ಜೋಯಿಡಾ: ತಾಲೂಕಿನಲ್ಲಿ ನಡೆಯುತ್ತಿರುವ ಆಗು ಹೋಗುಗಳ ಬಗ್ಗೆ ಹಾಗೂ ನಡೆಯುತ್ತಿರುವ ಸತ್ಯ ಘಟನೆಗಳ ಬಗ್ಗೆ ವರದಿ ಮಾಡಿದಕ್ಕೆ ಗಿರೀಶ್ ಎನ್. ಎಸ್. ( ಹಸನ್ ಕೆ ಮೈದಿನ್)ಎಂಬುವನು ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಬೆದರಿಕೆ ಹಾಕಿದ ಬಗ್ಗೆ ಜೋಯಿಡಾ ತಹಶಿಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಜೋಯಿಡಾ ಪೋಲಿಸ್ ಠಾಣೆ ಮೂಲಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಲಾಯಿತು.
ಮನವಿಯಲ್ಲಿ ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಗಿರೀಶ್ ಎನ್.ಎಸ್. ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಬಗ್ಗೆ ವರದಿ ಮಾಡಿದ ಹಿನ್ನೆಲೆಯಲ್ಲಿ ನೀವು ಹೇಗೆ ಸುದ್ದಿ ಮಾಡಿದ್ದಿರಿ ? ನನ್ನ ಬಗ್ಗೆ ಸುದ್ದಿ ಮಾಡಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಎಂದು ಬೆದರಿಕೆ ಹಾಕಿದ್ದಾನೆ. ಸಮಾಜದ ಆಗುಹೋಗುಗಳ ಬಗ್ಗೆ ಸುದ್ದಿ ಮಾಡುವುದು ಪತ್ರಕರ್ತರ ಕೆಲಸವಾಗಿದ್ದು, ಈ ರೀತಿಯಾಗಿ ಪತ್ರಕರ್ತರ ಮೇಲೆ ಧಮಕಿ ಹಾಗೂ ಜೀವ ಬೆದರಿಕೆ ಹಾಕಿದರೆ ಪತ್ರಕರ್ತರು ಹೇಗೆ ಸುದ್ದಿಗಳನ್ನು ಮಾಡುವುದು, ಇಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ, ಜಿಲ್ಲಾ ಕಾರ್ಯದರ್ಶಿ ಅನಂತ ದೇಸಾಯಿ, ಜೋಯಿಡಾ ಸಂಘದ ಉಪಾಧ್ಯಕ್ಷ ಟಿ.ಕೆ ದೇಸಾಯಿ, ಕಾರ್ಯದರ್ಶಿ ಹರೀಶ್ ಭಟ್ಟ ಇದ್ದರು.
ಜಿಲ್ಲೆಯ ಹಲವೆಡೆ ಸಣ್ಣಪುಟ್ಟ ಸುದ್ದಿ ಸಂಗ್ರಹದ ನಡುವೆ ಸಾರ್ವಜನಿಕರಿಂದ ಪತ್ರಕರ್ತರಿಗೆ ಬೆದರಿಕೆ ಹಾಕುವ ಪ್ರಸಂಗಗಳು ಕಂಡುಬರುತ್ತದೆ .ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಪತ್ರಕರ್ತರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಬೇಕಾಗಿ ಆಗ್ರಹಿಸುತ್ತೇನೆ.
ಜಿ. ಸುಬ್ರಾಯ ಭಟ್ ಬಕ್ಕಳ ಜಿಲ್ಲಾಧ್ಯಕ್ಷ ಉತ್ತರ ಕನ್ನಡ