ಶಿರಸಿ: ಹಿರಿಯರು ಕಟ್ಟಿ ಬೆಳೆಸಿದ ಅನೇಕ ಅನುದಾನಿತ ಶಿಕ್ಷಣ ಸಂಸ್ಥೆಗಳು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳ ನೇಮಕಾತಿ ಆಗದೆ ಗಂಭೀರ ಸಮಸ್ಯೆ ಎದುರಿಸುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ ಎಂದು ಉತ್ತರ ಕನ್ನಡ ಜಿಲ್ಲೆಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಶಶಿಭೂಷಣ ಹೆಗಡೆ ಕಳವಳ ವ್ಯಕ್ತಪಡಿಸಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸಭೆಯಲ್ಲಿ ಮಾತನಾಡುತ್ತಿದ್ದರು.
ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ನೀಡುವ ಸೌಲಭ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸಿಗುತ್ತಿಲ್ಲ. ಸರಕಾರದ ಈ ಇಬ್ಬಗೆಯ ನೀತಿ ಖಂಡನೀಯ. ಅನುದಾನಿತ ಶಿಕ್ಷಣ ಸಂಸ್ಥೆಗಳ ಭವಿಷ್ಯದ ಕುರಿತು ಯೋಚಿಸುವ ಸಂದರ್ಭ ಇದಾಗಿದ್ದು ಸರಕಾರದ ಅಸಮಾನತೆ ವಿರುದ್ದ ಹೋರಾಡಬೇಕಿದೆ ಎಂದರು.
ಹರಿಪ್ರಕಾಶ್ ಕೋಣೆಮನೆ ಮಾತನಾಡಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುವ ರಚನಾತ್ಮಕ ಕೆಲಸವು ಇತಿಹಾಸ ಮತ್ತು ಭವಿಷ್ಯದ ಕೊಂಡಿಯಾಗಿದೆ ಎಂದರು.
ಬಿಸಲಕೊಪ್ಪ ಹೈಸ್ಕೂಲಿನ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ, ನೆಹರು ಹೈಸ್ಕೂಲ್‌ನ ಶ್ರೀಪಾದ್ ರಾಯ್ಸದ್, ಸಾಲ್ಕಣಿ ಹೈಸ್ಕೂಲ್‌ನ ಜಿ.ಎಂ.ಹೆಗಡೆ ಮೂರೇಗಾರ್, ಹೊನ್ನಾವರದ ಎಂ.ಟಿ.ಗೌಡ, ಡಾಕ್ಟರ್ ಎಸ್. ಎಸ್. ಹೆಗಡೆ ಸಾಂದರ್ಭಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಶಿಭೂಷಣ್ ಹೆಗಡೆ ಅವರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಪುನರ್ ಆಯ್ಕೆ ಮಾಡಲಾಯಿತು. ಒಕ್ಕೂಟದ ಕಾರ್ಯದರ್ಶಿ ಡಾ.ಟಿ. ಎಸ್. ಹಳೆಮನೆ ಸ್ವಾಗತಿಸಿದರು.