ಸಿದ್ದಾಪುರ: ತಾಲೂಕಿನ ಕ್ಯಾದಗಿ ವಲಯ ಅರಣ್ಯ ವ್ಯಾಪ್ತಿಯ ಬಿಳಗಿ ಶಾಖೆಯ ಚಪ್ಪರಮನೆ ಗ್ರಾಮದಲ್ಲಿ ಕಾಡೆಮ್ಮೆಯ ಶವವೊಂದು ಪತ್ತೆಯಾಗಿದ್ದು, ವಿದ್ಯುತ್ ಸ್ಪರ್ಶದಿಂದ ಕಾಡೆಮ್ಮೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಚಪ್ಪರಮನೆ ಗ್ರಾಮದ ಮಾಲ್ಕಿ ಸರ್ವೆ ನಂ.33ರ ಗಡಿಯಲ್ಲಿ ಐಬೆಕ್ಸ್ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಹಾಯಿಸಿರುವ ತಂತಿಯ ಸ್ಪರ್ಶದಿಂದ ಕಾಡೆಮ್ಮೆ ಸತ್ತಿರುವುದು ಕಂಡುಬಂದಿರುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ.ಆರ್. ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜಿ.ಪ್ರಕಾಶ ಹಾಗೂ ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಶ್ರೀಧರ ಗಣಪತಿ ಹೆಗಡೆ ಗದ್ದೆಮನೆ ಅವರ ಮಾಲ್ಕಿ ಸರ್ವೆ ನಂ.33ರ ಗಡಿಯಲ್ಲಿ ಹಾಕಿರುವ ಐಬೇಕ್ಸ್ ಬೇಲಿಗೆ ಅನಧಿಕೃತವಾಗಿ ವಿದ್ಯುತ್ ಹಾಯಿಸಿರುವ ತಂತಿಯ ಸ್ಪರ್ಶದಿಂದ ಕಾಡೆಮ್ಮೆ ಸತ್ತಿರುವುದರಿಂದ ಶ್ರೀಧರ ಗಣಪತಿ ಹೆಗಡೆ ಅವರ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆಅಡಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಪಶು ವೈದ್ಯಾಧಿಕಾರಿ ಡಾ. ವಿವೇಕ ಹೆಗಡೆ ಮರಣೋತ್ತರ ಪರೀಕ್ಷೆ ನಡೆಸಿರುತ್ತಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಪ್ರಶಾಂತ ಎಚ್.ನಾಯ್ಕ, ಸಿಬ್ಬಂದಿಗಳಾದ ನಿತಿನ್ ಪಟಗಾರ,ವೈ.ಎಂ.ಚಿನ್ಮಯ ಇತರರಿದ್ದರು.