ಹೊನ್ನಾವರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಲ್ಪ ಮತದಿಂದ ಪರಾಭವಗೊಂಡಿದ್ದ ಸೂರಜ್ ನಾಯ್ಕ ಸೋನಿ ಇದೇ ಬರುವ ಶುಕ್ರವಾರದಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಯುವ ಮುಖಂಡನಾಗಿ ಕಾಲೇಜು ದಿನದಿಂದನೇ ಹೋರಾಟ, ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ, ಕಾಲೇಜು ಉಪನ್ಯಾಸಕರಾಗಿ, ನಂತರದ ದಿನದಲ್ಲಿ ಜಿಲ್ಲೆಯ ಪ್ರಭಾವಿ ಮುಖಂಡರಾಗಿ, ಕಳೆದ ಬಾರಿಯ ಜಿದ್ದಾಜಿದ್ದಿನ ವಿಧಾನಸಭಾ ಚುನಾವಣೆಯಲ್ಲಿ ಕೂದಲು ಎಳೆಯ ಅಂತರದಲ್ಲಿ ಸೋಲು ಕಂಡರೂ ಕೂಡ ಸೂರಜ್ ಸೋನಿಯವರು ವರ್ಚಸ್ಸು ದಿನದಿಂದ ದಿನಕ್ಕೆ ಇಮ್ಮಡಿಗೊಳ್ಳುತ್ತಿದೆ. ಅವರ ಅಭಿಮಾನಿಗಳು, ಬೆಂಬಲಿಗರು ಅವರ ರಾಜಕೀಯ ಏಳ್ಗೆಗಾಗಿ ಹಗಲು ಇರುಳು ಶ್ರಮಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಜೆಡಿಎಸ್ ಅಂತಹ ವರ್ಚಸ್ಸು ಹೊಂದದ ಕಾರಣ ಸೂರಜ್ ಸೋನಿ ತಮ್ಮ ಭವಿಷ್ಯದ ರಾಜಕೀಯ ಪಯಣಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅದರ ಜೊತೆ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಸಾಲಿನಲ್ಲಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಅವರ ಬೆಂಬಲಿಗರು ಕೂಡ ಲೋಕಸಭಾ ಅಭ್ಯರ್ಥಿ ಆಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಸೋನಿಯವರು ಯಾವುದೇ ಪಕ್ಷಕ್ಕೆ ಹೋಗುವುದು ಆದರು ಟಿಕೆಟ್ ಖಾತರಿ ಆಗಬೇಕು ಅನ್ನುವ ಅಭಿಪ್ರಾಯ ಮುಂದಿಟ್ಟಿದ್ದಾರೆ ಎನ್ನುವ ಸುದ್ದಿಯು ಕೇಳಿ ಬಂದಿತ್ತು. ಇದೆಲ್ಲರ ನಡುವೆ ಇದೇ ಬರುವ ಶುಕ್ರವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನು ಕಾದು ನೋಡಬೇಕಿದೆ.