Slide
Slide
Slide
previous arrow
next arrow

50% ಯೋಜನೆ ಬಂದ್; ಬಡವರ ಕಣ್ಣೀರ ಶಾಪ ತಟ್ಟದೇ ಇರದು !

300x250 AD

ಬದಲಿ ಖಾತೆ ಯೋಜನೆ ಬಂದ್ ಮಾಡಿದ ಸಹಕಾರಿ ಸಾಕ್ಷರರು | ಸಾವಿರಾರು ಸದಸ್ಯರಿಗೆ ವರದಾನವಾಗಿದ್ದ ಯೋಜನೆ

ಗೋಪಿಕೃಷ್ಣ🖋

ಸಹಕಾರಿ ಸಂಘಗಳು ಜನ್ಮತಾಳಿದ್ದೇ ಸದಸ್ಯ ರೈತರ ಶ್ರೇಯೋಭಿವೃದ್ಧಿಗಾಗಿ. ಅವರ ಆರ್ಥಿಕ ಉನ್ನತಿಗಾಗಿ. ಸದಸ್ಯರಿಗೆ ಅವಶ್ಯಕ, ಅನಿವಾರ್ಯ ಇದ್ದಾಗ ಸಾಲ ನೀಡುವುದು ಸಂಘದ ಜವಾಬ್ದಾರಿ. ಆದರೆ ಸಾಲದ ಕೂಪದಲ್ಲಿಯೇ ಸದಸ್ಯರನ್ನು ಇರುವಂತೆ ಮಾಡುವುದಲ್ಲ. ಬದಲಾಗಿ ಅವಶ್ಯಕತೆ ಇರುವಾಗ ಸಾಲ ನೀಡಿ, ಮರುಪಾವತಿಗೆ ಸಮಯದ ಜೊತೆಗೆ ಅವಕಾಶ ಕೊಟ್ಟು, ಆ ಮೂಲಕ ರೈತರು ಮತ್ತು ಸಂಘ ಇವೆರಡೂ ಸಹ ಹೊಂದಾಣಿಕೆಯ ಮೇಲೆ ನಡೆದಾಗ ಮಾತ್ರ ಸಹಕಾರಿ ವ್ಯವಸ್ಥೆ ಸರಿಯಾಗಿರುತ್ತದೆ. ಅದರಲ್ಲಿ ಯಾರಾದರೂ ಒಬ್ಬರು ಹಳಿ ತಪ್ಪಿದರೂ ಕೂಡ ಆ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಹಾಗೆ ನೋಡಿದರೆ, ಸಾಲದ ಕೂಪದಿಂದ ಸದಸ್ಯರನ್ನು ಹೊರಬರುವಂತೆ ಮಾಡುವುದು ಯಾವುದೇ ಸಹಕಾರಿ ಸಂಘದ ಪ್ರಮುಖ ಆದ್ಯತೆಯಾಗಿರಬೇಕು. ಮತ್ತು ಸದಸ್ಯರೂ ಕೂಡ ಅದೇ ನಿಟ್ಟಿನಲ್ಲಿ ಯೋಚನೆ ಮಾಡಿರಬೇಕು.

