ಸ್ವರ್ಣವಲ್ಲೀಯಲ್ಲಿ ನಡೆದ ಕೃಷಿ ಜಯಂತಿ ಗೋಷ್ಟಿ | ಯುವ ಕೃಷಿಕರಿಂದ ಅಭಿಪ್ರಾಯ ಹಂಚಿಕೆ
ಶಿರಸಿ: ಕೃಷಿಯಲ್ಲಿದೆ ಆಹ್ಲಾದಕರ, ಕೃಷಿ ಎಂಬುದು ನಮ್ಮ ಹೆಮ್ಮೆ ಎಂಬುದನ್ನು ಯುವಕರಲ್ಲಿ ಮೂಡಿಸಿದರೆ ಇನ್ನಷ್ಟು ಈ ಕ್ಷೇತ್ರವನ್ನು ಉಳಿಸಿ ಬೆಳೆಸಲು ಸಾಧ್ಯತೆ ಇದೆ ಎಂದು ಹಿರಿಯ ಕೃಷಿ ವಿಜ್ಞಾನಿ ಡಾ. ಸತೀಶ ಹೆಗಡೆ ಹುಳಗೋಳ ಪ್ರತಿಪಾದಿಸಿದರು.
ಮಂಗಳವಾರ ಅವರು ಸ್ವರ್ಣವಲ್ಲೀ ಮಠದಲ್ಲಿ ನಡೆಸಲಾಗುತ್ತಿರುವ ಎರಡು ದಿನಗಳ ಕೃಷಿ ಜಯಂತಿಯಲ್ಲಿ ಮಲೆನಾಡಿನ ಕೃಷಿಯಲ್ಲಿ ಭವಿಷ್ಯದ ಸವಾಲು ಕುರಿತ ಗೋಷ್ಟಿಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.
ಶಿಕ್ಷಣದ ಜೊತೆ ಕೃಷಿಯ ತಿಳುವಳಿಕೆ ಕೊಡಬೇಕು. ಯಶಸ್ವಿ ರೈತರನ್ನು ಯುವ ಸಮುದಾಯಕ್ಕೆ ಪರಿಶೀಲಿಸಬೇಕು. ಮಕ್ಕಳ ಹಂತದಲ್ಲೇ ಜಾಗೃತಿ ಮೂಡಿಸಿದರೆ ಕೃಷಿಯಲ್ಲಿ ಆಸಕ್ತಿ ಉಳಿಸಿಕೊಳ್ಳಬಹುದು ಎಂದರು. ಭಾರತದಲ್ಲಿ ಪ್ರತೀ ವಾರ ೨೦೦ ಜನರು ಕೃಷಿ ಬಿಡುತ್ತಿದ್ದಾರೆ. ಪಂಜಾಬ್ ಗೋಧಿ ಹಾಗೂ ಭತ್ತಕ್ಕೆ ಹೆಸರಾಗಿ ಪ್ರಥಮ ಸ್ಥಾನದಲ್ಲಿದ್ದರೆ, ಅಲ್ಲಿನ ರಾಜ್ಯ ಸರಕಾರ ಭವಿಷ್ಯದ ಆಲೋಚಿಸದೇ ಹೋದ ಪರಿಣಾಮ ಇಂದು ದೇಶದಲ್ಲಿ ೧೩ನೇ ಸ್ಥಾನದಲ್ಲಿದೆ ಎಂದು ಆತಂಕಿಸಿದ ಅವರು, ಮಕ್ಕಳಿಗೆ ಪ್ರಬುದ್ಧತೆ ಬಂದಾಗ ಕೃಷಿ ಕಲಿಸಬೇಕು. ಜವಬ್ದಾರಿ ಕೊಡಬೇಕು ಎಂದರು. ಮನುಷ್ಯನಲ್ಲಿ ಶೇ.೬೦ರಷ್ಟು ರೋಗಗಳು ನಾವು ಬದುಕು ರೀತಿಯಿಂದ ಬರುತ್ತಿದೆ. ಹಾಗೇ ಕೃಷಿಯಲ್ಲೂ ಮುಂದಿನ ದಿನದಲ್ಲಿ ಕೃಷಿ ಮಾಡುವ ಶೈಲಿಯಿಂದ ರೋಗಗಳು ಬರುತ್ತವೆ. ಜಗತ್ತಿನಲ್ಲಿ ೧೦೦೦ ಕೋಟಿ ಡಾಲರ್ ಪ್ರಮಾಣದಲ್ಲಿ ಆಕರ್ಷಕ ಕೃಷಿ ನ್ಯೂಟ್ರಿಯಂಟ್ಸ, ಗೊಬ್ಬರ ಪದಾರ್ಥಗಳು ಬರಲಿವೆ. ಈ ಬಗ್ಗೆ ಜಾಗೃತ ಆಗಿರಬೇಕು. ಮಧ್ಯೆ ಹವಾಮಾನ ಹಾಳಾಗುವಿಕೆ ಆಗುತ್ತಿದೆ. ಈ ಶಿಥಿಲವನ್ನೂ ಗಮನಿಸಿ ಮುನ್ನೆಡೆಯಬೇಕಾಗಿದೆ ಎಂದರು.
