Slide
Slide
Slide
previous arrow
next arrow

ಹೊಸ ಅಧ್ಯಕ್ಷರ ನಡೆ, ಆಡಳಿತ ವೈಖರಿಗೆ ಸದಸ್ಯರ ಬೇಸರ

300x250 AD

ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಷ | ಎಂಟೇ ತಿಂಗಳಿಗೆ ಹೊಸ ನಾಯಕತ್ವದ ಪ್ರಶ್ನೆ

🖋ಗೋಪಿಕೃಷ್ಣ: ಉತ್ತರ ಕನ್ನಡ ಕ್ಷೇತ್ರ ಭೌಗೋಳಿಕವಾಗಿ ವಿಶೇಷತೆಯಿಂದ ಕೂಡಿದೆ. ಶುದ್ಧ ಮಲೆನಾಡು, ಅರೆ ಮಲೆನಾಡು, ಕರಾವಳಿ, ಬಯಲು ಸೀಮೆ ಹೀಗೆ ಭಿನ್ನ ಭಿನ್ನ ಪ್ರದೇಶದಲ್ಲಿ ಜನರು ವಿವಿಧ ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಅಡಿಕೆಯನ್ನು ಹೆಚ್ಚು ಬೆಳೆಯುವ ಕ್ಷೇತ್ರಗಳಾದ ಶಿರಸಿ-ಸಿದ್ದಾಪುರ-ಯಲ್ಲಾಪುರ ಈ ಭಾಗದ ಜನರು ಸ್ವಭಾವತಃ ಸೌಮ್ಯ. ತಮಗಾದ ತೊಂದರೆಯನ್ನು ಇನ್ನೊಬ್ಬರಲ್ಲಿ ಹೇಳಿಕೊಳ್ಳಲು ನಾಚಿಕೆ ಪಡುವ ಸ್ವಭಾವ. ಬದಲಾಗಿ ಇಲ್ಲಿಂದ 40 ಕೀ.ಮೀ. ದೂರದ ದಾಸನಕೊಪ್ಪ, ಮುಂಡಗೋಡು ಪ್ರದೇಶದ ಜನರದ್ದು ನೇರಾ ನೇರಾ ರಾಜಕೀಯ. ‌ಅಡಿಕೆಯನ್ನು ಪಾರಂಪರಿಕವಾಗಿ ಬೆಳೆಯುವ ಕ್ಷೇತ್ರದ ಜನರು ಆರ್ಥಿಕ ವ್ಯವಹಾರಕ್ಕೆ ಹೆಚ್ಚು ಅವಲಂಬಿತರಾಗಿದ್ದು ಸಹಕಾರಿ ಕ್ಷೇತ್ರವನ್ನೇ ಆಗಿದೆ. ಪ್ರತಿ ಮನೆಯಲ್ಲಿನ ಶುಭಕಾರ್ಯ, ಮದುವೆ, ಉಪನಯನ ಸೇರಿ ಇನ್ನಾವುದೇ ಅಪರ ಕಾರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕೆಂದಾಗಲೂ ಸಹಕಾರಿ ಸಂಸ್ಥೆಯ ಅವಲಂಬನೆ ಬಹುತೇಕರಿಗೆ ಅನಿವಾರ್ಯ. ಸಹಕಾರಿ ವ್ಯವಸ್ಥೆ ಹೊರತಾಗಿ ಇಲ್ಲಿಯ ಜನರ ಜೀವನ ಊಹಿಸುವುದೂ ಅಸಾಧ್ಯ ಎಂದತೆ ತಪ್ಪಾಗಲಾರದು. ಅದೇ ರೀತಿ ಸಹಕಾರಿ ವ್ಯವಸ್ಥೆಯನ್ನು ಇವರೆಲ್ಲರೂ ತಮ್ಮ ಮನೆಯ ವ್ಯವಸ್ಥೆ ಎಂದೇ ಭಾವಿಸಿ ವ್ಯವಹಾರ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಇಲ್ಲಿನ ಸಹಕಾರಿ ವ್ಯವಸ್ಥೆ ಇಷ್ಟು ಗಟ್ಟಿಯಾಗಿರುವುದು.