ಪ್ರಸ್ತುತ, ಸಂಘದಲ್ಲಿ ವ್ಯವಹರಿಸುತ್ತಿದ್ದ ಸಾಮಾನ್ಯ ಬಡ ಸದಸ್ಯ ರೈತರನ್ನು ಹಂತ ಹಂತವಾಗಿ ಸಾಲದ ಕೂಪದಿಂದ ಮೇಲೆತ್ತುವ ಸಲುವಾಗಿ ಈ ಹಿಂದಿನ ಆಡಳಿತ ಮಂಡಳಿ 50% (ಬದಲಿ ಖಾತೆ ವ್ಯವಸ್ಥೆ) ಎನ್ನುವ ನೂತನ ಯೋಜನೆಯೊಂದನ್ನು ತಂದಿತ್ತು. ಸಂಘದ ಅಂದಾಜು 1,400 ಕ್ಕೂ ಹೆಚ್ಚು ಸದಸ್ಯರು ಈ ಬದಲಿ ಖಾತೆ ಯೋಜನೆಯ ಪ್ರಯೋಜನ ಪಡೆಯಲು ಉತ್ಸುಕರಾಗಿ ಸದರಿ ಯೋಜನೆಯನ್ನು ಪಡೆದುಕೊಂಡಿದ್ದರು. ಅದರ ಪರಿಣಾಮವಾಗಿ ಅನೇಕ ಬಡ – ಮಧ್ಯಮ ವರ್ಗದ ರೈತರಿಗೆ ಹಂತಹಂತವಾಗಿ ಅನುಕೂಲವಾಗಿತ್ತು. ಆದರೆ ಬದಲಾವಣೆಯ ಹೆಸರಿನಲ್ಲಿ ಬಂದ ಸಹಕಾರಿ ಸಾಕ್ಷರರಿಗೆ ಹಳಬರು ಮಾಡಿದ್ದೆಲ್ಲವೂ ತಪ್ಪು. ಮಕ್ಕಳ ವಿದ್ಯಾಭ್ಯಾಸಕ್ಕೋ, ಮದುವೆಗೋ ಅಥವಾ ಮನೆ ಕಟ್ಟಲು ಕಷ್ಟಕಾಲದಲ್ಲಿ ಸಾಲ ತೆಗೆದುಕೊಂಡ ಸದಸ್ಯ ತನ್ನ ಜಮೀನು, ಆಸ್ತಿ ಮಾರಾದರೂ ಸರಿ, ಬಡ್ಡಿ ಹಾಗು ಅಸಲು ಸಾಲವನ್ನು ತೀರಿಸಲೇ ಬೇಕು ಎನ್ನುವ ಮನೋಭಾವದಲ್ಲಿ ರೈತರಿಗೆ ಅಮೃತ ಸಮಾನವಾಗಿದ್ದ ಬದಲಿ ಖಾತೆ ಯೋಜನೆಗೆ ಎಳ್ಳು-ನೀರು ಬಿಟ್ಟರು.

ಏನಿದು ಬದಲಿ ಖಾತೆ ವ್ಯವಸ್ಥೆ‌ !

ಸಂಸ್ಥೆಯಲ್ಲಿ ವ್ಯವಹರಿಸುತ್ತಿರುವ ಸದಸ್ಯರೊಬ್ಬನ ಲಿಖಿತ ಅಭಿಪ್ರಾಯ ಈ ಕೆಳಗಿನಂತಿದೆ.

