ದಾಂಡೇಲಿ : ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಭೀಕರ ಕೊಲೆ ಅತ್ಯಂತ ಖಂಡನೀಯ. ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಜನವಾದಿ ಮಹಿಳಾ ಸಂಘಟನೆಯ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷೆ ರತ್ನದೀಪ ಎನ್.ಎಂ ಆಗ್ರಹಿಸಿದ್ದಾರೆ.
ಅವರು ಸೋಮವಾರ ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆಗಳು ದಿನೇ ದಿನೇ ಹೆಚ್ಚುತ್ತಿದ್ದು, ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ, ರಕ್ಷಣೆ ಇಲ್ಲದೆ ಇರುವುದು ಇಂಥಹ ಘಟನೆಗಳಿಗೆ ಕಾರಣವಾಗಿವೆ. ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ (24) ಎಂಬ ವಿದ್ಯಾರ್ಥಿನಿಯನ್ನು ಹಾಡಹಗಲೇ ಚಾಕುವಿನಿಂದ ಕೊಲೆಮಾಡಿ ಹತ್ಯೆಗೈದಿರುವುದು ಅತ್ಯಂತ ಖಂಡನೀಯ. ಈಗಾಗಲೇ ಕೊಲೆಗಾರನನ್ನು ಬಂಧಿಸಿದ್ದರೂ, ಈ ಕುರಿತು ತಕ್ಷಣ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸುವಂತಾಗಬೇಕೆಂದು ಆಗ್ರಹಿಸಿದರು.
ಮಹಿಳೆಯರ ಮೇಲಿನ ಇಂತಹ ಪ್ರಕರಣಗಳು ದೇಶಾದ್ಯಂತ ನಿರಂತರವಾಗಿ ನಡೆಯುತ್ತಿದೆ. ಈ ಹಿಂದೆ ನಡೆದ ಪ್ರಕರಣಗಳಾದ ಗಗನ ಸಖಿಯಾಗಿದ್ದ ಯುವತಿಯ ಹಾಗೂ ಅವರ ಕುಟುಂಬದ ಕೊಲೆ, ಜೊತೆಯಲ್ಲಿ ರುಕ್ಸಾನಾ ಪ್ರಕರಣ, ಮಣಿಪುರದಲ್ಲಿ ಮಹಿಳೆಯ ಬೆತ್ತಲೆಗೊಳಿಸಿ ಅತ್ಯಾಚಾರಗೈದು ಕೊಲೆ ಮಾಡಿರುವುದು, ಅಂತೆಯೇ ಹೆಚ್ಚುತ್ತಿರುವ ಮರ್ಯಾದಾ ಹತ್ಯೆಗಳೂ ಸೇರಿದಂತೆ ಮುಂತಾದವುಗಳ ಬಗ್ಗೆ ಸರ್ಕಾರ ಗಮನ ನೀಡದೆ ಇರುವುದು ಮತ್ತು ಪರಿಣಾಮಕಾರಿಯಾಗಿ ಪರಿಗಣಿಸದೆ ಇರುವುದನ್ನು ನೋಡಿದರೆ ಮಹಿಳೆಯರನ್ನು ಯುವತಿಯರನ್ನು ತಾತ್ಸಾರದಿಂದ ಕಾಣುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಧೋರಣೆ ಹಾಗೂ ಸಮಾಜದ ಪುರುಷ ಪ್ರಧಾನ ಪ್ರಾಬಲ್ಯ ಎದ್ದು ಕಾಣುತ್ತದೆ. ಈ ರೀತಿಯ ಘಟನೆಗಳು ಹೆಚ್ಚಾಗಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಆದರೆ ಜಸ್ಟಿಸ್ ವರ್ಮಾ ಸಮಿತಿ ಮತ್ತಿತರೇ ಶಿಫಾರಸ್ಸು ಆಧಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಜಾರಿ ಮಾಡಿಲ್ಲ. ಜಾತಿ ಧರ್ಮದ ಲೇಪ ಹಚ್ಚಿ ಕೋಮುವಾದಿ ಪ್ರಚಾರಕ್ಕೆ ಮುಂದಾಗುವವರ ಬಗ್ಗೆ, ಚುನಾವಣೆಯ ಸಂದರ್ಭದಲ್ಲಿ ಅಸಾಂವಿಧಾನಿಕವಾಗಿ ವರ್ತಿಸುವವರ ಬಗ್ಗೆ ನಾಡಿನ ಜನತೆ ಎಚ್ಚರವಹಿಸಬೇಕೆಂದು ಜನವಾದಿ ಮಹಿಳಾ ಸಂಘಟನೆ ವಿನಂತಿಸುತ್ತದೆ. ಇಂತಹ ಆರೋಪಿಗಳಿಗೆ ಕಾನೂನು ರೀತಿಯ ಕಠಿಣ ಶಿಕ್ಷೆ ವಿಧಿಸಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ವಿದ್ಯಾರ್ಥಿನಿಯರ, ಮಹಿಳೆಯರ ರಕ್ಷಣೆ ಹಾಗೂ ಭದ್ರತೆಗಾಗಿ ಮಹಿಳಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ರತ್ನದೀಪ.ಎನ್.ಎಂ. ಆಗ್ರಹಿಸಿದ್ದಾರೆ.