ಒಂದು ಶತಮಾನದ ಕಾಲದಿಂದ ಜನರಿಗೆ ಸೇವೆ ನೀಡುತ್ತಿರುವ ಟಿಎಸ್ಎಸ್ ಜಿಲ್ಲೆಯ ಜನರ, ತನ್ನ ಸದಸ್ಯರ ಜೀವನಾಡಿ ಎಂದರೆ ತಪ್ಪಾಗಲಾರದು. ಅದರ ಹೊರತಾಗಿ ಬದುಕನ್ನು ಊಹಿಸಿಕೊಳ್ಳುವುದು ಕಷ್ಟಸಾಧ್ಯ. ಸಂಘದ ಪ್ರತಿಯೊಬ್ಬ ರೈತನಿಗೂ ಒಂದೇ ಸೂರಿನಡಿಯಲ್ಲಿ ಎಲ್ಲವೂ ಸಿಗಬೇಕು. ಸಂಘದ ಸದಸ್ಯ ಪ್ರತಿಯೊಂದು ಅವಶ್ಯಕತೆಗಳನ್ನು ಸಂಗವೇ ಪೂರೈಸುವಂತಾಗಬೇಕು. ಆ ಮೂಲಕ ರೈತ ಹಾಗು ಸಂಘದ ನಡುವೆ ಭಾವನಾತ್ಮಕವಾಗಿ ಸಂಬಂಧ ಗಟ್ಟಿಯಾಗಬೇಕು ಎಂಬ ಆಶಯ ಈ ಹಿಂದಿನ ಸಹಕಾರಿ ದಿಗ್ಗಜರದ್ದಾಗಿತ್ತು. ಅದೇ ಹಾದಿಯಲ್ಲಿಯೇ ಕಳೆದ 10 ವರ್ಷಗಳಲ್ಲಿ ಸಂಘದ ಪ್ರಗತಿಯ ಚಿತ್ರಣವೇ ಬದಲಾಯ್ತು. ರೈತರ ಬಹುತೇಕ ಅವಶ್ಯಕತೆಗಳನ್ನು ಸಂಘವೇ ಪೂರೈಸುತ್ತಾ ಬಂದಿದ್ದು, ಸದಸ್ಯರಿಗೆ ಕೇಳಿದ್ದನ್ನು ನೀಡುವ ಕಾಮಧೇನುವೇ ಆಗಿತ್ತೆಂದರೆ ತಪ್ಪಾಗಲಾರದು. ರೈತರಿಗೆ ಈ ಸೌಲಭ್ಯ ನೀಡಿರುವ ಕಾರಣಕ್ಕೆ ಸಂಸ್ಥೆಯೂ ಸಹ ಬೃಹತ್ತಾಗಿ ಬೆಳೆಯತೊಡಗಿತು.