ಸಂಘದ ಸದಸ್ಯರಿಗೆ ಮಹಸೂಲು ಭದ್ರತೆ, ಠೇವಣಿ ಭದ್ರತೆ ಮತ್ತು ಮಹಸೂಲು ವಿಕ್ರಿ ಪ್ರಮಾಣ ಇವುಗಳನ್ನಾಧರಿಸಿ ಕಳೆದ ಮೂರು ವರ್ಷಗಳ ಸರಾಸರಿ ಮೊತ್ತದಷ್ಟು ಉತ್ಪಾದನಾ ಸಾಲವಾಗಿ ನೀಡಲಾಗುತ್ತದೆ. ಕಾರಣಾಂತರಗಳಿಂದ ಒಂದು ವರ್ಷದ ಸರಾಸರಿ ಆದಾಯದ ಮಿತಿಗಿಂತ ಹೆಚ್ಚಿನ ಸಾಲ ಬಾಕಿ ಹೊಂದಿರುವವರಿಗೆ ವ್ಯವಹಾರಿಕ ಮತ್ತು ಆರ್ಥಿಕ ಎರಡೂ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ. ಸಾಲಗಾರ ಖಾತೆಯಲ್ಲದೇ ಅವನ ಕುಟುಂಬದ ಇನ್ನೋರ್ವರ ಖಾತೆ ತೆರೆದು ಆ ಖಾತೆಯಲ್ಲಿ ಅಡಿಕೆ ವಿಕ್ರಿ ಮಾಡಿಸಿ ಬಂದ ಮೊತ್ತದ ೫೦% ಹಣವನ್ನು ಸಾಲದ ಅಸಲಿಗೆ ಜಮಾ ಮಾಡಿಕೊಂಡು ಇನ್ನುಳಿದ ೫೦% ಹಣವನ್ನು ದೈನಂದಿನ ಖರ್ಚು ವೆಚ್ಚಗಳಿಗೆ ನೀಡಲಾಗುವುದು. ಮುಂದೆ ಸಾಲದ ಅಸಲು ಕಡಿಮೆಯಾಗಿ ಸದರಿ ಸಾಲಗಾರನ ಆದಾಯ ಮಿತಿಯಲ್ಲಿ ಸಾಲದ ಮೊತ್ತ ಬಂದಮೇಲೆ ಹಂತ ಹಂತವಾಗಿ ಬಡ್ಡಿಯನ್ನು ಜಮಾ ಮಾಡಿಕೊಳ್ಳಲಾಗುವುದು. ಉದಾ: ಸದಸ್ಯನ ವಾರ್ಷಿಕ ಆದಾಯ ೨ ಲಕ್ಷದಷ್ಟಿದ್ದು, ಸಾಲದ ಬಾಕಿ ೫ ಲಕ್ಷವಿದ್ದಲ್ಲಿ, ಸದರಿ ಸದಸ್ಯನ ಕುಟುಂಬದ ಇನ್ನೋರ್ವರ ಹೆಸರಿಗೆ ಬದಲಿ ಖಾತೆ ಆರಂಭಿಸಿ, ಮಹಸೂಲು ವಿಕ್ರಿ ಮಾಡಿಸಿ ರೂ. ೧ ಲಕ್ಷವನ್ನು ಸಾಲದ ಅಸಲಿಗೆ ಜಮಾ ಮಾಡಿಕೊಂಡು ಉಳಿದ ರೂ. ೧ ಲಕ್ಷವನ್ನು ದೈನಂದಿನ ಖರ್ಚಿಗೆ ಕಾಲ ಕಾಲಕ್ಕೆ ನೀಡಲಾಗುವುದು. ಈ ವ್ಯವಸ್ಥೆಯಲ್ಲಿ ಬಡ್ಡಿಗೆ ತಕ್ಷಣದಲ್ಲಿ ಹಣ ಜಮಾ ಆಗದೇ ಅಸಲಿಗೆ ಜಮಾ ಆಗುವುದರಿಂದ ಸಾಲದ ಮೊತ್ತವು ವರ್ಷದಿಂದ ವರ್ಷಕ್ಕೆ ಶೀಘ್ರವಾಗಿ ಕಡಿಮೆಯಾಗುತ್ತ ಸಾಗಿ, ಸದರಿ ಸದಸ್ಯನ ಆರ್ಥಿಕ ಚೇತರಿಕೆ ಕಾರಣವಾಗುವುದು. ಈ ವ್ಯವಸ್ಥೆಯಿಂದ ಆದಾಯ ಮಿತಿಗಿಂತ ಸಾಲ ಅಧಿಕವಾಗಿದ್ದರೂ ಸಾಲ ಮರುಪಾವತಿ ಸಾಮರ್ಥ್ಯ ಅಭಿವೃದ್ಧಿಯಾಗುತ್ತದೆ. ಸದಸ್ಯರು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಅನುಕೂಲವಾಗುತ್ತದೆ. ಈ ಯೋಜನೆಯಲ್ಲಿ ಹಲವು ತಾಲೂಕುಗಳ ಸಾವಿರಾರು ಸದಸ್ಯ ಕುಟುಂಬಗಳು ಆರ್ಥಿಕ ಉನ್ನತಿ ಸಾಧಿಸುತ್ತ ನಿರಾಳ ಬದುಕಿನತ್ತ ಹೊರಟಿದ್ದವು.

