ಶಿರಸಿ: ಮುಂಬಯಿಯ ಮಯೂರವರ್ಮ ಸಾಂಸ್ಕೃತಿಕ ವೇದಿಕೆಯು ವಾರ್ಷಿಕವಾಗಿ ಕೊಡಮಾಡುವ 2024ನೇ ಸಾಲಿನ “ಚೆನ್ನಭೈರಾದೇವಿ ಪ್ರಶಸ್ತಿ”ಯನ್ನು ತಾಲೂಕಿನ ಅಬ್ರಿಮನೆಯ ಸುಯೋಗಾಶ್ರಯ ಮುಖ್ಯಸ್ಥೆ ಲತಿಕಾ ಗಣಪತಿ ಭಟ್ಟ ಅವರಿಗೆ ಮಾ.10ರಂದು ಸುಯೋಗಾಶ್ರಯದ “ಹಿರಿಯರ ಮನೆ”ಯಲ್ಲಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಮಾತನಾಡಿ, ಭಾರತೀಯ ಚಾರಿತ್ರಿಕ ಪರಂಪರೆಯಲ್ಲಿ 54 ವರ್ಷ ಸುದೀರ್ಘವಾಗಿ ರಾಜ್ಯಾಡಳಿತ ನಡೆಸಿದ ನಮ್ಮದೇ ನೆಲದ ರಾಣಿ ಚೆನ್ನಭೈರಾದೇವಿಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ನಿಸ್ವಾರ್ಥದಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಮಹಿಳೆಯರನ್ನು ಗುರುತಿಸಿ, ಪ್ರದಾನ ಮಾಡುತ್ತಿರುವ ಮುಂಬೈನ ಮಯೂರವರ್ಮ ಸಾಂಸ್ಕೃತಿಕ ವೇದಿಕೆಯ ಕ್ರಮ ಮಾದರಿಯಾದುದು ಎಂದರಲ್ಲದೇ, ಲತಿಕಾ ಭಟ್ಟ ತಮ್ಮ ಜೀವಿತಾವಧಿಯ ಗಳಿಕೆಯನ್ನು ವ್ಯಯಿಸಿ ನಿರ್ಲಕ್ಷಿತ-ನಿರ್ವಸಿತ ಹಿರಿಯರ ಸೇವೆಗೆ ತೊಡಗಿಕೊಡು ತಮ್ಮನ್ನು ಸಮರ್ಪಿಸಿಕೊಂಡಿರುವುದು ಸಮಾಜಕ್ಕೆ, ನಮ್ಮೆಲ್ಲರಿಗೆ ಮಾದರಿಯಾದುದು. ಚೆನ್ನಭೈರಾದೇವಿಯ ಪ್ರಶಸ್ತಿಗೆ ಈ ಮೂಲಕವಾಗಿ ಹೆಚ್ಚಿನ ಗೌರವ ಪ್ರಾಪ್ತವಾಗಿದೆ. ಚೆನ್ನಭೈರಾದೇವಿಯು ಸಮಾಜದ ಅನೇಕ ವೈರುದ್ಧಗಳನ್ನು, ಅಸಹಕಾರವನ್ನು ಮೆಟ್ಟಿ ಅವಮಾನ, ಅಪವಾದಗಳನ್ನು ಲೆಕ್ಕಿಸದೇ 54ವರ್ಷ ರಾಜ್ಯಭಾರ ಮಾಡಿದ ದೇಶದ ಏಕೈಕ ಮಹಿಳೆ, ನಮ್ಮ ನೆಲದ ಸಾಂಸ್ಕೃತಿಕ, ವ್ಯಾವಹಾರಿಕ, ಆಡಳಿತ ಕೌಶಲ್ಯದ ರಾಣಿ ಚೆನ್ನಭೈರಾದೇವಿಯ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ ಪೂರ್ವಗ್ರಹ ಪೀಡಿತ ಇತಿಹಾರಕಾರರ ಕುತಂತ್ರ ಬಯಲಿಗೆ ಬರಬೇಕಾಗಿದೆ. ಈ ದಿಸೆಯಲ್ಲಿ ಅವಳ ಇತಿಹಾಸ ಪಠ್ಯ-ಪುಸ್ತಕಗಳಲ್ಲಿ ಬರುವಂತಾಗಬೇಕು ಎಂದು ಸಲಹೆ ಮಾಡಿದರು.
