Slide
Slide
Slide
previous arrow
next arrow

ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಬೋಧಕ ಸಂಘ ಮುಖ್ಯ ಭೂಮಿಕೆ: ವಿ.ಎಸ್‌.ನಾಯಕ

300x250 AD

‘ಕಥೆಯೊಂದಿಗಿನ ರಾಜು ಮಾಸ್ತರರು’ ಕಥಾ ಸಂಕಲನ ಲೋಕಾರ್ಪಣೆ

ಕುಮಟಾ: ಪ್ರತಿಭಾವಂತರನೇಕರು ಅವಕಾಶ ವಂಚಿತರಾಗಿ ಬೆಳಕುಗೊಂಡಿರದ ದುರ್ದಿನಗಳಲ್ಲಿ ಸುಪ್ತ ಪ್ರತಿಭೆಗಳಿಗೆ ಭೂಮಿಕೆಯನ್ನೊದಗಿಸಿ ಸಾರಸ್ವತ ಲೋಕಕ್ಕೆ ಪರಿಚಯಿಸುವ ಕರ್ನಾಟಕ ರಾಜ್ಯ ಬೋಧಕರ ಸಂಘದ ಕಾಯಕ ಶ್ಲಾಘ್ಯವೆಂದು ಅಂಕೋಲಾ ಕನ್ನಡ ಸಂಘದ ಅಧ್ಯಕ್ಷರಾದ ಖ್ಯಾತ ಹಿರಿಯ ನ್ಯಾಯವಾದಿ ವಿ.ಎಸ್‌.ನಾಯಕ ಕಣಗಿಲ್‌ ಹೇಳಿದರು.

ಅವರು ತಾಲ್ಲೂಕಿನ ಮಿರ್ಜಾನ್‌-ಕೋಡ್ಕಣಿಯ ಜನತಾ ವಿದ್ಯಾಲಯದ “ನೆಹರು-ಕೆನಡಿ ಸಭಾಭವನ”ದಲ್ಲಿ ಕುಮಟಾದ ಕರ್ನಾಟಕ ರಾಜ್ಯ ಬೋಧಕರ ಸಂಘ ಹಾಗೂ ಅಂಕೋಲಾದ ನವ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ “ಶಾಂತರಾಮಸುತ” ಸಾಹಿತ್ಯನಾಮದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ರಾಜು ರಾಮ ನಾಯ್ಕರವರ “ಕಥೆಯೊಂದಿಗಿನ ರಾಜು ಮಾಸ್ತರರು” ಎಂಬ ಶೀರ್ಷಿಕೆಯಲ್ಲಿನ ಕಥಾ ಸಂಕಲನವನ್ನು ಲೋಕಾರ್ಪಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಬೋಧಕರ ಸಂಘವು ತನ್ನ ಪ್ರಥಮ ಕೃತಿಯಾಗಿ ಶಾಂತಿರಾಮಸುತರ ಕಥಾಸಂಕಲನವನ್ನು ಪ್ರಕಾಶಿಸುವ ಮೂಲಕ ನಾಡಿಗೆ ಹೊಸ ಕಥೆಗಾರರೊಬ್ಬರನ್ನು ಪರಿಚಯಿಸಿ ಸಾಂಸ್ಕೃತಿಕ ಬದ್ಧತೆಯನ್ನು ಮೆರೆದು ಬರಹಗಾರರಿಗೆ ಅಭಿಪ್ರೇರಕವಾಗಿರುವುದು ಅಭಿನಂದನೀಯವಾಗಿದೆ ಎಂದರು. ಕೃತಿಯನ್ನು ಲೋಕಾರ್ಪಣೆಗೊಳಿಸಿದ ನಾಡಿನ ಹೆಸರಾಂತ ಕಥೆಗಾರರಾದ ಡಾ.ರಾಮಕೃಷ್ಣ ಗುಂದಿಯವರು -ಬದುಕಿನಲ್ಲಿ ಕಂಡುಂಡ ನೋವು-ನಲಿವುಗಳೇ ಕಲ್ಪನೆಯೊಂದಿಗೆ ಮೇಳೈಸಿ ಕಥೆಯಾಗಿ ಹುಟ್ಟುಗೊಂಡು ಕ್ರಮೇಣ ಪಳಗಿದ ಲೇಖನಿಯಿಂದ ಸಮರ್ಥ ಕಥೆಗಾರನು ಅನಾವರಣಗೊಳ್ಳುತ್ತಾನೆ ಎಂದರಲ್ಲದೇ, ಬದುಕಿನಲ್ಲಾದ ಆಕ್ರಮಣಕ್ಕೆ ಅಂತರಂಗದ ಆಕ್ರೋಶವು ಕಥೆಯ ಸ್ವರೂಪದಲ್ಲಿ ಅನಾವರಣಗೊಳ್ಳುತ್ತಲೇ ಬಂದಿರುವ ಬೇಕಷ್ಟು ಉದಾಹರಣೆಗಳಿವೆಯೆಂದು ತನ್ನ “ಆವಾರಿ” ಕಥೆಯೊಂದಿಗೆ ಸಮೀಕರಿಸಿ ಮಾತನಾಡಿದರು.