300x250 AD

ಆದರೆ ಈಗಿನ ಹೊಸ ಆಡಳಿತ ಕಮೀಟಿಯು ಇದನ್ನು ರದ್ಧುಗೊಳಿಸಿತು. ಅಲ್ಲದೇ ಯಾವಾಗಿನಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತೊ ಅಲ್ಲಿಂದಲೂ ಬಡ್ಡಿಗೆ ಬಡ್ಡಿ ಜಡಿದು ಅಸಲಿಗೆ ಸೇರಿಸಿ, ಸಾಲದ ಮೊತ್ತವನ್ನು ಆಕಾಶಕ್ಕೇರಿಸಿ ನೋಟೀಸ್‌ ನೀಡಿತು. ಹಿಂದಿನ ಆಡಳಿತ ಕಮೀಟಿಯು ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಮಸ್ತ ಸದಸ್ಯರೆಲ್ಲರ ಒಕ್ಕೊರಲಿನ ಅಭಿಪ್ರಾಯದಂತೆ ರೈತರೆಲ್ಲರ ಶ್ರೇಯೋಭಿವೃದ್ಧಿ ಯೋಜನೆ ಜಾರಿಗೊಳಿಸಿತ್ತು. ಆದ್ದರಿಂದ ಅದನ್ನು ರದ್ದು ಮಾಡಬೇಕೆಂದರೆ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಥವಾ ಈ ಕುರಿತು ವಿಶೇಷ ಸರ್ವ ಸಾಧಾರಣ ಸಭೆ ಕರೆದು ರದ್ದುಗೊಳಿಸಬೇಕಾಗುತ್ತದೆ. ವಾರ್ಷಿಕ ಸರ್ವಸಾಧಾರಣ ಸಭೆ ಕರೆಯಲು ಕಾಲ ಬರಲಿಲ್ಲವಾದ್ದರಿಂದ ಹೊಸ ಆಡಳಿತ ಕಮೀಟಿಯು ತರಾತುರಿಯಲ್ಲಿ ವಿಶೇಷ ಸರ್ವ ಸಾಧಾರಣ ಸಭೆ ಕರೆದು ರೈತರಿಗೆ ವಿಶೇಷ ಅನುಕೂಲವಾಗಿದ್ದ ಬದಲಿ ಖಾತೆ (೫೦%) ಯೋಜನೆಯನ್ನು ಸ್ಥಗಿತಗೊಳಿಸಿತು. ಸಂಘಕ್ಕೆ ಆಧಾರವಾದ ರೈತರಿಗೆ ಖೆಡ್ಡಾ ನಿರ್ಮಿಸಿಯೇಬಿಟ್ಟಿತು. ಈ ಹಿಂದಿನ ಠರಾವು ಬಾಧಿಸಬಹುದೆಂದು ರೈತರೇ ತಮಗೆ ಬದಲಿ ಖಾತೆ ವ್ಯವಸ್ಥೆ ಬೇಡ ಎಂದು ಬರೆದು ಕೊಡುವ ಪತ್ರ ಸೃಷ್ಠಿಸಿ ಸಂಘದಲ್ಲೇ ಪ್ರಿಂಟ್‌ ಮಾಡಿಸಿ ವಿತರಿಸಲಾಯಿತು ? ಸಹಿ ಹಾಕಲು ತಕರಾರು ಮಾಡಿದ ರೈತರಿಗೆ ಖರ್ಚಿಗೂ ಹಣ ದೊರೆಯುವುದಿಲ್ಲ ಅಲ್ಲದೆ ವಸೂಲಿಗಾಗಿ ಕೇಸು ದಾಖಲಿಸಲಾಗುವುದೆಂದು ಹೆದರಿಸಲಾಯಿತು ? ರೈತರಿಗೆಲ್ಲ ಆರ್ಥಿಕ ಅನಿವಾರ್ಯತೆಯ ಸಮಸ್ಯೆ ಸೃಷ್ಠಿಸಲಾಯಿತು. ಕೌಟುಂಬಿಕ ನಿರ್ವಹಣೆಗೆ ಹಣ ಸಿಗದಿದ್ದರೆ ಮುಂದೆ ಜೀವನ ಹೇಗೆಂದು ಅರ್ಥವಾಗದ ರೈತರು ಆಡಳಿತ ಕಮೀಟಿಯ ಮುಖವಾಣಿ ಹೇಳಿದಲ್ಲಿ ಸಹಿ ಮಾಡಿದರು. ನಂತರದಲ್ಲಿ ಪಾಸ್‌ ಪುಸ್ತಕದಲ್ಲಿ ಹಳೆಯ ಬಡ್ಡಿಯನ್ನು ಸೇರಿಸಿ ಹೆಚ್ಚಿಸಿರುವ ಅಸಲಿನ ಮೊತ್ತ ನೋಡಿ ಕಂಗಾಲಾಗಿದ್ದಾರೆ. ವಿರೋಧಿಸಿದರೆ ದೈನಂದಿನ ಖರ್ಚಿಗೂ ಹಣ ದೊರೆಯದಿದ್ದರೆ ಏನು ಮಾಡುವುದು ಎಂದು ಒಳಗೊಳಗೆ ನೋಯುತ್ತಿದ್ದಾರೆ, ನಿಟ್ಟುಸಿರು ಬಿಡುತ್ತಿದ್ದಾರೆ.

