ದಾಂಡೇಲಿ:1947 ರಲ್ಲಿ ಭಾರತ ಮತ್ತು ಪಾಕಿಸ್ಥಾನವನ್ನು ಇಬ್ಬಾಗ ಮಾಡಿದಂತೆ ದೇಶವನ್ನು ಮತ್ತೊಮ್ಮೆ ಇಬ್ಬಾಗ ಮಾಡುವ ಸಂಚು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕಂಡುಬರುತ್ತಿದೆ. ಮೀತಿ ಮೀರಿದ ಅಲ್ಪ ಸಂಖ್ಯಾತರ ಓಲೈಕೆಗಾಗಿ ಸಾಧ್ಯವಾಗದೆ ಇರುವ ಯೋಜನೆಗಳನ್ನು ಸೇರಿಸಲಾಗಿದೆ. ಹಿಂದೂಗಳಿಗೆ ಯೋಜನೆಗಳು ಏಕಿಲ್ಲ, ಜನ ಸಾಮಾನ್ಯರು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ತಾಲೂಕಿನ ಕೋಗಿಲಬನದಲ್ಲಿರುವ ವೈಶ್ಯವಾಣಿ ಸಭಾ ಭವನದಲ್ಲಿ ನಡೆದ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಬಾರಿಯ ಲೋಕಸಭಾ ಚುನಾವಣೆ ದೇಶ ರಕ್ಷಣೆ ಮತ್ತು ಧರ್ಮ ರಕ್ಷಣೆಯ ಚುನಾವಣೆಯಾಗಿದೆ, ಇವೆರಡು ಉಳಿಯ ಬೇಕೆಂದರೆ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕೆಂದರು.
ಮಾಜಿ ಶಾಸಕರಾದ ಸುನೀಲ ಹೆಗಡೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದೆ. ನೇಹಾ ಹಿರೆಮಠ ಅವರನ್ನು ಬರ್ಬರವಾಗಿ ಕೊಲೆ ಮಾಡಲು ಆರೋಪಿಗೆ ಅಷ್ಟೊಂದು ಧೈರ್ಯ ಬರಲು ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯೇ ಕಾರಣ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್.ಎಲ್. ಘೋಟ್ನೇಕರ ಅವರು ಮಾತನಾಡಿ ಕಾಗೇರಿ ಅವರು ಆರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಸಚಿವರಾಗಿ ಮತ್ತು ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಅನುಭವಿ ವ್ಯಕ್ತಿಗೆ ಮತ ನೀಡಿದರೆ ನರೇಂದ್ರ ಮೋದಿ ಅವರಿಗೆ ಮತ ನೀಡಿದಂತೆ ಎಂದರು.
ವೇದಿಕೆಯಲ್ಲಿ ಮಾಜಿ ಜಿಪಸ ವಾಮನ್ ಮಿರಾಶಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚನ್ನಬಸಪ್ಪ ಮುರುಗೋಡ, ಪಕ್ಷದ ಮುಖಂಡರುಗಳಾದ ಶಿವಾಜಿ ನರಸಾನಿ, ಅನಿಲ್ ಮತ್ನಾಳೆ, ಅಶೋಕ ಪಾಟೀಲ್, ರೋಷನ್ ನೇತ್ರಾವಳಿ, ಬಸವರಾಜ ಕಲಶೆಟ್ಟಿ, ವಿಷ್ಣುಮೂರ್ತಿ ರಾವ್, ಗೀತಾ ಶಿಕಾರಿಪುರ, ಚಂದ್ರಕಾಂತ ಕ್ಷೀರಸಾಗರ, ಗುರು ಮಠಪತಿ ಮೊದಲಾದವರು ಉಪಸ್ಥಿತರಿದ್ದರು.
ದಾಂಡೇಲಿ ಬಿಜೆಪಿ ಮಂಡಲದ ಅಧ್ಯಕ್ಷ ಬುದ್ಧಿವಂತಗೌಡ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ ಟೋಸುರ ವಂದಿಸಿದರೆ, ಮಿಥುನ ನಾಯಕ ನಿರೂಪಿಸಿದರು.