ಶಿರಸಿ: ತಾಲೂಕಿನ ಸ್ವರ್ಣವಲ್ಲೀಯ ಶ್ರೀಮಠದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ ಗುರುವಾರ್ಪಣೆಗೊಂಡಿದ್ದ, ಹೊಸ್ತೋಟ ಮಂಜುನಾಥ ಭಾಗವತರ ಕುರಿತಾದ “ಯಕ್ಷಹಂಸ” ಗ್ರಂಥವು, ಶಿರಸಿಯ ಹೊಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಆವರಣದಲ್ಲಿರುವ ಸಂಭ್ರಮ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡಿತು.
ಶಿರಸಿಯ ವಿಕಿ ಬುಕ್ಸ್ ಪ್ರಕಾಶನದಿಂದ ತುಂಬ ಆಕರ್ಷಕವಾಗಿ ಮೂಡಿಬಂದ ‘ಯಕ್ಷಹಂಸ’ ಕೃತಿಯನ್ನು ಹೆಗ್ಗೊಡು ನಿನಾಸಂ ನ ಕೆವಿ ಅಕ್ಷರ ಲೋಕಾರ್ಪಣೆ ಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಇಂದು ಯಕ್ಷಗಾನವನ್ನೂ ಸೇರಿ ಸಾಂಪ್ರದಾಯಿಕ ಕಲೆಗಳು ತಥಾಕಥಿತ ಮಾಧ್ಯಮಾಧಾರಿತ ಆಧುನಿಕ ಕಲೆಗಳ ನಡುವೆ ಕಾಣುತ್ತಿಲ್ಲ. ಆದರೂ ಅವುಗಳು ತಲುಪುವ ವಿಸ್ತಾರ ವಿಶಾಲವಾದುದು. ಯಕ್ಷರಂಗದಲ್ಲಿಯೇ ಅತೀ ಹೆಚ್ಚು ಜನರನ್ನು ತಲುಪಿಸುವ ಅದೆಷ್ಟೋ ಕಲಾವಿದರಿದ್ದಾರೆ. ಅವರ ಕೈನಲ್ಲಿ ಮಾಧ್ಯಮಗಳಿಲ್ಲ. ಸಿದ್ಧಾಂತ ಮತ್ತು ಪ್ರಯೋಗ ಎರಡೂ ಪತಿ-ಪತ್ನಿಯರಿದ್ದಂತೆ. ಅದನ್ನು ವಿಭಜಿಸಿಕೊಂಡು ಪ್ರಯೋಗ ರಂಗದಲ್ಲಿ, ಸಿದ್ಧಾಂತ ವಿಶ್ವವಿದ್ಯಾಲಯಗಳಲ್ಲಿ ಎನ್ನುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಬದಲಾವಣೆಯಾಗಬೇಕಿದೆ.” ಎಂದರು.
ಯಕ್ಷಹಂಸ ಕೃತಿನಿರ್ಮಾಣದ ಮಾರ್ಗದರ್ಶಕರಾಗಿದ್ದ ಯಕ್ಷಗಾನ ಕಲಾವಿದ ಪ್ರಭಾಕರ ಜೋಶಿ ಮಾತನಾಡಿ, ಹೊಸತೋಟ ಭಾಗವತರು ಯಕ್ಷರಂಗದ ಸರ್ವಪ್ರಕಾರಗಳಲ್ಲಿಯೂ ತೊಡಗಿಕೊಂಡಿದ್ದವರು. ಅವರ ಉಸಿರಿನ ಚೈತನ್ಯವೇ ಯಕ್ಷರಂಗವಾಗಿತ್ತು. ಅವರ ಕುರಿತು ಬಂದ ಈ ಕೃತಿ ಆರಂಭ ಮಾತ್ರ.ಇನ್ನೂ ಸಾಕಷ್ಟು ಸಾಧ್ಯತೆಗಳನ್ನು ರಂಗ ಮತ್ತು ರಂಗಪ್ರಯೋಗಳ ನೆಲೆಯಲ್ಲಿ ದಾಖಲಿಸಿಡುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಮಾತನಾಡಿ, ದಿವಂಗತ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಎಲ್ಲ ನೆಲೆಗಳನ್ನ ಅರಿತವರು. ಮುಂದಿನ ತಲೆಮಾರಿಗೆ ಸಶಕ್ತವಾಗಿ ತಲುಪಿಸಿದವರೂ ಕೂಡ.