ರೈತರೊಬ್ಬರು ತಮ್ಮ ಹೆಂಡತಿಯ ಖಾತೆ (ಬದಲಿ ಖಾತೆ)ಯಲ್ಲಿ ಅಡಿಕೆ ವಿಕ್ರಿ ಮಾಡಲು ಟಿ.ಎಸ್.ಎಸ್.‌ನಲ್ಲಿ ತಂದರು. ಅಡಿಕೆ ವಿಕ್ರಿಯಾದ ಮೇಲೆ ಬೆಲೆ ಎಸ್ಟಾಗಿದೆ ಎಂಬ ವಾಟ್ಸಪ್‌ ಮೆಸ್ಸೇಜ್‌ ನಲ್ಲಿ ಹೆಂಡತಿಯ ಖಾತೆಯಲ್ಲಿ ವಿಕ್ರಿಯಾದಂತೆ ಸಂದೇಶ ಬಂದಿತ್ತು. ಆದರೆ ಮರುದಿವಸ ವ್ಯವಹಾರಕ್ಕಾಗಿ ಸಂಘಕ್ಕೆ ಹೋದಾಗ ಅವರ ಹೆಂಡತಿಯ ಹೆಸರಿನಲ್ಲಿದ್ದ ಬದಲಿ ಖಾತೆಯನ್ನು ರದ್ದು ಮಾಡಲಾಗದೆ ಮತ್ತು ಇವರ ಹಳೆಯ ಖಾತೆಗೇ ಆ ಹಣವನ್ನು ತೆಗೆದುಕೊಂಡು ಬರತಕ್ಕ ಬಾಕಿಗೆ ಭರಿಸಿಕೊಳ್ಳಲಾಗಿದೆ. ನಿಮಗೆ ಈಗ ಹಣ ದೊರೆಯುವುದಿಲ್ಲ ಎಂದರಂತೆ. ಆದರೆ ಬದಲಿ ಖಾತೆ ರದ್ಧತಿಯ ಪತ್ರಕ್ಕೆ ಈ ವರೆಗೂ ಅವರು ಸಹಿ ಕೊಟ್ಟಿರುವುದಿಲ್ಲ. ಅವರು ತನ್ನ ಹೆಂಡತಿಯ ಖಾತೆಯಲ್ಲಿ ವಿಕ್ರಿ ಮಾಡಲಾದ ಹಣದ ಮೊತ್ತವು ಬೇರೊಂದು ಖಾತೆಗೆ ಜಮಾಯಿಸಲಾಗಿದೆ ಆದ್ದರಿಂದ ನನ್ನ ಹೆಂಡತಿಯ ಖಾತೆಗೇ ಪುನರ್‌ ಭರಣ ಮಾಡಿಕೊಡಿ ಎಂದು ಎ.ಪಿ.ಎಂ.ಸಿ. ಶಿರಸಿಯ ಸಂಬಂಧಪಟ್ಟ ಅಧಿಕಾರಿಗೆ ನೀಡಿದ್ದಾರಾದರೂ ಏನೂ ಕ್ರಮ ಕೈಗೊಂಡಿಲ್ಲ. ಇನ್ನು ಮುಂದೆ ರೈತರಿಗೆ ಬಹಳ ಕಷ್ಠದ ದಿನಗಳು ಕಾದಿವೆ ಎನ್ನುತ್ತಾರೆ.

