ಶಿರಸಿ: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ಸ್ಫರ್ಧೆಗೆ ಒತ್ತಡವಿದೆ. ಈ ಹಿನ್ನೆಲೆಯಲ್ಲಿ ೨೦೨೪ ರ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕಾಂಗ್ರೇಸ್ ಪಕ್ಷದ ಟಿಕೇಟನ್ನು ಬಯಸಿದ್ದೇನೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಮಾ.11 ಸೋಮವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಅಸಮರ್ಪಕ ಜಿಪಿಎಸ್‌ಗೆ ಹೋರಾಟಗಾರರ ವೇದಿಕೆಯಿಂದ ಉಚಿತ ಮೇಲ್ಮನವಿ ಸಲ್ಲಿಸಿದ ಪ್ರತಿಯನ್ನು ಅರಣ್ಯವಾಸಿಗಳಿಗೆ ವಿತರಿಸುತ್ತಾ ಮೇಲಿನಂತೆ ಹೇಳಿದರು.
ರಾಜ್ಯದ 16 ಜಿಲ್ಲೆಗಳಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 85 ಸಾವಿರ ಅರಣ್ಯವಾಸಿಗಳ ಪರವಾಗಿ ನಿರಂತರ 33ವರ್ಷ ಸಂಘಟನೆ, ಹೋರಾಟ ಮತ್ತು ಕಾನೂನಾತ್ಮಕ ಹೋರಾಟ ಮಾಡಿರುವುದರಿಂದ ಅರಣ್ಯವಾಸಿಗಳಿಂದ ಚುನಾವಣೆ ಸ್ಫರ್ಧಿಸಲು ಒತ್ತಡವಿರುವುದು ಸಹಜ. ಈ ದಿಶೆಯಲ್ಲಿ ಪಕ್ಷದ ಪ್ರಮುಖರನ್ನು ಸಂಪರ್ಕಿಸಿದ್ದೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಜುನಾಥ ನಾಯ್ಕ ರಾಗಿಹೊಸಳ್ಳಿ, ರಾಮ ಯಂಕ ಗೌಡ, ಮುಕುಂದ ಹುಚ್ಚಪ್ಪ ನಾಯ್ಕ, ರಾಮಚಂದ್ರ ಪುಟ್ಟ ಗೌಡ, ಕೆರಿಯಾ ಚೌಡ ಇಟಗುಳಿ, ವಿ.ಕೆ ಉಮ್ಮಾರ, ಕೃಷ್ಣ ಗಣಪತಿ ಕುಂಬಾರ, ಎಮ್.ಕೆ. ಮಹಮ್ಮದ್, ಪುತ್ತು ಸುಬ್ಬ ಸೊಂದಾ, ಉಮಾಪತಿ ಕೆರಿಯಾ ಗೌಡ ಮುಂತಾದವರು ಉಪಸ್ಥಿತರಿದ್ದರು.
43ಸಾವಿರ ಮೇಲ್ಮನವಿ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮಂಜೂರಿ ಪ್ರಕ್ರಿಯೆಯಲ್ಲಿ ಜರುಗಿದ ಜಿಪಿಎಸ್ ಸರ್ವೇ ಅಸಮರ್ಪಕವಾಗಿದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 43ಸಾವಿರ ಮೇಲ್ಮನವಿಯನ್ನು ಅರಣ್ಯವಾಸಿಗಳ ಪರವಾಗಿ ಉಚಿತವಾಗಿ ಸಲ್ಲಿಸಲಾಗಿದೆ. ಪುನರ್ ಜಿಪಿಎಸ್‌ಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ಹೇಳಿದರು.