Slide
Slide
Slide
previous arrow
next arrow

ಪ್ರವಾಸೋದ್ಯಮ ವಿದ್ಯಾರ್ಥಿಗಳ ಶ್ರೀ ಕ್ಷೇತ್ರ ಧಾರೇಶ್ವರ ಭೇಟಿ: ಅಧ್ಯಯನ ವರದಿ ರಚನೆ

300x250 AD

ಕುಮಟಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಮಟಾ ಇದರ ಇತಿಹಾಸ ವಿಭಾಗ, ಇತಿಹಾಸ ಸಂಘ, ಹಾಗೂ ಹಳೇಯ ವಿದ್ಯಾರ್ಥಿಗಳ ಸಂಘ ಮತ್ತು ಐಕ್ಯೂಎಸಿ ಇವರ ಸಹಕಾರದಿಂದ ಪ್ರವಾಸೋದ್ಯಮ ವಿದ್ಯಾರ್ಥಿಗಳ ಪ್ರಾತ್ಯಕ್ಷಿಕೆಗಾಗಿ ಕುಮಟಾದ ಧಾರೇಶ್ವರರ ದೇವಾಲಯಕ್ಕೆ ಇತ್ತೀಚೆಗೆ ಒಂದು ದಿನದ ಕ್ಷೇತ್ರ ಭೇಟಿಯನ್ನು ಕೈಗೊಳ್ಳಲಾಯಿತು. ವಿದ್ಯಾರ್ಥಿಗಳು ಧಾರೇಶ್ವರ ದೇವಾಲಯದ ಐತಿಹಾಸಿಕ ಹಿನ್ನೆಲೆ, ಕಲೆ, ವಾಸ್ತುಶಿಲ್ಪ, ಶಾಸನಗಳು, ವೀರಗಲ್ಲುಗಳು ಮುಂತಾದವುಗಳ ಬಗ್ಗೆ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿದ್ದರು.

ಶಾಸನ ತಜ್ಞ ಶ್ಯಾಮ ಸುಂದರ ಗೌಡ ಅಂಕೋಲ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರಮೋದ್ ಆರ್ ಹೆಗಡೆ ಮತ್ತು ಉಪನ್ಯಾಸಕರಾದ ಗೋಪಾಲಕೃಷ್ಣ ರಾಯ್ಕರ್ ಹಾಗೂ ನವೀನ್ ಹುಣಸೂರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಆರಂಭದಲ್ಲಿ ಧಾರೇಶ್ವರ ದೇವಾಲಯದ ಹೊರಗೆ ಮುಂಭಾಗದಲ್ಲಿರುವ 4 ವೀರಗಲ್ಲುಗಳ ಬಗ್ಗೆ ಸೂಕ್ಷ್ಮವಾಗಿ ಶ್ಯಾಮ ಸುಂದರ ಗೌಡ ತಿಳಿಸಿದರು. ಈ ವೀರಗಲ್ಲುಗಳನ್ನು 3 ಅಡ್ಡಪಟ್ಟಿಕೆಗಳಲ್ಲಿ ಕೆತ್ತಲಾಗಿದ್ದು, ಇದರ ಶಿರೋ ಭಾಗವನ್ನು ಲಲಾಟ, ಮೇಲ್ಬಾಗದ ರಾಕ್ಷಸನ ಮುಖಕ್ಕೆ ಕೀರ್ತಿಮುಖ ಎಂದು ಕರೆಯುತ್ತಾರೆ. ನಾಲ್ಕು ವೀರಗಲ್ಲುಗಳಲ್ಲಿ ಒಂದು ಅತ್ಯಂತ ದೊಡ್ಡದಾಗಿದ್ದು ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ. ಅತ್ಯಂತ ಕೆಳಸ್ತರದಲ್ಲಿ ಆರಂಭಿಕ ಅಡ್ಡ ಪಟ್ಟಿಕೆಯಲ್ಲಿ ಯುದ್ಧದ ಚಿತ್ರಣವಿದ್ದು ಆ ಯುದ್ಧದ ಮಡಿದ ವೀರರನ್ನು ಕೊಂಡೊಯ್ಯಲು ಯಕ್ಷಕನ್ನಿಕೆಯರು ಆಗಮಿಸಿರುವುದು, ಪಂಚ ವಾದ್ಯಗಳನ್ನು ನುಡಿಸುತ್ತಾ ಸ್ವರ್ಗಕ್ಕೆ ಕೊಂಡೊಯ್ಯುವ ಸೂಕ್ಷ್ಮ ಕೆತ್ತನೆಗಳು ಎರಡನೇ ಸ್ತರದ ಅಡ್ಡಪಟ್ಟಿಕೆಯಲ್ಲಿದೆ. ಮೂರನೇ ಸ್ತರದ ಅಡ್ಡಪಟ್ಟಿಕೆಯಲ್ಲಿ ದೇವತೆಗಳ ಆವಾಸಸ್ಥಾನ ಸ್ವರ್ಗಸ್ತರದ ಬಗ್ಗೆ ಚಿತ್ರಿಸಲಾಗಿದೆ. ಚಂದಾವರ ಕದಂಬರ ಶಾಸ್ತ್ರಗಳಲ್ಲಿ ಕಾಮದೇವ 2 ಉಲ್ಲೇಖವಿದ್ದು ಈ ವೀರಗಲ್ಲು ಅರಸ ಎರಡನೇ ಕಾಮದೇವನ ಕಾಲದ್ದು ಎಂದು ತಿಳಿಸಿದರು.

ಕ್ರಿಸ್ತಶಕ 1083ರ (11ನೇ ಶತಮಾನ) ಚಂಡಬ್ಬರಸಿ ಧಾರೇಶ್ವರ & ಭೀಮೇಶ್ವರ ದೇವರಿಗೆ ನೀಡಿದ ದಾನವನ್ನು ಉಲ್ಲೇಖಿಸುವ ಹಾಗೂ ಹಾಡುವಳ್ಳಿ ಸಾಳ್ವ ದೊರೆ ಕೃಷ್ಣದೇವರಾಯ ಧಾರಾನಾಥದೇವರ ಅಂಗಭೋಗಕ್ಕೆಂದು ದಾನ ಮಾಡಿದ ವಿವರಗಳನ್ನುಳ್ಳ ಹಾಗೂ ಅದರ ಮೇಲಿನ ಶಿಲ್ಪಗಳ ಸಹಿತ ಅಧ್ಯಯನ ಮಾಡಲಾಯಿತು. ಈ ಶಾಸನ ಹೈವಣ್ಣರಸರ ದಾನಶಾಸನವಾಗಿದ್ದು ಹೈವಣ್ಣರಸರೆ ಪಕ್ಕಿ ಚಂಡಬ್ಬರಸಿ / ಚಟ್ಟಬ್ಬರಸಿ ಧಾರೇಶ್ವರದಲ್ಲಿ ಎರಡು ಅಗ್ರಹಾರಗಳಾದ ಧಾರೇಶ್ವರ ಮತ್ತು ಭೀಮೇಶ್ವರಗಳನ್ನು ನಿರ್ಮಿಸಿ ದಾನ ನೀಡಿದ ಉಲ್ಲೇಖವನ್ನು ಶ್ಯಾಮಸುಂದರ ಗೌಡ ಮತ್ತು ಪ್ರಮೋದ್ ಹೆಗಡೆ ನೀಡಿದರು.

300x250 AD

ಮೂರ್ತಿ ಶಿಲ್ಪಗಳಲ್ಲಿ ದೇವಾಲಯದ ಮುಂಭಾಗದಲ್ಲಿರುವ ಶುದ್ಧ ತೀರ್ಥ ಪುಷ್ಕರಣೆಯಲ್ಲಿ ಯೋಗ ನರಸಿಂಹ ಸಿದ್ದ ಸಂತ ದಶಭೂಜ ಗಣಪತಿ ಮತ್ತು ಹನುಮಂತನ ವಿಗ್ರಹಗಳ ಅಧ್ಯಯನ ನಡೆಸಲಾಯಿತು. ದೇವಾಲಯದ ದೇವಕೋಶಗಳಲ್ಲಿರುವ ಸರಸ್ವತಿ ಮತ್ತು ಗಣಪತಿ ಮೂರ್ತಿಗಳನ್ನು ಅಧ್ಯಯನ ಮಾಡಿ ಪಂಚಾಯಿತನ ಪರಂಪರೆ ಕುರಿತಾಗಿ ಅರಿವು ಪಡೆಯಲಾಯಿತು.