ಹೊಸಬರ ನಾಯಕತ್ವಕ್ಕೆ ಸದಸ್ಯ ರೈತರ ಆಕ್ರೋಷ:
ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಳೆದ ವರ್ಷ ನಡೆದ ಅಡಳಿತ ಮಂಡಳಿ ಚುನಾವಣೆಯಲ್ಲಿ ಹೊಸ ತಂಡ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೇರಿದ ಗುಂಪಿನ ಕಾರ್ಯವೈಖರಿ ನೋಡಿ ಸದಸ್ಯರಿಗೆ ಒಂಬತ್ತು ತಿಂಗಳೊಳಗೆ ಬೇಸರ ಎನಿಸತೊಡಗಿದೆ. ಹಾಗೇ ನೋಡಿದರೆ, ಕಳೆದ 30 ವರ್ಷದಿಂದ ಹಿಂದಿನ ಅಧ್ಯಕ್ಷರು ಪ್ರತಿನಿಧಿಸಿದ್ಧ ಸೊಸೈಟಿಯ ಅಧ್ಯಕ್ಷರೇ ಈಗಲೂ ಪ್ರತಿನಿಧಿಸಿ ಅಧ್ಯಕ್ಷರಾಗಿ ಗಾದಿ ಏರಿದ್ದಾರೆ. ಅಲ್ಲಿಗೆ ಹೊಸ ತಂಡ ಎಂದು ರೈತರನ್ನು ಮಂಗನನ್ನಾಗಿಸಿದ್ದು ಬಹುತೇಕರಿಗೆ ಗೊತ್ತೇ ಆಗಲಿಲ್ಲ. ಬದಲಾವಣೆ ಮಾಡುತ್ತೇವೆ ಎಂದು ಅಧಿಕಾರಹಿಡಿದ ಹೊಸ ಅಧ್ಯಕ್ಷರ ತಂಡದ ಒಂದಿಬ್ಬರನ್ನು ಹೊರತುಪಡಿಸಿದರೆ, ಉಳಿದವರ ನಡೆ-ನುಡಿ, ಇತರ ಪೇಟೆಕಡೆಯ ಹವ್ಯಾಸಗಳು ಜನರಿಗೆ ಗೊತ್ತಿರದ ಸಂಗತಿಯಲ್ಲ. ಆದರೂ ಬದಲಾವಣೆ, ಬದಲಾವಣೆ ಎಂಬ ತುತ್ತೂರಿಗೆ ಧ್ವನಿಯಾದವರ ಜೊತೆಗೆ ಅಪಪ್ರಚಾರಕ್ಕೆ ಕಿವಿಯೊಡ್ಡಿದವರೇ ಜಾಸ್ತಿ. ಅದೇನೇ ಇರಲಿ. ಜನಮತ ಕೊಟ್ಟ ನಂತರ ಪ್ರಶ್ನೆಯಿಲ್ಲ. ಆದರೆ ಮತ ಕೊಟ್ಟ ಜನರಿಗೇ ಅಧಿಕಾರಕ್ಕೇರಿ ಏಳೇಂಟು ತಿಂಗಳೊಳಗೆ ಹೊಸ ಆಡಳಿತ ಮಂಡಳಿಗೆ ಸದಸ್ಯರು ಸಾರ್ವಜನಿಕವಾಗಿ ಬೈಯ್ಯುವ ಹಂತಕ್ಕೆ ಬಂದಿದ್ದಾರೆಂದರೆ ಇವರ ಆಡಳಿತದ ಕುರಿತು ಜನರಿಗೆ ಮನಸ್ಸಿಲ್ಲವೆಂಬುದು ಈಗ ಜಗಜ್ಜಾಹೀರು. ಇವರು ಕಟ್ಟುವ ತಂಡದ ನಾಯಕರಲ್ಲ. ಬದಲಾಗಿ ಇರುವುದೆಲ್ಲವನ್ನೂ ಮುಚ್ಚುವ ನಾಯಕರು ಎಂದು ಸ್ವತಃ ಸಂಘದ ಸದಸ್ಯರೇ ಮಾತನಾಡಿಕೊಳ್ಳುತ್ತಿರುವುದು ಈಗಿನವರ ಆಡಳಿತ ಅನುಭವಕ್ಕೆ, ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಕಳೆದ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಆಡಳಿತ ಮಂಡಳಿ ಕುರಿತು ಸಾಕಷ್ಟು ಅಪಸ್ವರ ಎದ್ದಿತ್ತು.‌ಆದರೇ ಅದೇ ರೀತಿ ಅಧಿಕಾರಕ್ಕೇರಿದ ಎಂಟೇ ತಿಂಗಳೊಳಗೆ ಹೊಸ ಆಡಳಿತ ಮಂಡಳಿ ಸದಸ್ಯರಲ್ಲಿಯೇ ಭಿನ್ನರಾಗ ಎದ್ದಿದೆ ಎಂಬ ಗುಸುಗುಸು ವಾನಳ್ಳಿ ಭಾಗದಲ್ಲಿ, ಜನತೆಯ ಬಝಾರ್, ಸಿಪಿ ಬಝಾರ್ ಗಳಲ್ಲಿ ಹಬ್ಬತೊಡಗಿದೆ. ಹೊಸ ತಂಡದ ನಾಯಕತ್ವದ ಮೇಲೆ ಜನರಿಗೆ ವಿಶ್ವಾಸವಿಲ್ಲದಂತೆ ಕಾಣುವುದರ ಜೊತೆಗೆ ಹಳೆಯ ಆಡಳಿತ ಮಂಡಳಿಯವರನ್ನು ದ್ವೇಷದ ಕಾರಣಕ್ಕೆ ಹತ್ತಿಕ್ಕುವಂತೆ ನಡೆದ ಪ್ರಯತ್ನಗಳು ಸಂಘದ ಸದಸ್ಯ ರೈತರ ಕಣ್ಣನ್ನು ಕೆಂಪಾಗಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಅಧ್ಯಕ್ಷರು, ಆಡಳಿತ ಮಂಡಳಿಯ ವಿರುದ್ಧ ಆಕ್ರೋಷ, ಭಿನ್ನಾಭಿಪ್ರಾಯಗಳು ಈಗಲೇ ಹೊಗೆಯಾಡಲು ಆರಂಭಿಸಿದ್ದು, ಇನ್ನೆಷ್ಟು ಕಾಲ ಮುಂದುವರೆಯುತ್ತದೆಯೆಂದು ಕಾದು ನೋಡಬೇಕಿದೆ.

