ಹೊನ್ನಾವರ: ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜಗದೀಪ್ ತೆಂಗೇರಿ ರಾಜೀನಾಮೆ ಬೆನ್ನಲ್ಲೆ ಅವರ ಸ್ಥಾನಕ್ಕೆ ಮಹೇಶ್ ನಾಯ್ಕ ಹಳದಿಪುರ ಇವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ಹೊನ್ನಾವರ ಬ್ಲಾಕ್ ನ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಹಳದಿಪುರ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ಮಹೇಶ್ ಪತಿಯಾಗಿರುವ ಮಹೇಶ್ ನಾಯ್ಕ ಉದ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರಾಗಿದ್ದು, ಇವರ ಹೆಸರು ಅಂತಿಮಗೊಂಡಿರುವ ಬಗ್ಗೆ ಚರ್ಚೆ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ಹೊನ್ನಾವರ ಬ್ಲಾಕ್ ಅಧ್ಯಕ್ಷ ಬದಲಾವಣೆಗೆ ತೆರೆಮರೆಯ ಪ್ರಯತ್ನ ನಡೆದಿದೆ ಎನ್ನುವ ಸುದ್ದಿಯು ಕೇಳಿ ಬಂದಿತ್ತು.
ಹೊಸ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಹಲವು ಪ್ರಮುಖರ ಹೆಸರು ಒಳಗೋಳಗೆ ಮುನ್ನೆಲೆಯಲ್ಲಿತ್ತು. ಅವರಲ್ಲಿ ಮಹೇಶ್ ಹೆಸರು ಕೆಪಿಸಿಸಿ ಮಟ್ಟದಲ್ಲಿ ಅಂತಿಮಗೊಂಡಿದೆ. ಅಧಿಕೃತ ಆದೇಶ ಆಗುವುದು ಮಾತ್ರ ಬಾಕಿ ಉಳಿದಿದೆ ಎನ್ನುವ ಚರ್ಚೆಗೆ ವೇಗ ಹೆಚ್ಚಿದೆ. ಮಹೇಶ್ ನಾಯ್ಕ್ ಹೆಸರು ಅಂತಿಮಗೊಳಿಸಲು ಜಿಲ್ಲೆಯ ಹೈಕಮಾಂಡ್ ಮಟ್ಟದ ಮುಖಂಡರ ಪ್ರಭಾವ ಇವರ ಮೇಲೆ ಬೀರಿದೆ ಎನ್ನುವ ಚರ್ಚೆಯು ನಡೆಯುತ್ತಿದೆ.