ಭಟ್ಕಳ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯವೆಸಗಿದ್ದು ವ್ಯಕ್ತಿಯನ್ನು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕಾರವಾರ ಜೈಲಿಗೆ ಕಳುಹಿಸಿದ ಘಟನೆ ವರದಿಯಾಗಿದೆ.
ಮಹಿಳೆಯೋರ್ವಳು ಗುರುವಾರದಂದು ತಡರಾತ್ರಿ ಖಾಸಗಿ ಬಸ್‌ನಲ್ಲಿ ತನ್ನ 14 ವರ್ಷದ ಮಗಳೊಂದಿಗೆ ಉಡುಪಿಯಿಂದ ಭಟ್ಕಳಕ್ಕೆ ಹಿಂತಿರುಗುತ್ತಿದ್ದರು. ಪ್ರಯಾಣದ ವೇಳೆ ವ್ಯಕ್ತಿಯೊಬ್ಬ ಆಕೆಯ ಮಗಳಿಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ. ಮಹಿಳೆ ಮಧ್ಯಪ್ರವೇಶಿಸಿದಾಗ ಆತನೂ ಆಕೆಯ ಬಳಿ ಅನುಚಿತವಾಗಿ ವರ್ತಿಸಿದ್ದು, ಬಸ್‌ನಲ್ಲಿದ್ದಾಗಲೇ ಮಹಿಳೆ ಭಟ್ಕಳದಲ್ಲಿರುವ ತನ್ನ ಸಂಬಂಧಿಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಭಟ್ಕಳ ತಲುಪಿದಾಗ ಸ್ಥಳೀಯರು ಬಸ್ಸಿನ ಸುತ್ತ ಜಮಾಯಿಸಿ ಆರೋಪಿಯನ್ನು ಹಿಡಿದು ಭಟ್ಕಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆ ಉಡುಪಿ ಆಸ್ಪತ್ರೆಯಿಂದ ಭಟ್ಕಳಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿರುವ ಬಗ್ಗೆ ತಿಳಿದು ಬಂದಿದೆ.
ಆರೋಪಿಯನ್ನು ಹೊನ್ನಾವರ ಮೂಲದ ಸುಬ್ರಹ್ಮಣ್ಯ ಈರಾ ಗೌಡ (35) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಜೈಲಿಗೆ ರವಾನಿಸಿದ್ದಾರೆ. ಈತನು ಸುಬ್ರಹ್ಮಣ್ಯ ಮಲ್ಪೆಯಲ್ಲಿ ಬೋಟ್ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾನೆ. ಭಟ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.