Slide
Slide
Slide
previous arrow
next arrow

ಸಂಘಟನೆಯಲ್ಲಿ ತೊಡಗಿ ಬೂತ್‌ನಲ್ಲಿ ಕಾಂಗ್ರೆಸ್‌ಗೆ ಮತ ಭದ್ರಪಡಿಸಿ: ವಿವೇಕ್ ಹೆಬ್ಬಾರ್

300x250 AD

ಯಲ್ಲಾಪುರ: ಎಲ್ಲರೂ ಒಗ್ಗಟ್ಟಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಬೂತ್‌ನಲ್ಲಿ ಕಾಂಗ್ರೆಸ್‌ಗೆ ಮತವನ್ನ ಭದ್ರಪಡಿಸಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ವಿವೇಕ್ ಹೆಬ್ಬಾರ್ ಕರೆನೀಡಿದರು.

ತಾಲೂಕಿನ ಗುಳ್ಳಾಪುರ ಹಾಗೂ ವಜ್ರಳ್ಳಿ ವ್ಯಾಪ್ತಿಯಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು, ಇಲ್ಲಿ ನಿಮಗೆ ನೀವೇ ಅಭ್ಯರ್ಥಿಗಳು. ಕಾರ್ಯಕರ್ತರೇ ಪಕ್ಷಕ್ಕಾಗಿ ದುಡಿಯುತ್ತಿರುವವರು. ಹೀಗಾಗಿ ನಿಮ್ಮನ್ನ ನೀವು ಗೆಲ್ಲಿಸಬೇಕು. ನೀವೇ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಬಿಜೆಪಿಗರು ಈ ಜಿಲ್ಲೆಗಾಗಿ ಏನು ಮಾಡಿದ್ದಾರೆ? ಕಷ್ಟಕಾಲದಲ್ಲಿ ಏನು ಸಹಾಯ ಮಾಡಿದ್ದಾರೆ? ಬಸವರಾಜ್ ಬೊಮ್ಮಾಯಿಯವರು ನೆರೆ ಸಂದರ್ಭದಲ್ಲಿ ಬಂದವರು ನಂತರ ಏನು ಮಾಡಿದರು? ಕಾಂಗ್ರೆಸ್‌ಗೆ ಜಾತಿ- ಧರ್ಮದ ಹುಚ್ಚಿಲ್ಲ. ಕಷ್ಟದಲ್ಲಿದ್ದಲ್ಲಿ, ತೊಂದರೆ ಇದ್ದವರಿಗೆ ನೆರವಾಗಿ ಅಭಿವೃದ್ಧಿ ಮಾಡಬೇಕು. ಪ್ರೀತಿ- ವಿಶ್ವಾಸ, ಶಾಂತಿ ಸೌಹಾರ್ದದಿಂದ ಬಾಳಲು ಕಾಂಗ್ರೆಸ್ ಬೇಕಿದೆ. ಈ ಚುನಾವಣೆಗೆ ಬಹಳ ಮಹತ್ವ ಇದೆ. ಬದಲಾವಣೆಯ ಉತ್ಸಾಹ ಎಲ್ಲೆಡೆ ಕಾಣುತ್ತಿದ್ದು, ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನ‌ ಗೆಲ್ಲಿಸಬೇಕಿದೆ ಎಂದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ನಮ್ಮ ಸರ್ಕಾರದ ಅವಧಿಯಲ್ಲಿ, ಮಾರ್ಗರೇಟ್‌ ಆಳ್ವಾ ಅವರು ಸಿದ್ದಿ ಸಮುದಾಯವನ್ನ ಎಸ್ಟಿಗೆ ಸೇರಿಸಿ ಬಡ ಸಮುದಾಯಕ್ಕೆ ನೆರವಾಗಿದ್ದರು. ನಮಗಾಗಿ ಅಥವಾ ನಮ್ಮ ಸ್ವಾರ್ಥಕ್ಕಾಗಿ ಅಲ್ಲ, ನಿಮಗೆ ಸಹಾಯ ಮಾಡಿದ, ಕಷ್ಟದ ಪರಿಸ್ಥಿತಿಯಲ್ಲಿ ಜೊತೆಯಾದ ಕಾಂಗ್ರೆಸ್‌ಗೆ ಮತ ನೀಡಬೇಕಿದೆ. ಪಾರ್ಲಿಮೆಂಟ್‌ನಲ್ಲಿ ಇಲ್ಲಿನ ಸಮಸ್ಯೆಗಳನ್ನ ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಅವರು ಐದು ವರ್ಷ ಶಾಸಕರಾಗಿ ವಿಧಾನಸಭೆಯಲ್ಲಿ ಘರ್ಜಿಸಿದ್ದರು. ಈಗ ಪಾರ್ಲಿಮೆಂಟ್‌ನಲ್ಲಿ ನಮ್ಮ ಧ್ವನಿಯಾಗಲಿದ್ದಾರೆ. ಪಾರ್ಲಿಮೆಂಟ್‌ನಲ್ಲಿ ಅರಣ್ಯ ಅತಿಕ್ರಮಣದಾರರ ಕೂಗು ಕೇಳಬೇಕಿದೆ. ಅತಿಕ್ರಮಣದಾರರಿಗೆ ನ್ಯಾಯ ಕೊಡಬೇಕೆಂಬುದು ನಮ್ಮ ಆಸೆ. ಅದಕ್ಕಾಗಿ ಅಂಜಲಿಯವರನ್ನ ಗೆಲ್ಲಿಸಬೇಕು ಎಂದರು.

300x250 AD

ಮಾಜಿ ಶಾಸಕ ವಿ.ಎಸ್.ಪಾಟೀಲ್, ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್ ಭಟ್ ಧಾತ್ರಿ, ಶ್ರೀಕಾಂತ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ‌ ಗಾಂವ್ಕರ್, ಕಾರ್ಯದರ್ಶಿ ವಿ.ಎಸ್.ಭಟ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವ್ಕರ್, ವಕ್ತಾರ ಶಂಭು ಶೆಟ್ಟಿ ಮುಂತಾದವರಿದ್ದರು.

ಕೋಟ್…
ಕಾಂಗ್ರೆಸ್ ಯಾವುದೇ ಒಂದು ಜಾತಿ- ಸಮುದಾಯಕ್ಕೆ ಸೀಮಿತವಾಗಿಲ್ಲ.‌ ಕಾಂಗ್ರೆಸ್ ಕುಟುಂಬಕ್ಕೆ ಹೆಚ್ಚಿನ ಮತದಾನ ಮಾಡಬೇಕು. ಗೃಹಲಕ್ಷ್ಮೀ ಮಹಾಲಕ್ಷ್ಮಿಯಾಗಲು‌ ಕಾಂಗ್ರೆಸ್‌ಗೆ ಮತ ಚಲಾಯಿಸಬೇಕು.

  • ಡಾ.ಅಂಜಲಿ, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಹತ್ತು ವರ್ಷ ಪ್ರಧಾನಿಯಾದರೂ ಹದಿನೈದು ಲಕ್ಷ ಹಾಕಲಾಗಿಲ್ಲ. ಬಿಜೆಪಿಗರದ್ದು ಕೇವಲ ಸುಳ್ಳೇ. ಮೋದಿ ಗ್ಯಾರಂಟಿಯೂ ಸುಳ್ಳೇ.

  • ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ
Share This
300x250 AD
300x250 AD
300x250 AD
Back to top