ದೇವಾಲಯದ ಸಂಕೀರ್ಣವನ್ನು ಗಮನಿಸುವುದಾದರೆ ಆದಿ ಧಾರಾನಾಥ ದೇವಾಲಯವು ಇತರ ದೇವಾಲಯ ಸಮುಚ್ಛಯಗಳಿಗಿಂತ ಪ್ರಾಚೀನವಾಗಿದ್ದು, ರಾಷ್ಟ್ರಕೂಟರ ಅವಧಿಯಲ್ಲಿ ನಿರ್ಮಿಸಲಾಗಿದೆ. ಆ ಆದಿ ಧಾರಾನಾಥ ದೇವಾಲಯದ ಮುಂಭಾಗದಲ್ಲಿ ಸಿಂಹ ಕಟಾಂಜನವಿದೆ. ನಂತರದ ಧಾರಾನಾಥ ದೇವಾಲಯವು ಕಲ್ಯಾಣ ಚಾಲುಕ್ಯರ ಕಾಲಘಟ್ಟದ್ದಾಗಿದ್ದು ವೇಸರ ಶೈಲಿಯಲ್ಲಿದೆ.ಶಿಖರದ ಸುತ್ತಲಿರುವ‌ ಭೈರವ, ಯೋಗಿಶಿವ,ತಾಂಡವಶಿವನ ಶಿಲ್ಪಗಳ ಅಧ್ಯಯನ ನಡೆಸಲಾಯಿತು. ರಾಷ್ಟ್ರಕೂಟರ ಕಾಲದ ಆದಿಧಾರೇಶ್ವರ ದೇವಾಲಯದ ಛತ್ರಿಗೆ ಅತಿಯಾದ ಮಳೆಯ ವಾತಾವರಕ್ಕನುಗುಣವಾಗಿ ಆದ ಬದಲಾವಣೆಗಳನ್ನು ಮತ್ತು ದೇವಾಲಯ ಒಳಭಾಗದಲ್ಲಿರುವ ಸುಖನಾಸಿ, ಗರ್ಭಗೃಹ, ದೇವಾಲಯದ ಕೊರೆದ, ಹೊಳಪು ನೀಡಿದ, ಸೂಕ್ಷ್ಮ ಕೆತ್ತನೆಗಳಿರುವ 18ಕಂಬಗಳ ಬಗ್ಗೆ ರಂಗಮಂಟಪದ ಬಗ್ಗೆ, ದೇವಾಲಯ ನಿರ್ಮಾಣಕ್ಕೆ ಬಳಸಿರುವ ಹಸಿರು, ಬೂದು ಕಲ್ಲುಗಳ ಬಳಕೆಯ ಬಗ್ಗೆ, ದೇವಾಲಯದ ಶೃಂಗವಾಸ್ತುಶಿಲ್ಪ,ಹಂತಹಂತದ ಸ್ತರಗಳ ನಿರ್ಮಾಣದ ಬಗ್ಗೆ ಶ್ಯಾಮ್ ಸುಂದರ ಗೌಡರೊಂದಿಗೆ ಪ್ರಮೋದ್ ಹೆಗಡೆಯವರಿಂದ ಮಾಹಿತಿಗಳನ್ನು ತಿಳಿಸಲಾಯಿತು.
ದೇವಾಲಯದ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಿದ ನಂತರದಲ್ಲಿ ಜನತಾ ವಿದ್ಯಾಲಯ, ಧಾರೇಶ್ವರದಲ್ಲಿ ಸರಳ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ GFGC ಕುಮಟಾದ ಪ್ರಾಂಶುಪಾಲರಾದ ವಿಜಯಾ ಡಿ.ನಾಯ್ಕ್, GFGC ಕುಮಟಾದ ವಾಣಿಜ್ಯ ಶಾಸ್ತ್ರ ವಿಭಾಗದ ಗೀತಾ ನಾಯ್ಕ್, ಕನ್ನಡ ವಿಭಾಗದ ಪಲ್ಲವಿ, ಇಂಗ್ಲಿಷ್ ವಿಭಾಗದ ಪ್ರತಿಭಾ ಭಟ್, ಡಾ.ಬಾಳಿಗಾ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಕಿರಣ್, GFGC ಕಾಲೇಜಿನ ಇತಿಹಾಸ ವಿಭಾಗದ ಪ್ರಮೋದ್ ಹೆಗಡೆ, ಗೋಪಾಲಕೃಷ್ಣ ರಾಯ್ಕರ್, ನವೀನ ಹೊಸುರು, ಪ್ರವಾಸೋದ್ಯಮ ಪತ್ರಿಕೆ ವಿಭಾಗದ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೇಶ್ ಪಟಗಾರ,CDP ಸದಸ್ಯರಾದ ಮಂಜುನಾಥ್ ಉಪಸ್ಥಿತರಿದ್ದರು. ಅಲ್ಲದೇ ಇತಿಹಾಸ, ಅನ್ವೇಷಣೆ, ನೈಜತೆ, ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.ಒಟ್ಟಾರೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

Share This
300x250 AD
300x250 AD
300x250 AD
Back to top