ಕೃತಿಯನ್ನು ಪರಿಚಯಿಸಿದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ-ಸಾಹಿತಿ ರೋಹಿದಾಸ್‌ ನಾಯ್ಕ ಮಾತನಾಡಿ, ರಾಜು ನಾಯ್ಕರವರ ಅನುಭವಜನ್ಯವಾಗಿ ಅವರ ಚೊಚ್ಚಲ ಕೃತಿಯು ಅನಾವರಣಗೊಂಡಿದ್ದು, ಇತರ ಕಥೆಗಾರರ ಕಥೆಗಳನ್ನು ಓದಿಕೊಳ್ಳುತ್ತಲೇ ಕಥೆಯನ್ನು ಕಟ್ಟಿಕೊಡುವಲ್ಲಿ ಮುಂಬರುವ ದಿನಗಳಲ್ಲಿ ಅವರು ತೊಡಗಿಕೊಂಡಲ್ಲಿ ಅವರಿಂದ ಅಭ್ಯಾಸಜನ್ಯವಾದ ಇನ್ನಷ್ಟು ಸಶಕ್ತವಾದ ಕಥೆಗಳು ಮೈದಳೆಯಲು ಸಾಧ್ಯವೆಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಾಧ್ಯಾಪಕ ವಿ.ಪಿ.ಶಾನಭಾಗ ತಮ್ಮ ಸಹೋದ್ಯೋಗಿಯಾಗಿರುವ ರಾಜು ನಾಯ್ಕರವರು ನಿರಂತರ ಸೃಜನಶೀಲವಾದ ಕಾರ್ಯಚಟುವಟಿಕೆಗಳ ಮೂಲಕ ತಮ್ಮ ಶಾಲೆಗೆ ಹಾಗೂ ಡಾ.ದಿನಕರ ದೇಸಾಯಿಯವರ  ಸಂಸ್ಥೆಗೆ ಹೆಮ್ಮೆಯಾಗಿದ್ದು, ಅವರ ಸಾಹಿತ್ಯಿಕ ಮುಖವು ಅಕ್ಷರ ಲೋಕದಲ್ಲಿ ತೆರೆದುಕೊಳ್ಳುತ್ತಿರುವುದು ಅಭಿಮಾನದ ವಿಷಯವಾಗಿದೆಯೆಂದರು. ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್‌ ಬರ್ಗಿಯವರು ಮಾತನಾಡುತ್ತಾ, ಹಿಂದಿ ಮತ್ತು ಸಂಸ್ಕೃತ ಭಾಷೆಗಳೆರಡನ್ನೂ ಬೋಧಿಸುವ ಅಪರೂಪದ ಶಿಕ್ಷಕರಾದ ರಾಜು ನಾಯ್ಕರವರ ಪ್ರತಿಯೊಂದು ಕಥೆಗಳಲ್ಲಿಯೂ ಅವರೂ ಪಾತ್ರವಾಗಿ, ಶೃಂಗಾರ-ಕರುಣಾರಸಗಳೆರಡಲ್ಲಿಯೂ ಆರಂಭಿಕ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದು, ವೃತ್ತಿ ಬದುಕಿನ ನಿವೃತ್ತಿಯ ಅಂಚಿನಲ್ಲಿದ್ದರೂ ಕ್ರೀಯಾಶೀಲವಾಗಿರುವ ಅವರ ಅನುಪಮ ವ್ಯಕ್ತಿತ್ವವು ಪ್ರಶಂಸನೀಯವಾಗಿದೆಯೆಂದರು.

300x250 AD

“ಸಿರಿನೆಲ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ” ಸಹಾಯಕ ಮುಖ್ಯಾಧ್ಯಾಪಕಿ ಉಮಾ ಹೆಗಡೆ ಸ್ವಾಗತಿಸಿದರು. “ಬಾಪು ಸದ್ಭಾವನಾ ಪ್ರಶಸ್ತಿ ಪುರಸ್ಕೃತ” ಗಿಬ್‌ ಬಾಲಕರ ಪ್ರೌಢಶಾಲೆಯ ನಾಮಾಂಕಿತ ವಿಜ್ಞಾನ ಶಿಕ್ಷಕರಾದ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಪೈರವರು ವಂದಿಸಿದರು. ಹಿರೇಗುತ್ತಿ ಪ್ರೌಢ ಶಾಲೆಯ ಶಿಕ್ಷಕ ಎನ್‌.ರಾಮು ನಿರೂಪಿಸಿದರು. ಸೇವಾಲಾಲ್‌ ಸಂಸ್ಥೆಯ ಅಧ್ಯಕ್ಷರಾದ ಮಾಸೂರು ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಶಿವಚಂದ್ರ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top