ಸಿದ್ದಾಪುರ: ಹಾರ್ಸಿಕಟ್ಟಾ ಗ್ರಾ.ಪಂ.ನ ಮುಠ್ಠಳ್ಳಿ, ಹಳಿಯಾಳ ಹಾಗೂ ಹಾರ್ಸಿಕಟ್ಟಾ ಗ್ರಾಮದ ಜನತೆಗೆ ಹಲವು ವರ್ಷಗಳಿಂದ ಮುಠ್ಠಳ್ಳಿ ಹೊಳೆಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ವರ್ಷ ಹೊಳೆಯಲ್ಲಿ ನೀರು ಕಡಿಮೆಯಾಗುತ್ತಿರುವುದರಿಂದ ಮುಂಜಾಗೃತೆಯಾಗಿ ಸಾರ್ವಜನಿಕರ ಶ್ರಮದಾನದಿಂದ ಶನಿವಾರ ಗ್ರಾಪಂ ತಡೆಒಡ್ಡನ್ನು ನಿರ್ಮಿಸಿ ನೀರು ಸಂಗ್ರಹಕ್ಕೆ ಮುಂದಾಗಿದೆ.
ಬಿಸಿಲಿನ ತಾಪದಿಂದಾಗಿ ದಿನದಿಂದ ದಿನಕ್ಕೆ ಹಳ್ಳಗಳಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದು ಹಳ್ಳದಲ್ಲಿನ ನೀರನ್ನು ಉಳಿಸಿಕೊಳ್ಳಬೇಕು ಎನ್ನುವುದರಿಂದ ಹಾರ್ಸಿಕಟ್ಟಾ ಗ್ರಾಪಂ ಮುನ್ನೆಚ್ಚರಿಕೆಯಾಗಿ ಮುಠ್ಠಳ್ಳಿ ಹೊಳೆಯಲ್ಲಿ ಈಗಿರುವ ತಡೆಒಡ್ಡಿನ ಮೇಲೆ ಮರಳುಚೀಲಗಳನ್ನಿಟ್ಟು ನೀರು ಸಂಗ್ರಹಕ್ಕೆ ಮುಂದಾಗಿದೆ.
ಮುಠ್ಠಳ್ಳಿ, ಹಳಿಯಾಳ, ಹಾರ್ಸಿಕಟ್ಟಾದ 75ಕ್ಕೂ ಹೆಚ್ಚು ಜನರು ಶ್ರಮದಾನದ ಮೂಲಕ ಸುಮಾರು 50ಮೀಟರ್ ಉದ್ದದ ಒಡ್ಡಿನ ಮೇಲೆ 400ಕ್ಕೂ ಹೆಚ್ಚು ಮರಳು ಚೀಲಗಳನ್ನಿಟ್ಟು ನೀರು ಸಂಗ್ರಹ ಆಗುವ ಹಾಗೆ ಮಾಡಿದ್ದಾರೆ. ಹಾರ್ಸಿಕಟ್ಟಾ, ಮುಠ್ಠಳ್ಳಿ ಹಾಗೂ ಹಳಿಯಾಳ ಊರಿನಿಂದ ಸುಮಾರು 185ಕ್ಕೂ ಹೆಚ್ಚು ನೀರಿನ ಬಳಕೆದಾರರಿದ್ದು ಅವರಿಗೆ ಮುಂದಿನ ದಿನದಲ್ಲಿ ನೀರಿನ ತೊಂದರೆ ಆಗಬಾರದೆಂದು ಅದೇ ನೀರು ಬಳಕೆದಾರರ ಸಹಕಾರವನ್ನು ಪಡೆದು ತಡೆಒಡ್ಡು ನಿರ್ಮಾಣ ಮಾಡಿದೆ. ಗ್ರಾಪಂನ ಉಪಾಧ್ಯಕ್ಷರಾದ ಸಿದ್ದಾರ್ಥ ಡಿ.ಗೌಡರ್ ಮುಠ್ಠಳ್ಳಿ, ಸದಸ್ಯರಾದ ಅಶೋಕ ನಾಯ್ಕ ಹಾರ್ಸಿಕಟ್ಟಾ, ಶಾಂತಕುಮಾರ ಪಾಟೀಲ್ ಹಾರ್ಸಿಕಟ್ಟಾ ಇವರು ಒಡ್ಡು ನಿರ್ಮಾಣದ ನೇತೃತ್ವವಹಿಸಿ ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂದು ಮುಂಜಾಗೃತೆ ವಹಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಗ್ರಾಪಂ ಪಿಡಿಒ ರಾಜೇಶ ನಾಯ್ಕ ಹಾಗೂ ಸಿಬ್ಬಂದಿಗಳು ಒಡ್ಡು ನಿರ್ಮಾಣದಲ್ಲಿ ಸಾರ್ವಜನಿಕರೊಂದಿಗೆ ಇದ್ದು ಅವರಿಗೆ ಪ್ರೇರಣೆ ನೀಡಿದರು.
ಜನರ ಸಹಕಾರ ಇದ್ದರೆ ಏನೂ ಮಾಡಬಹುದು ಎನ್ನುವುದಕ್ಕೆ ಒಡ್ಡು ನಿರ್ಮಿಸಿರುವುದೇ ಸಾಕ್ಷಿ ಆಗಿದೆ. ಗ್ರಾಪಂನ ಒಂದು ಕರೆಗೆ ಎಲ್ಲ ನೀರು ಬಳಕೆ ದಾರರು ಶ್ರಮದಾನದ ಮೂಲಕ ಒಡ್ಡನ್ನು ನಿರ್ಮಿಸಿರುವುದು ಮಾದರಿ ಆಗಿದೆ ಎಂದು ಹಾರ್ಸಿಕಟ್ಟಾ ಗ್ರಾಪಂ ಉಪಾಧ್ಯಕ್ಷ ಸಿದ್ದಾರ್ಥ ಡಿ.ಗೌಡರ್ ಹೇಳುತ್ತಾರೆ. ಅಘನಾಶಿನಿ(ಮುಠ್ಠಳ್ಳಿ) ಹೊಳೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ನೀರಿನ ಹರಿವು ಕಡಿಮೆ ಆಗಿದೆ. ಹಾರ್ಸಿಕಟ್ಟಾ, ಮುಠ್ಠಳ್ಳಿ, ಹಳಿಯಾಳದವರಿಗೆ ಇದೇ ಹೊಳೆಯ ನೀರನ್ನು ನಿತ್ಯ ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ನೀರಿನ ಅಭಾವ ಉಂಟಾಗಬಾರದೆಂದು ಎಲ್ಲರ ಸಹಕಾರದೊಂದಿಗೆ ಒಡ್ಡನ್ನು ನಿರ್ಮಿಸಲಾಗಿದೆ ಎಂದು ಗ್ರಾಪಂ ಪಿಡಿಒ ರಾಜೇಶ ನಾಯ್ಕ ತಿಳಿಸಿದ್ದಾರೆ.