ಭಟ್ಕಳ: ಇಂದಿನ ಸರಕಾರಿ ನೌಕರರು ದೈಹಿಕ ಮತ್ತು ಮಾನಸಿಕವಾಗಿ ಒತ್ತಡದಲ್ಲಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ತಹಶಿಲ್ದಾರ ನಾಗರಾಜ ನಾಯ್ಕಡ್ ಹೇಳಿದರು.
ಅವರು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಹಾಗೂ ತಾಲೂಕಾ ಆಸ್ಪತ್ರೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಸರಕಾರಿ ನೌಕರರು ಎರಡು ಮೂರು ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದು, ಅತ್ಯಂತ ಒತ್ತಡದಲ್ಲಿ ತನ್ನ ಕಾರ್ಯಮಾಡುತ್ತಾ ಆರೋಗ್ಯದ ಕಡೆಗೆ ಗಮನ ವಹಿಸಲು ಸಹ ಸಾಧ್ಯವಿಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದಾದ ಉಚಿತ ಆರೋಗ್ಯ ಶಿಬಿರವನ್ನು ಸರಕಾರಿ ನೌಕರರ ಸಂಘವು ಆಯೋಜಿಸಿದ್ದು ಅತ್ಯಂತ ಪ್ರಶಂಸನಾರ್ಹ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನೌಕರರ ಸಂಘದ ಅಧ್ಯಕ್ಷರಾದ ಮೋಹನ ನಾಯ್ಕ ಮಾತನಾಡಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ, ಸರಕಾರಿ ನೌಕರರಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳು ,ಕ್ರೀಡೆ, ಹೊನಲು ಬೆಳಕಿನ ವಾಲಿಬಾಲ್ , ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಧನ ಸಹಾಯ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಸಂಘ ಇಂದು ಸರಕಾರಿ ನೌಕರರಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದ ಆರೋಗ್ಯ ತಪಾಸಣೆಯ ಶಿಬಿರವನ್ನು ಆಯೋಜಿಸಿದ್ದೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸವಿತಾ ಕಾಮತ, ಡಾll ವೀರೇಂದ್ರ ಶಾನಭಾಗ, ಡಾ.ಕವಿಶಾ ಮಾತನಾಡಿದರು. ವೇದಿಕೆಯಲ್ಲಿ ಪ್ರೌಢಶಾಲಾ ಸಹ ಶಿಕ್ಕಕರ ಸಂಘದ ಖಜಾಂಚಿ, ಕುಮಾರ ನಾಯ್ಕ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಜಿ.ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ನೂರಾರು ನೌಕರರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ವಿವಿಧ ತಜ್ಞ ವೈದ್ಯರು ಹೃದ್ರೋಗ,ಮೂಳೆ ಮತ್ತು ಕೀಲು, ಸಾಮಾನ್ಯ ಚಿಕಿತ್ಸೆ, ಸ್ತ್ರೀ ರೋಗ, ಕಣ್ಣು, ಚರ್ಮ ರೋಗದ ಚಿಕಿತ್ಸೆಯನ್ನು ನೀಡಿದರು. ರಾಜ್ಯ ಪರಿಷತ್ತ ಸದಸ್ಯರಾದ ಪ್ರಕಾಶ ಶಿರಾಲಿ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಹೆಗಡೆ ವಂದನಾರ್ಪಣೆ ಮಾಡಿದರು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಶಿಕ್ಷಕಿ ಕುಸುಮಾ ಪ್ರಾರ್ಥಿಸಿದರು.