಾನತ್ತುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ತೀರ್ಪು ನೀಡಿದ್ದ ಉತ್ತರಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಮಂಜುನಾಥ ಸಿಂಗ್ ಎಸ್.ಜಿ ಅವರೇ ಈಗ ಅಮಾನತ್ ಆಗಿದ್ದಾರೆ. ಟಿಎಸ್ ಎಸ್ ಪ್ರಕರಣದ ತೀರ್ಪು ನೀಡುವಲ್ಲಿ ನಿಯಮ ಉಲ್ಲಂಘನೆ ಮತ್ತು ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಟ್ಟು ಹೋಗಿರುವಂಥ ಕರ್ತವ್ಯಲೋಪದ ಕಾರಣಕ್ಕೆ ಅವರ ಮೇಲೆ ಇಲಾಖೆ ವಿಚಾರಣೆ ಬಾಕಿಯಿರಿಸಿ ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.
ರಾಜ್ಯದ ಪ್ರತಿಷ್ಠಿತ ಅಡಿಕೆ ವಹಿವಾಟು ಸಂಸ್ಥೆಯಾದ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಗೆ 2023ರ ಅ.20 ರಂದು ಚುನಾವಣೆ ಟಿಎಸ್ಎಸ್ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಮತ ಎಂದು ಎಣಿಕೆಯ ನಂತರ ನಿರ್ದೇಶಕರ ಆಯ್ಕೆಯನ್ನು ಚುನಾಯಿತ ಚುನಾವಣಾಧಿಕಾರಿ ಘೋಷಣೆ ಮಾಡಿದ್ದರು. ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ತೀವ್ರ ಲೋಪದೋಷಗಳಾಗಿವೆ ಎಂದು ಸಂಘದ ಸದಸ್ಯರಾದ ಗಣಪತಿ ರಾಯ್ಸದ್ ಮತ್ತು ವಿನಾಯಕ ಭಟ್ಟ ಇವರು ಎರಡು ಚುನಾವಣಾ ದಾವಾ ಅರ್ಜಿಗಳನ್ನು ಸ.ಸಂ ಉಪ ನಿಬಂಧಕರು ಕಾರವಾರ ಇವರಲ್ಲಿ ದಾಖಲಿಸಿದ್ದರು. ಈ ಚುನಾವಣಾ ತಕರಾರು ದಾವೆಗೆ ಸಂಬಂಧಿಸಿದಂತೆ ಉಪ ನಿಬಂಧಕರು ದಾವೆಯ ಅಂತಿಮ ತೀರ್ಪನ್ನು ಮೇ 24ರಂದು ಪ್ರಕಟಿಸಿ ಚುನಾವಣೆಯನ್ನೇ ರದ್ದುಪಡಿಸಿ, ಆಡಳಿತಕ್ಕಾಗಿ ಸಿದ್ದಾಪುರದ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಇವರನ್ನು ವಿಶೇಷಾಧಿಕಾರಿಯಾಗಿ
ನೇಮಿಸಿದ್ದರು. ಹಾಲಿ ಆಡಳಿತದಲ್ಲಿರುವ ಆಡಳಿತ ಮಂಡಳಿಯ ಅಧಿಕಾರವನ್ನು ಶಿಕ್ಷಣಾಧಿಕಾರಿ ಪಡೆದುಕೊಂಡು ಆಡಳಿತ ಆರಂಭಿಸಿದರು. ಇದನ್ನು ಖಂಡಿಸಿ ಸಂಸ್ಥೆಯ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು. ಇನ್ನೇನು ಪ್ರತಿಭಟನೆ ಆರಂಭಿಸಬೇಕು ಎನ್ನುವಷ್ಟರಲ್ಲಿ ಉಪನಿಬಂಧಕರ ಆದೇಶಕ್ಕೆ ಬೆಳಗಾವಿಯ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರಿಂದ ತಡೆಯಾಜ್ಞೆ ನೀಡಲ್ಪಟ್ಟು ಮತ್ತೆ ಆಡಳಿತ ಮಂಡಳಿಯೇ ಅಧಿಕಾರ ವಹಿಸಿಕೊಂಡಿದ್ದೂ ಆಗಿದೆ.
ಈ ನಡುವೆ ಉಪ ನಿಬಂಧಕ ಮಂಜುನಾಥ ಸಿಂಗ್ ತಮ್ಮ ತೀರ್ಪಿನಲ್ಲಿ ,ಈ ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಮೇ 24ರ ಅಪರಾಹ್ನ 3 ಘಂಟೆಗೆ ಪ್ರಕಟಿಸಲಾಯಿತು ಎಂದು ಉಲ್ಲೇಖಿಸಿದ ವಿಷಯ ತೀವ್ರ ಚರ್ಚೆಗೊಳಗಾಗಿತ್ತು. ಏಕೆಂದರೆ ಮೇ. 22 ರಿಂದ ಅವರು ಕಚೇರಿಯಲ್ಲೇ ಇರಲಿಲ್ಲ. ಈ ವಿಷಯ ಜಿಲ್ಲಾಧಿಕಾರಿ ಗಮನಕ್ಕೆ ಬಂದು, ಜಿಲ್ಲಾಧಿಕಾರಿ ಉಪನಿಬಂಧಕರ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ಕಚೇರಿಯಲ್ಲಿ ಹೇಳಿಕೆ ಪಡೆದು ಪಂಚನಾಮೆ ಮಾಡಿಸಿ ಬೆಳಗಾವಿಯ ನಿಬಂಧಕರಿಗೆ ವರದಿ ಸಲ್ಲಿಸಿದ್ದರು. ತೀರ್ಪು ನೀಡುವ ದಿನಾಂಕದಂದು ಸೇವೆಯಲ್ಲಿರದೇ ಅಜ್ಞಾತ ಸ್ಥಳದಿಂದ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆಯ ರಾಜಕೀಯ ನಾಯಕರ ಕೈವಾಡವೇ ಹೆಚ್ಚು ಕಾಣುತ್ತಿದ್ದು, ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.