ಯಕ್ಷರಂಗದ ಸರ್ವರಂಗಗಳಲ್ಲಿಯೂ ಬೆರೆತುಹೋಗಿದ್ದ ಹೊಸ್ತೋಟ ಮಂಜುನಾಥ ಭಾಗವತರ ಕುರಿತಾದ ಗ್ರಂಥವೊಂದು ಲೋಕಾರ್ಪಣಗೊಳ್ಳುತ್ತಿರುವದು ಶ್ಲಾಘನೀಯ ಕಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಸ್ತಾವನೆಯನ್ನು ಮಾಡಿದ ಗ್ರಂಥದ ಪ್ರಧಾನ ಸಂಪಾದಕರಾದ ಡಾ.ವಿಜಯ ನಳಿನಿ ರಮೇಶ,” ಭಾಗವತರ ಒಡನಾಟದಲ್ಲಿ ಕಂಡ ಅವರ ಸಾಧನಾ ವಿಸ್ತಾರ ಹಾಗೂ ಅವರ ಮರಣಾನಂತರ ಇವೆಲ್ಲವನ್ನೂ ದಾಖಲಿಸಲೇಬೇಕೆಂಬ ಒತ್ತಡದಿಂದ ಶುರುವಾದ ಈ ಗ್ರಂಥದ ಕೆಲಸವನ್ನು ಎಲ್ಲ ಅಡೆತಡೆಗಳನ್ನೂ ಮೀರಿ ಸಿದ್ಧಗೊಂಡು ಲೋಕಾರ್ಪಣೆಗೊಂಡ ನೆಮ್ಮದಿಯ ಕ್ಷಣವಿದು ಎಂದರು.
ವಿಕಿ ಬುಕ್ಸ್ ಸಂಸ್ಥೆಯ ಮೂಲಕ ‘ಯಕ್ಷಹಂಸ’ ಕೃತಿಯನ್ನು ಪ್ರಕಟಿಸಿದ ಕಿರಣ ಉಪಾಧ್ಯಾಯ ಮಾತನಾಡಿ, ಒಂದು ರೀತಿಯಲ್ಲಿ ನನ್ನ ಗುರುಕಾಣಿಕೆಯ ಧನ್ಯತೆಯನ್ನು ಈ ಮೂಲಕ ಅನುಭವಿಸಿದ ಕ್ಷಣ. ಹೊಸತೋಟ ಭಾಗವತರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಇದು ಒಂದು ಪ್ರಯತ್ನ. ಬಾಲ್ಯದಲ್ಲಿ ತಾಳ ತಟ್ಟುವದನ್ನ ಕಲಿತಿದ್ದೆ. ಈಗ ಒಳ ಲಯದಲ್ಲಿ ಮಿಡಿಯುತ್ತಿದೆ. ಅದೇ ಭಾವತುಂಬಿ ಮಾತು ಮರೆತಿದೆ ಎಂದು ಭಾವುಕವಾಗಿ ನುಡಿದರು.
ಅಂದವಾಗಿ ಸಿಂಗಾರಗೊಂಡಿದ್ದ ಮೇನೆಯ ಮೆರವಣಿಗೆಯಲ್ಲಿ (ಪಲ್ಲಕ್ಕಿಯಲ್ಲಿ) ಗ್ರಂಥವನ್ನು ವೇದಿಕೆಗೆ ತಂದ ಕ್ರಮ ವಿನೂತನವಾಗಿತ್ತು. ತುಳಗೇರಿಯ ಗಜಾನನ ಭಟ್ ಅವರ ಭಾಗವತಿಗೆ ಮತ್ತು ಮಂಜುನಾಥ ಹೆಗಡೆ ಕಂಚಿಕೈ ಅವರ ಹಿಮ್ಮೇಳದೊಂದಿಗೆ ಮೆರವಣಿಗೆ ನಡೆಯಿತು. ಯಕ್ಷಗೆಜ್ಜೆಯ, ಚಿನ್ಮಯ್ ಮತ್ತು ತನ್ಮಯ್ ಯಕ್ಷಹೆಜ್ಜೆಯ ಸಾತ್ ನೀಡಿದರು. ಕಲಾಪದ ಸದಸ್ಯೆಯರಾದ ರೇಖಾ ಮತ್ತು ನಯನಾ ಮೇನೆಯಲ್ಲಿ ಯಕ್ಷಹಂಸವನ್ನು ರಂಗಕ್ಕೆ ತಂದಿದ್ದು ವಿನೂತನವಾಗಿತ್ತು.