ರಾತ್ರಿ ಉಷ್ಣಾಂಶ ಹೆಚ್ಚಾದರೂ ಬೆಳೆಗೆ ಕಷ್ಟ ಆಗುತ್ತದೆ. ತಳಿ ಆಯ್ಕೆಯಲ್ಲೂ ಗಮನಿಸಿ ಕೆಲಸ ಮಾಡಬೇಕು ಎಂದ ಅವರು, ಶಿರಸಿಗೂ ಏಲಕ್ಕಿ, ಕಾಳುಮೆಣಸು ಸಂಶೋಧನಾ ಕೇಂದ್ರಗಳು ಆಗಬೇಕು ಎಂದೂ ಒತ್ತಾಯಿಸಿದರು. ಅಧ್ಯಕ್ಷತೆಯನ್ನು ಬಾಗಲಕೋಟೆ ತೋಟಗಾರಿಕಾ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಹೆಗಡೆ ವಹಿಸಿದ್ದರು. ಜಿ.ವಿ.ಹೆಗಡೆ ಹುಳಗೋಳ ನಿರ್ವಹಿಸಿದರು.
ಕೃಷಿಯಲ್ಲಿ ಮಿಶ್ರ ಬೆಳೆಗೆ ಆದ್ಯತೆ ನೀಡಿ
ಯುವ ಪ್ರಗತಿಪರ ಕೃಷಿಕ, ಕೃಷಿಯಲ್ಲಿ ಎಂ.ಎಸ್.ಸಿ ಪದವಿ ಪಡೆದಿರುವ ಸುಜಯ್ ಭಟ್ ಹೊಸಳ್ಳಿ ಮಾತನಾಡಿ, ಯುವ ಸಮುದಾಯ ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವಾಗ ಮನೆಯ ಪರಿಸರವೂ ಪೂರಕವಾಗಿ ಪ್ರೋತ್ಸಾಹ ನೀಡುವಂತಿರಬೇಕು. ಮನೆಯ ಎಲ್ಲ ಸದಸ್ಯರ ಪ್ರೋತ್ಸಾಹವೇ ಎಲ್ಲ ಸಾಧನೆಗೆ ಕಾರಣವಾಗುತ್ತದೆ. ಮಲೆನಾಡಿನಲ್ಲಿ ಅಡಿಕೆ ಹೊರತುಪಡಿಸಿ ಪರ್ಯಾಯ ಬೆಳೆ ವಿಚಾರ ಮಾಡುವುದೂ ಕಷ್ಟ. ಅಡಿಕೆ ಸಾಕಷ್ಟು ಇರಲಿ, ಜೊತೆಗೆ ಹೊಸ ಬೆಳೆಗಳ ಬೆಳೆಯುವ ಪ್ರಯತ್ನ ಕೈ ಬಿಡಬಾರದು. ಅಡಿಕೆಯ ಜೊತೆಗೆ ಮಿಶ್ರ ಬೆಳೆಗಳಿಗೆ ಆದ್ಯತೆ ನೀಡಿದರೆ ಹೆಚ್ಚು ಪ್ರಯೋಜನ ಎನಿಸುತ್ತದೆ. ನಮ್ಮ ಮನೆಯಲ್ಲಿ ಅಡಿಕೆ, ತೆಂಗು, ಬಾಳೆ, ದಾಲ್ಚಿನಿ, ಪೇರಲೆ, ಕಿತ್ತಳೆ ಸೇರಿದಂತೆ ಅನೇಕ ಬೆಳೆ, ಹಣ್ಣುಗಳನ್ನು ಆದಾಯದ ಭಾಗವಾಗಿ ಬೆಳೆಯುವ ಪ್ರಯತ್ನ ಮಾಡಾಗಿದೆ. ನಮ್ಮ ಬೆಟ್ಟಗಳಲ್ಲಿ ದಾಲ್ಚಿನಿ ಕೃಷಿ ಮಾಡುವುದು ಉತ್ತಮ. ಆ ಮೂಲಕ ಆದಾಯ ಗಳಿಸಲು ಸಾಧ್ಯ. ಗ್ರಾಮ ಅರಣ್ಯ ಸಮಿತಿಯವರು ದಾಲ್ಚಿನಿ ಕೃಷಿಯತ್ತ ಹೆಚ್ಚು ಒಲವು ತೋರಿಸಬೇಕಿದೆ.
ಮಕ್ಕಳಿಗೆ ಕೃಷಿಯ ಕುರಿತಾಗಿ ಹೆಮ್ಮೆ ಮೂಡುವಂತೆ ಮಾಡುವ ಕೆಲಸ ನಮ್ಮ ಹಿರಿಯರಿಂದಾಗಬೇಕು. ಪರಾಂಪರಾಗತವಾಗಿ ಕೃಷಿಯಲ್ಲಿರುವ ನಮ್ಮ ಹಿರಿಯರೇ ಯುವ ಕೃಷಿಕರನ್ನು ಅಸಡ್ಡೆಯಿಂದ ನೋಡುವುದು ಸರಿಯಲ್ಲ. ಪೇಟೆಯಲ್ಲಿ ನೌಕರಿ ಮಾಡುವವ ಶ್ರೇಷ್ಠ, ಮನೆಯಲ್ಲಿದ್ದು ಕೃಷಿ ಮಾಡುವವ ಕನಿಷ್ಠ ಎಂಬ ಭಾವನೆ ಹೋಗಬೇಕಿದೆ. ಅವರವರ ಸ್ಥಾನ, ಕೆಲಸದಲ್ಲಿ ಎಲ್ಲರೂ ಶ್ರೇಷ್ಠರೇ ಆಗಿದ್ದಾರೆ.
