ಅಂಕೋಲಾ:ಬೆಳಂಬಾರದ ಪಾರ್ಶ್ವವಾಯು ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಪದ್ಮಶ್ರೀ ತುಳಸಿ ಗೌಡ ಅವರಿಗೆ ಉತ್ತಮ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಿ ಅವರಿಗೆ ಚಿಕಿತ್ಸೆ ನೀಡಿದ ನಾಟಿ ವೈದ್ಯ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಾಲಕ್ಕಿ ಸಮಾಜದ ಪ್ರಮುಖ ಬಿ.ಎಸ್. ಗೌಡ ಮಾತನಾಡಿ ಜನಪ್ರಿಯತೆ ಮತ್ತು ಶ್ರೇಷ್ಠತೆ ಎರಡನ್ನು ಹೊಂದಿರುವ ಹನುಮಂತ ಗೌಡ ಅವರು ತುಳಸಿ ಗೌಡ ಅವರಿಗೆ ವಿಶೇಷ ಕಾಳಜಿಯೊಂದಿಗೆ ಚಿಕಿತ್ಸೆ ನೀಡಿ ಹಾಲಕ್ಕಿ ಸಮಾಜದ ಆಸ್ತಿಯನ್ನು ಉಳಿಸಿದ್ದಾರೆ ಎಂದರು.
ಜಿಲ್ಲಾ ಹಾಲಕ್ಕಿ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಗೌಡ ಮಾತನಾಡಿ ಹಾಲಕ್ಕಿ ಸಮಾಜಕ್ಕೆ ಹೆಸರನ್ನು ತಂದ, ಹಾಲಕ್ಕಿ ಸಂಪ್ರದಾಯ ಜೀವಂತವಾಗಿರಿಸಿದ ಮಹನೀಯರನ್ನು ಸಮಾಜ ಉಳಿಸಿಕೊಳ್ಳಬೇಕಿದೆ ಎಂದರು.
ವೈದ್ಯ ಹನುಮಂತ ಗೌಡ ಮಾತನಾಡಿ ತುಳಸಿ ಗೌಡ ಕುಟುಂಬ ಅವರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದ್ದರಿಂದ ಅವರು ಚಿಕಿತ್ಸೆಗೆ ಬೇಗನೆ ಸ್ಪಂದಿಸಿದ್ದು ಶೀಘ್ರದಲ್ಲಿ ಗುಣಮುಖರಾಗಲಿದ್ದಾರೆ ಎಂದರು.
ಹಾಲಕ್ಕಿ ಸಮಾಜದ ಪ್ರಮುಖ ಶಂಕರ ಗೌಡ, ಮಂಕಾಳ ಗೌಡ, ಎಸ್. ಟಿ.ಗೌಡ ಉಪಸ್ಥಿತರಿದ್ದರು. ಬೆಳಂಬಾರದ ಯುವ ಮುಖಂಡ ಮಾದೇವ ಗೌಡ ವಂದಿಸಿದರು.