ಲಭ್ಯವಿರುವ ಕೆಲವೇ ಕೆಲವು ದಾಖಲೆಗಳು, ಶಾಸನಗಳು ಹಾಗೂ ಇನ್ನಿತರ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯವಾಗಬೇಕಾಗಿದೆ. ಅಮೇರಿಕೆಯ ಟೆಕ್ಸಾಸ್ ವಿಶ್ವವಿದ್ಯಾಲಯದ ಭಾಷಾ ವಿದ್ವಾಂಸೆ ಡಾ.ಹನ್ನ ಚಾಫೆಲ್ ವೋಜಿಹೋವೆಸ್ಕಿಯು ಮಂಡಿಸಿದ ಪ್ರಬಂಧವನ್ನು ಚೆನ್ನಭೈರಾದೇವಿಯ ಕುರಿಯತಾಗಿರುವ ಅಧಿಕೃತ ದಾಖಲೆಯೆಂದು ಪರಿಗಣಿಸುವಂತೆ ಒತ್ತಾಯಿಸಿ, ಪ್ರಶಸ್ತಿಗೆ ಭಾಜನರಾದ ಲತಿಕಾ ಭಟ್ಟರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕವಿಯತ್ರಿ ಸಿಂಧುಚಂದ್ರ ಹೆಗಡೆ ಮಾತನಾಡಿ, ಲತಿಕಾ ಭಟ್ಟ ಹಿರಿಯರ ಸೇವಾ ಕೈಂಕರ್ಯವನ್ನು ಶ್ಲಾಘಿಸಿ, ತುಂಬು ಸಂಸಾರಸ್ಥ ಮಹಿಳೆಯಾಗಿರುವ ಅವರ ಈ ನಿರ್ಧಾರವು ಅತೀತವೂ, ಅಸದೃಶವೂ, ಅಸಾಮಾನ್ಯವೂ ಆಗಿದೆಯೆಂದು ಬಣ್ಣಿಸಿದರು. ಮಹಿಳಾ ದಿನಾಚರಣೆಯಂದೇ ಅಸಾಮಾನ್ಯ ಮಹಿಳೆಯಾಗಿರುವ ಲತಿಕಾ ಭಟ್ಟರವರಿಗೆ ಚೆನ್ನಭೈರಾದೇವಿ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಕಾಕತಾಳೀಯವಾಗಿದೆ. ಆದರೆ ಅದೊಂದು ಸುಯೋಗವಾಗಿ ಮಾರ್ಪಟ್ಟಿದೆಯೆಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ, ಲತಿಕಾ ಭಟ್ಟ ಮಾತನಾಡಿ, ತಾವು ತಮ್ಮ 40ನೆಯ ವರ್ಷದ ಹುಟ್ಟುಹಬ್ಬದಂದು ನಾನು ಸಮಾಜಕ್ಕೇನಾದರೂ ಮಾಡಬೇಕೆಂದು ಅನಿಸಿದಾಗ ಅದೇ ಮರುದಿನ ತಾನು ನಿರ್ವಹಿಸುತ್ತಿರುವ ಸಂಸ್ಥೆಯ ಆಡಳಿತಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ, ಮುಂದೇನು ಮಾಡಬೇಕೆಂದು ತಿಳಿಯದಾದಾಗ ದೇವರ ಸಂಕಲ್ಪದಂತೆ ನಾನು ವೃದ್ಧರ ಸೇವೆಗೆ ತೊಡಗಿಕೊಳ್ಳುವುದಕ್ಕೆ ಪ್ರೇರಣೆಯಾಯಿತು. 12 ವರ್ಷಗಳ ಹಿಂದೆ ಅಬ್ರಿಮನೆಯಲ್ಲಿ ಜಾಗ ಪಡೆದು ಚಿಕ್ಕ ಬಿಡಾರ ನಿರ್ವಹಿಸಿಕೊಂಡು ವೃದ್ಧಾಶ್ರಮ ಆರಂಭಿಸಿದ್ದಾಗಿಯೂ ಅನೇಕ ಅಡೆತಡೆಗಳು, ಅವಮಾನ, ಮೂದಲಿಕೆ, ತಿರಸ್ಕಾರದ ಮಾತುಗಳನ್ನು ಲೆಕ್ಕಿಸದೇ ಹಿರಿಯರ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಬಾಹ್ಯ ಪ್ರಪಂಚದ ಯಾವುದೇ ಸಂಗತಿಗಳಿಗೂ ಕಿವಿಗೊಡದೇ, ಸ್ಪಂದಿಸದೇ, ಪ್ರತಿಕ್ರಿಯಿಸದೇ ಅಸಹಾಯಕ ಹಿರಿಯರ ಸೇವೆಯಲ್ಲಿ ನಿರತನಾಗಿದ್ದೇನೆ ಎಂದು ತಿಳಿಸಿದರು. ತಾನು ಯಾವುದೇ ಪ್ರಶಸ್ತಿ, ಪುರಸ್ಕಾರವನ್ನು ಹುಡುಕೊಂಡಾಗಲೀ, ಪಡೆಯುವುದಕ್ಕಾಗಲೀ ಹೋಗದೇ ಇದ್ದೇನೆ. ಇಲ್ಲಿಗೇ ಬಂದು ಪ್ರಶಸ್ತಿಗಳನ್ನು ನೀಡಿದ್ದಾರೆ. ಈ ಪ್ರಶಸ್ತಿಗಳು ನನ್ನನ್ನು ನನ್ನ ಕೆಲಸ, ಸಂಕಲ್ಪ, ಕೈಂಕರ್ಯದಿಂದ ವಿಚಲಿತಗೊಳಿಸುವುದಿಲ್ಲವೆಂದು ಹೇಳಿ, ಹಿರಿಯರ ಸೇವೆಯಲ್ಲಿಯೇ ತನಗೆ ಆನಂದ ನೆಮ್ಮದಿ ದೊರೆಯುತ್ತಿದೆಯೆಂದರು.
