ಕಾರವಾರ: ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಸಂಗತಿ ಗೊತ್ತಾಗಿದ್ದು, ಆದರೆ, ಗ್ರಾಹಕರು ಯಾವುದೇ ರೀತಿಯಲ್ಲಿ ಭಯ ಪಡುವುದು ಬೇಡ. ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದೆ.
ಬ್ಯಾಂಕ್ ಮ್ಯಾನೇಜರ್‌ನಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಸಂಗತಿ ವರ್ಷಗಳ ಬಳಿಕ ಗೊತ್ತಾಗಿದೆ. ಅದೂ ಆ ಮ್ಯಾನೇಜರ್ ಮೃತಪಟ್ಟಿದ್ದರಿಂದ ಈ ಅವ್ಯವಹಾರ ಬೆಳಕಿಗೆ ಬಂದಿದೆ. ಜಿಲ್ಲೆಯ ಕಾರವಾರದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಈ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು, ಗುರುದಾಸ್ ಬಾಂದೇಕರ್ ಎನ್ನುವ ಮ್ಯಾನೇಜರ್ ಈ ಕೃತ್ಯ ಎಸೆಗಿದ್ದಾರೆಂದು ಗೊತ್ತಾಗಿದೆ.
ಸುಮಾರು 54 ಕೋಟಿ ರೂಪಾಯಿ ಅವ್ಯವಹಾರವನ್ನು ಈ ಮ್ಯಾನೇಜರ್ ಗುರುದಾಸ್ ಬಾಂದೇಕರ್ ಮಾಡಿದ್ದಾರೆನ್ನಲಾಗಿದೆ. ವರ್ಷದ ಹಿಂದೆ ಇವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಮ್ಮ ಸಂಬಂಧಿ ಹಾಗೂ ಪರಿಚಯಸ್ಥರ ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿಕೊಂಡು ಅವ್ಯವಹಾರ ಮಾಡಿದ್ದಾರೆ ಎಂದು ಈಗ ತಿಳಿದುಬಂದಿದೆ.
ಪ್ರತಿ ವರ್ಷ ಆಡಿಟ್‌ನಲ್ಲೂ ಗುರುದಾಸ್ ವಂಚನೆ ಮಾಡಿದ್ದರು. ಈಗ ಮ್ಯಾನೇಜರ್ ಮೃತಪಟ್ಟಿದ್ದರಿಂದ ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿದೆ. ಆಡಿಟ್ ಮಾಡಿಸುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಕಾರವಾರ ನಗರ ಠಾಣೆಯಲ್ಲಿ ಈ ಸಂಬಂಧ ಬ್ಯಾಂಕ್ ಆಡಳಿತ ಮಂಡಳಿ ದೂರು ನೀಡಿದೆ.
ಈ ನಡುವೆ ಅವ್ಯವಹಾರದ ಸುದ್ದಿ ಎಲ್ಲೆಡೆ ಹರಡಿದ್ದರಿಂದ ಗ್ರಾಹಕರು ಆತಂಕಗೊಂಡಿದ್ದಾರೆ. ಬ್ಯಾಂಕ್ ದಿವಾಳಿಯಾಗಿದೆ ಎಂದು ತಮ್ಮ ಖಾತೆಯಲ್ಲಿಟ್ಟಿದ್ದ ಹಣವನ್ನು ವಾಪಸ್ ಪಡೆಯಬೇಕು ಎಂದು ಗ್ರಾಹಕರು ಮುಗಿಬಿದ್ದಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಆಡಳಿತ ಮಂಡಳಿಯು, ಗ್ರಾಹಕರ ಹಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.