300x250 AD

ಈಗಿನ ಆಡಳಿತ ಮಂಡಳಿಯ ಕಾರ್ಯವೈಖರಿ ನೋಡಿದರೆ ಇದು ಅಭಿವೃದ್ಧಿ ಆಧಾರಿತ ಕಾರ್ಯವಲ್ಲ. ಬದಲಾಗಿ ವಯಕ್ತಿಕ ದ್ವೇಷ, ಸ್ವಾರ್ಥ ಸಾಧನೆಗೆ ಅಧಿಕಾರಕ್ಕೆ ಏರಿರುವುದು ಇವರ ಹತ್ತಿಕ್ಕುವ, ಪರಮ ದ್ವೇಷದ ನೀತಿಯಿಂದಾಗಿ ಸದಸ್ಯರೆದುರು ಬೆತ್ತಲೆಯಾಗಿದೆ. ತಪ್ಪು ಯಾರು ಮಾಡಿದ್ದರೂ ತಪ್ಪೆ. ಒಂದು ವೇಳೆ ಸಹಕಾರಿ ಸಂಸ್ಥೆಯಲ್ಲಿ ತಪ್ಪು ನಡೆದಿದ್ದರೆ ಅದಕ್ಕೆ ಸಹಕಾರ ವ್ಯವಸ್ಥೆಯ ಕಾನೂನಿನಡಿಯಲ್ಲಿ ಬಗೆಹರಿಸಲು ಸಾಧ್ಯ. ಅದನ್ನು ಬಿಟ್ಟು ಹಠ, ದ್ವೇಷ ಸಾಧನೆಗೆ ಕ್ರಿಮಿನಲ್ ಕೇಸ್ ಹಾಕುವ ಮೂಲಕ ತಮ್ಮ ಮನಸ್ಸಿನೊಳಗಿದ್ದ ದ್ವೇಷ ಜನತೆಯೆದುರು ತೋರಿಸಿದ್ದಾರೆ. ನಗುವಿನ ಮುಖವಾಡ ಕಳಚಿ ಈಗ ಸದಸ್ಯರಿಗೆ ನೈಜತೆಯ ಅರಿವಾಗತೊಡಗಿದೆ. ಅಧಿಕಾರ ಯಾರಿಗೂ ಸ್ವಂತದ್ದಲ್ಲ, ಶಾಶ್ವತವೂ ಅಲ್ಲ. ಮುಂದೇ ಸದಸ್ಯರೇ ಇದಕ್ಕೆಲ್ಲ ಪೂರ್ಣವಿರಾಮ ನೀಡಲಿದ್ದಾರೆ. – ವಿನಾಯಕ ಹೆಗಡೆ, ಸಿದ್ದಾಪುರ (ಟಿಎಸ್ಎಸ್ ಸದಸ್ಯ)

ವ್ಯಾಪಾರವೆಂದ ಮೇಲೆ ಲಾಭ-ಹಾನಿಗಳು ಸಾಮಾನ್ಯ. ಆರಂಭದಲ್ಲಿ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಶುರುವಿನಲ್ಲಿಯೇ ಇರುವುದೆಲ್ಲವನ್ನೂ ಮುಚ್ಚುವುದಾದರೆ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದಾದರೂ ಏಕೆ ? ಹಾನಿಯನ್ನು ಕಡಿಮೆ ಮಾಡಿ ಲಾಭದೆಡೆಗೆ ವಹಿವಾಟನ್ನು ಕೊಂಡೊಯ್ಯುವ ತಾಕತ್ತು, ಅನುಭವ ಇಲ್ಲವೆಂದ ಮೇಲೆ ಇವರಿಗೆ ಅಧಿಕಾರ ಕೊಟ್ಟು ಪ್ರಯೋಜನವೇನು ? ಚುನಾವಣೆಯಲ್ಲಿ ಇವರಿಗೆ ಸಹಾಯ ಮಾಡಿದವರಿಗೆ ಋಣ ತೀರಿಸುವ ಸಲುವಾಗಿ ಸಂಘದ ಕೆಲವು ವ್ಯವಹಾರ ಬಂದ್ ಮಾಡಲಾಗುತ್ತಿದೆ ಎಂಬ ಗುಮ್ಮಾನಿ ಎಲ್ಲೆಡೆ ಕೇಳಿ ಬರುತ್ತಿದೆ. ಆಡಳಿತ ಮಂಡಳಿ ಸಂಘಕ್ಕೆ, ಸದಸ್ಯ ರೈತರಿಗೆ ನಿಷ್ಠೆ ತೋರಿಸಬೇಕೆ ಹೊರತು ಮಾರ್ಕೇಟಿನ ಹೊರಗಡೆಯವರಿಗಲ್ಲ. ನಿಮ್ಮ ಸ್ವಾರ್ಥದ ಕಾರಣಕ್ಕೆ ವ್ಯವಹಾರ ಬಂದ್ ಮಾಡಿದರೆ, ನೀವು ಮುಚ್ಚುವುದು ಕೇವಲ ಸಂಘದ ಒಂದು ವ್ಯವಹಾರವನ್ನಲ್ಲ. ಬದಲಾಗಿ ಸದಸ್ಯನೊಬ್ಬನ ಬದುಕಿನ ಬಾಗಿಲನ್ನು. ಇದರ ನೇರ ಪರಿಣಾಮ ಮುಂಬರುವ ದಿನದಲ್ಲಿ ಕಾಣಲಿದೆ.– ಹೆಸರು ಹೇಳಲಿಚ್ಚಿಸದ ಟಿಎಸ್ಎಸ್ ಸದಸ್ಯ

Share This
300x250 AD
300x250 AD
300x250 AD
Back to top