ಹಿಂದಿನ ಆಡಳಿತ ಮಂಡಳಿಯಂತೆ ಜನಪರ ಆಡಳಿತ ಕಾರ್ಯಕ್ಷಮತೆ ಹೊಂದಿರದ ಇಂದಿನ ಆಡಳಿತ ಮಂಡಳಿ ಸಂಘದ ದೈನಂದಿನ ಖರ್ಚಗೆ ಅಗತ್ಯವಾದ ಹಣವನ್ನೂ ದುಡಿಯಲಾಗದೇ ಎಲ್ಲಿ ದುಡ್ಡು ಹುಟ್ಟುತ್ತದೋ ನೋಡುತ್ತಿದೆ. ಈ ರೀತಿ ಬದಲಿ ಖಾತೆ ವ್ಯವಸ್ಥೆಯನ್ನು ರದ್ದುಗೊಳಿಸಿ ಸಾವಿರಾರು ರೈತರಿಂದ ಹಳೆಯ ಬಡ್ಡಿಯನ್ನು ಅಸಲಿಗೇ ಸೇರಿಸಿ ಬಡ್ಡಿಗೇ ಬಡ್ಡಿ ಜಡಿದು ವಸೂಲಿ ಮಾಡಿದರೆ ಅರೆಂಟು ಕೋಟಿ ಸಂಗ್ರಹವಾಗಬಹುದು ಎಂಬುದು ಈಗಿನ ಕಮೀಟಿಯ ಲೆಕ್ಕಾಚಾರವಿರಬಹುದು. ಆದರೆ ರೈತರ ಉದ್ಧರಕ್ಕಾಗಿ ಕಡವೆಯವರಂಥ ಹಿರಿಯರಿಂದ ನಿರ್ಮಿತವಾದ ಸಂಸ್ಥೆಗೆ ಅಪಾತ್ರರು ಅಧಿಕಾರಕ್ಕೆ ಬಂದರೆ ಹೇಗೆ ರೈತ ಶೋಷಣೆಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂಬುದು ಸದಸ್ಯ ರೈತರ ಅಭಿಪ್ರಾಯವಾಗಿದೆ. ಹಿಂದಿನ ಆಡಳಿತ ಕಮೀಟಿಯ ರೈತಸ್ನೇಹಿ ವಿಚಾರಧಾರೆ ಸಹಕಾರಿ ಸಾಕ್ಷರರಿಗೇ ಅರ್ಥವಾಗದ್ದು ವಿಪರ್ಯಾಸ. “ಬೇಣಕ್ಕೆ ಬೆಂಕಿ ಕೊಟ್ಟುಕೊಂಡು ದೆರಕಿಗೆ ಹೋದಹಾಗಾಯ್ತು ನಮ್ಮ ಕತೆ” ಎನ್ನುವುದು ನೋವಿನ ಉದ್ಗಾರವಾಗಿದೆ.

ಹಿಂದಿನ ಆಡಳಿತ ಮಂಡಳಿ ಜಾರಿಗೆ ತಂದಿದ್ದ ಬದಲಿ ಖಾತೆ ವ್ಯವಸ್ಥೆ (50%) ಯೋಜನೆ ರೈತರನ್ನು ಆರ್ಥಿಕ ಶಿಸ್ತಿನತ್ತ ಮತ್ತು ಉನ್ನತೀಕರಣದತ್ತ ಕರೆದೊಯ್ಯುತ್ತಿತ್ತು. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಿತ್ತು. ಆದರೆ ಹೊಸ ಆಡಳಿತ ಮಂಡಳಿ ಇದನ್ನು ಬಂದ್ ಮಾಡುವ ಮೂಲಕ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದೆ.

  • ಮಂಜುನಾಥ ಭಟ್ಟ, ಬೆಳ್ಕಂಡ, ಟಿಎಸ್ಎಸ್ ಸದಸ್ಯ

ಬಡ ಮತ್ತು ಮಧ್ಯಮವರ್ಗದ ಸದಸ್ಯ ರೈತರಿಗೆ ಸಾಲದಿಂದ ಹೊರಬರಲು ಸಾವಿರಾರು ಸದಸ್ಯ ರೈತರಿಗೆ ವರವಾಗಿದ್ದ ಬದಲಿ ಖಾತೆ ಯೋಜನೆ ಬಂದ್ ಮಾಡಿದ್ದು ಹೊಸ ಆಡಳಿತ ಮಂಡಳಿಯ ಬಹುದೊಡ್ಡ ಪ್ರಮಾದ. ಇದರ ನೇರ ಪರಿಣಾಮ ಮುಂದೆ ಅವರಿಗೆ ಗೊತ್ತಾಗಲಿದೆ. ಹಿಂದಿನ ಆಡಳಿತ ಮಂಡಳಿ ಜನಪರವಿತ್ತು. ಬದಲಿ ಖಾತೆ ವ್ಯವಸ್ಥೆ ಬಂದ್ ಮಾಡಿದ ಕಾರಣಕ್ಕೆ ಬಡ ಸದಸ್ಯ ರೈತರ ಕಣ್ಣೀರ ಶಾಪ ಸಹಕಾರಿ ಸಾಕ್ಷರರಿಗೆ ತಟ್ಟದೇ ಇರದು.

  • ಪ್ರಶಾಂತ ಹೆಗಡೆ, ಕಲ್ಲಗದ್ದೆ, ಟಿಎಸ್ಎಸ್ ಸದಸ್ಯ
Share This
300x250 AD
300x250 AD
300x250 AD
Back to top