ಶಿರಸಿ: ಇಲ್ಲಿನ ಪ್ರತಿಷ್ಠಿತ ಎಂ.ಇ.ಎಸ್. ಸಂಸ್ಥೆಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯವು ನ್ಯಾಕ್ ಮರುಮೌಲ್ಯಮಾಪನ ಪ್ರಕ್ರಿಯೆಯ ನಾಲ್ಕನೇ ಆವೃತ್ತಿಯಲ್ಲಿ 2.55 ಸಿ.ಜಿ.ಪಿ.ಎ. ಯೊಂದಿಗೆ ‘ಬಿ+’ ಗ್ರೇಡ್ ಅನ್ನು ಪಡೆದಿರುವುದಾಗಿ ‘ನ್ಯಾಕ್’ ಪ್ರಕಟಿಸಿದೆ. ಇತ್ತೀಚೆಗೆ ಮಾರ್ಚ್ 1 ಮತ್ತು 2ನೇ ತಾರೀಖಿನಂದು ಉನ್ನತಮಟ್ಟದ ‘ನ್ಯಾಕ್ ಪೀರ್ ಸಮಿತಿ’ ಯು ಮಹಾವಿದ್ಯಾಲಯಕ್ಕೆ ಭೇಟ್ಟಿ ನೀಡಿ ವಿಸ್ತೃತವಾದ ಪರಿಶೀಲನೆಯನ್ನು ಕೈಗೊಂಡಿತ್ತು.
ಪಠ್ಯ, ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನ, ಸಂಶೋಧನೆ, ನಾವಿನ್ಯತೆ ಹಾಗೂ ವಿಸ್ತರಣೆ, ಮೂಲಸೌಕರ್ಯ ಹಾಗೂ ಕಲಿಕಾ ಸಂಪನ್ಮೂಲಗಳು, ವಿದ್ಯಾರ್ಥಿ- ಬೆಂಬಲ ಮತ್ತು ಪ್ರಗತಿ, ಆಡಳಿತ-ನಿರ್ವಹಣೆ, ಸಾಂಸ್ಥಿಕ ಮೌಲ್ಯಗಳು ಹಾಗೂ ಶ್ರೇಷ್ಠ ಆಚರಣೆಗಳು, ಈ ಏಳು ವಿವಿಧ ಮಾನದಂಡಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನು ನ್ಯಾಕ್ ಸ್ವಾಯತ್ತ ಸಂಸ್ಥೆಯು ಮೌಲ್ಯಮಾಪನ ಮಾಡುತ್ತದೆ.
ಎಕ್ಯುಎಆರ್, ಐಐಕ್ಯುಎ, ಎಸ್ಎಸ್ಆರ್, ಡಿವಿವಿ ಹಾಗೂ ಪೀರ್ ಸಮಿತಿಯ ಭೇಟಿ ಇಂಥಹ ವಿವಿಧ ಹಂತಗಳಲ್ಲಿ ಸುದೀರ್ಘವಾದ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರತೀ ಐದು ವರ್ಷಕ್ಕೊಮ್ಮೆ ನಡೆಸಿ ಸಂಸ್ಥೆಗೆ ಗ್ರೇಡನ್ನು ನೀಡಲಾಗುತ್ತದೆ.
ಕಳೆದ ಮೂರನೇ ಆವೃತ್ತಿಯಲ್ಲಿ(2018ರಲ್ಲಿ) ಮಹಾವಿದ್ಯಾಲಯವು ‘ಬಿ’ ಗ್ರೇಡನ್ನು ಪಡೆದುಕೊಂಡಿದ್ದು ಪ್ರಸ್ತುತ ತನ್ನ ದರ್ಜೆಯನ್ನು ಉನ್ನತೀಕರಿಸಿಕೊಂಡಿದೆ. ಇದಕ್ಕಾಗಿ ಎಂ.ಇ.ಎಸ್. ನ ಅಧ್ಯಕ್ಷರಾದ ಜಿ. ಎಮ್. ಹೆಗಡೆ ಮುಳಖಂಡ, ಕಾಲೇಜು ಉಪಸಮಿತಿ ಅಧ್ಯಕ್ಷರಾದ ಎಸ್. ಕೆ. ಭಾಗವತ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರುಗಳು, ಪ್ರಾಚಾರ್ಯ ಡಾ. ಟಿ. ಎಸ್. ಹಳೆಮನೆ, ಐಕ್ಯುಎಸಿ ಸಂಯೋಜಕರಾದ ಡಾ. ಎಸ್. ಎಸ್. ಭಟ್ಟ ಹಾಗೂ ಸಿಬ್ಬಂದಿ ವರ್ಗ ತೀವ್ರ ಹರ್ಷ ವ್ಯಕ್ತಪಡಿಸಿದೆ.