ಪ್ರಸ್ತುತ ಕಾರ್ಯಕ್ರಮದ ಅಂಗವಾಗಿ ಯಕ್ಷಹಂಸ ಗ್ರಂಥದ ಪ್ರಧಾನ ಮಾರ್ಗದರ್ಶಕರಾದ ಮತ್ತು ಕಲಾವಿದ ಪ್ರಭಾಕರ ಜೋಶಿ, ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಮತ್ತು ಗ್ರಂಥದ ಪ್ರಕಾಶಕ ವಿಕಿ ಬುಕ್ಸ್ ಸಂಸ್ಥೆಯ ಕಿರಣ ಉಪಾಧ್ಯಾಯ ಇವರಿಗೆ ಗೌರವಾರ್ಪಣೆಯನ್ನು ಮಾಡಲಾಯಿತು. ಗೌರವಾರ್ಪಣೆಯನ್ನು ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕರಾದ ಢಾ.ವಿಜಯನಳಿನಿ ರಮೇಶ,ಉಪಸಂಪಾದಕ ಅಶೋಕ ಹಾಸ್ಯಗಾರ,ಸುಬ್ರಾಯ ಹೆಗಡೆ ಕೆರೆಕೊಪ್ಪ, ಶೈಲಜಾ ಗೊರನ್ಮನೆ ಮತ್ತು ಶಿವಾನಂದ ಹೆಗಡೆ ಕೆರೆಮನೆ ನಡೆಸಿಕೊಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಕಲಾಪದ ಸದಸ್ಯರಾದ ರೋಹಿಣಿ ಹೆಗಡೆ,ರೇಖಾ ಹೆಗಡೆ,ಹೇಮಲತಾ ಹೆಗಡೆ ಪ್ರಾರ್ಥನೆಯನ್ನು ಮಾಡಿದರು. ಗ್ರಂಥ ಸಂಪಾದಕೀಯ ಮಂಡಳಿಯ ಸದಸ್ಯರಾದ ಶಿವಾನಂದ ಹೆಗಡೆ ಕೆರೆಮನೆ ಅತಿಥಿಗಳನ್ನು ಸ್ವಾಗತಿಸಿದರು. ಕಲಾಪದ ಸದಸ್ಯರಾಧ ನಿರ್ಮಲಾ ಗೋಳೀಕೊಪ್ಪ ಹಾಗೂ ಸುಮಾ ಗಡಿಗೆಹೊಳೆ ಪುಸ್ತಕಾರ್ಪಣೆಯನ್ನು ನಡೆಸಿಕೊಟ್ಟರು. ಅರ್ಥಧಾರಿ ದಿವಾಕರ ಕೆರೆಹೊಂಡ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದ ಗ್ರಂಥದ ಲೇಖಕರಿಗೆ ಮತ್ತು ಯಕ್ಷರಂಗದೊಲವಿನ ಗಣ್ಯರಿಗೆ ಗ್ರಂಥಾರ್ಪಣೆ ಮಾಡಲಾಯಿತು. ಗ್ರಂಥಾರ್ಪಣೆಯನ್ನು ಡಾ.ವಿಜಯನಳಿನಿಯವರ ನೇತೃತ್ವದಲ್ಲಿ ಕಲಾಪದ ಸಾವಿತ್ರಿ ಶಾಸ್ತ್ರಿ ನಡೆಸಿಕೊಟ್ಟರು. ಕೊನೆಯಲ್ಲಿ ಸಂಪಾದಕೀಯ ಮಂಡಳಿಯವರಾದ ಅಶೋಕ ಹಾಸ್ಯಗಾರ ಅಭಾರಮನ್ನಣೆ ಸಲ್ಲಿಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಶೈಲಜಾ ಗೊರ್ನಮನೆ ನಡೆಸಿಕೊಟ್ಟರು.