ಅಧ್ಯಕ್ಷತೆ ವಹಿಸಿ, ಹೊನ್ನಾವರ ನಾಗರಿಕ ಪತ್ರಿಕೆಯ ಸಂಪಾದಕ, ಸಾಹಿತಿ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಲತಿಕಾ ಭಟ್ಟರವರ ನಿಸ್ವಾರ್ಥ ಸೇವಾ ತತ್ಪರತೆಯನ್ನು ಶ್ಲಾಘಿಸಿದರಲ್ಲದೇ, ನಿರ್ಲಕ್ಷಿತ ಹಿರಿಯರ ಸೇವೆ ತಪ್ಪಸ್ಸಾದರ್ಶವಾದುದೆಂದೂ ಗಟ್ಟಿ ಮನಸ್ಸಿನ ದಿಟ್ಟ ಮಹಿಳೆಗೆ ಮಾತ್ರ ಈ ಕೈಂಕರ್ಯಕ್ಕೆ ತೊಡಗಿಕೊಳ್ಳಲು ಸಾಧ್ಯವೆಂದು ಹೇಳಿ ಅವರನ್ನು ಅಭಿನಂದಿಸಿದರು. ಇಂದಿನ ದಿನಗಳಲ್ಲಿ ಯಾರು ತಮ್ಮ ತಂದೆ-ತಾಯಿಯರ ನೆರವಿಗೆ ನಿಲ್ಲಬೇಕಾಗಿತ್ತೋ ಅಂತಹ ಮಕ್ಕಳು ವಿದೇಶದಲ್ಲೋ, ಇನ್ನೆಲ್ಲೋ ಇದ್ದು ಏನೇಗಳಿಸಿದರೂ ಅದಕ್ಕೆ ಅರ್ಥವಿಲ್ಲ. ಅದು ನ್ಯಾಯಯುತವೂ ಅಲ್ಲ. ಲತಿಕಾ ಭಟ್ಟ್ ತಮ್ಮ ಸಂಪೂರ್ಣ ಗಳಿಕೆಯನ್ನು ಅಂತಹ ತಿರಸ್ಕೃತ ತಂದೆ-ತಾಯಿಯರ ಸೇವೆಗೆ ಮೀಸಲಿಟ್ಟಿದ್ದು ಪುಣ್ಯತಮವಾದುದು ದೇವರಿಗರ್ಪಿತವಾದುದಾಗಿದೆಯೆಂದರು.
ಆರಂಭದಲ್ಲಿ ದಿನೇಶ ಭಾಗ್ವತ್‌ರಿಂದ ಪ್ರಾರ್ಥನೆ, ಸ್ಥಳೀಯವಾಗಿ ಕಾರ್ಯಕ್ರಮ ಸಂಘಟಿಸಿದ್ದ ಲೇಖಕ ಜಯಪ್ರಕಾಶ ಹಬ್ಬು ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕಲಗಾರಿನ ಮಾಧವ ಶರ್ಮಾ ಸಮಯೋಚಿತವಾಗಿ ಮಾತನಾಡಿದರು. ಕವಿ ಜಿ.ವಿ.ಕೊಪ್ಪಲತೋಟ ವಂದಿಸಿದರು. ಈ ಸಂದರ್ಭದಲ್ಲಿ ಮಯೂರವರ್ಮ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಕೇಶವ ಕಿಬ್ಳೆ, ಲತಿಕಾ ಭಟ್ಟರವರ ಪತಿ ಗಣಪತಿ ಭಟ್ಟ, ತಂದೆ ಕುದಬೈಲ ಕೃಷ್ಣ ಭಟ್ಟ ಸೇರಿದಂತೆ ಅನೇಕ ಗಣ್ಯರು, ಸುಯೋಗಾಶ್ರಯದ ವೃದ್ಧರು, ಕಾರ್ಯಕರ್ತರು ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು. ಕಾರ್ಯಕ್ರಮ ಸಂಘಟಿಸುವಲ್ಲಿ ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ದೊಡ್ಮನೆ ಸಹಯೋಗ ನೀಡಿತ್ತು. ಸಭಾ ಕಾರ್ಯಕ್ರಮದ ಬಳಿಕ ಕು.ಪ್ರಿಯಾಂಕಾ ಪರಮಾನಂದ ಹೆಗಡೆಯವರ ಕೀರ್ತನೆ ಜರುಗಿತು.