ಅನಿವಾರ್ಯ ಕೃಷಿಕರಿಗಿಂತ ಆಸಕ್ತಿಕರ ಕೃಷಿಕರನ್ನಾಗಿಸುವಲ್ಲಿ ಹೆಚ್ಚು ಯೋಜಿಸಬೇಕಿದೆ. ಇತ್ತಿಚಿನ ಸರಕಾರದ ಯೋಜನೆಗಳೂ ಕೂಡ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಕೃಷಿಯಲ್ಲಿ ಪುರುಷರಂತೆ ಮನೆಯ ಗೃಹಿಣಿಯ ಕೊಡುಗೆಯೂ ಸಾಕಷ್ಟಿದೆ. ಕೃಷಿ ನೋಡಿ, ಕೃಷಿ ಮಾಡಿ
ಯುವಕೃಷಿಕರನ್ನು ನಮ್ಮ ಹಿರಿಯರು ಕಡೆಗಾಣಿಸುವುದನ್ನು ಬಿಟ್ಟು, ಪ್ರೋತ್ಸಾಹ ನೀಡಲಿ
ಇನ್ನೋರ್ವ ಯುವ ಕೃಷಿಕ ಚಿನ್ಮಯ ಹೆಗಡೆ, ಅಗಸಾಲ ಬೊಮ್ನಳ್ಳಿ ಅನಿಸಿಕೆ ಹಂಚಿಕೊಂಡು, ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಕೃಷಿ ಮಾಡಲು ಊರಿಗೆ ಬಂದಾಗ, ಕೃಷಿ ಮಾಡು ಎಂದು ಹೇಳಿದವರಿಗಿಂತ ಮಾಡಬೇಡ ಎಂದವರೇ ಜಾಸ್ತಿ. ಆದರೆ ಕೃಷಿಯೆಡೆಗೆ ನಮ್ಮ ಆಸಕ್ತಿ ಇದ್ದಾಗ ಮಾತ್ರ ಹಿಡಿದ ಹಠ ಸಾಧನೆ ಸಾಧ್ಯ. ಸಂಬಂಧಿಗಳ ಮನೆಗೆ ಹೋದಾಗ, ನೀನು ಮನೆಯಲ್ಲಿಯೇ ಇದ್ದೀಯಾ ? ಎಂದು ಬಹುತೇಕ ಕೃಷಿಕರಿಗೆ ಮೂದಲಿಕೆಯ ಮಾತು ಕೇಳುವುದು ಸಾಮಾನ್ಯ. ಅಂತವರಿಗೆ ಉದಾಸೀನವೇ ಮದ್ದು. ನಾನಂತೂ ಬಹಳ ದಿನದಿಂದ ಮದುವೆ ಮನೆ, ಸಂಬಂಧಿಗಳ ಮನೆಗೆ ಹೋಗುವುದನ್ನೇ ಬಿಟ್ಟಿದ್ದೇನೆ. ಆ ಸಮಯವನ್ನು ಕೃಷಿಯೆಡೆಗೆ ತೊಡಗಿಸಿದ್ದೇನೆ.
ಕೃಷಿಯಲ್ಲಿ ತಪ್ಪು ಮಾಹಿತಿ ಪಡೆಯದೇ, ಸರಿಯಾದ ಮಾಹಿತಿ ಪಡೆದು ಕೃಷಿ ಮಾಡುವುದು ಹೆಚ್ಚು ಉಪಯೋಗ. ಉತ್ತಮ ಕೃಷಿ ಮಾಡಿದರೆ ತುಂಬಾ ನೆಮ್ಮದಿ, ಖುಷಿಯಿಂದ ಬದುಕಲು ಸಾಧ್ಯ. ಸುಧಾರಿತ ಪ್ರಯೋಗಗಳಿಂದ ಕಾಡು ಪ್ರಾಣಿಗಳ ಹಾವಳಿಯನ್ನೂ ತಡೆಯಬಹುದು.
ನಮ್ಮ ತೋಟದಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಬಾಳೆ, ಪಪ್ಪಾಯಿ, ಭತ್ತ, ಬೆಣ್ಣೆ ಹಣ್ಣಿನ ಬೆಳೆಯನ್ನು ಬೆಳೆಯುತ್ತಿದ್ದೇನೆ. ಆರಂಭದ ದಿನಗಳಾಗಿದ್ದರಿಂದ ಉತ್ತಮ ಇಳುವರಿ ನಿರೀಕ್ಷೆಯೂ ಇದೆ. ಕೃಷಿಯಲ್ಲಿ ಎಲ್ಲದೂ ನಾವಂದುಕೊಂಡಂತೇ ಆಗುವುದಿಲ್ಲ. ಏನೇ ಆದರು ಧೃತಿಗೆಡಬಾರದು. ಕೃಷಿಯಲ್ಲಿ ಲೆಕ್ಕ ಇಡುವುದು ಹೆಚ್ಚು ಸೂಕ್ತ. ಆ ಮೂಲಕ ಖರ್ಚಿನ ನಿಯಂತ್ರಣ ಸಾಧ್ಯ.