Slide
Slide
Slide
previous arrow
next arrow

ಮಹಾಶಿವರಾತ್ರಿ; ಮುರ್ಡೇಶ್ವರದಲ್ಲಿ ಜನ ಸಾಗರ

300x250 AD

ಭಕ್ತಿಯಲ್ಲಿ ಮಿಂದೆದ್ದ ಜನತೆ | ದೇವರಿಗೆ ರುದ್ರಾಭಿಶೇಕ, ಬಿಲ್ವಾರ್ಚನೆ, ದರ್ಶನಗೈದ ಭಕ್ತಸಮೂಹ

ಭಟ್ಕಳ: ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರ ಮುರ್ಡೇಶ್ವರದಲ್ಲಿ ಬೆಳಿಗ್ಗೆ 10 ಗಂಟೆ ವೇಳೆಗೆ 5 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿ ದೇವರ ದರ್ಶನ ಪಡೆದರು.

ಶಿವನ ಪಂಚಕ್ಷೇತ್ರಗಳಲ್ಲೊಂದಾದ ಶ್ರೀ ಮುರ್ಡೇಶ್ವರ ದೇವರಿಗೆ ಶಿವರಾತ್ರಿಯ ನಿಮಿತ್ತ ಈ ಬಾರಿ ವಿಶೇಷವಾಗಿ ಮುಂಜಾನೆ ನಸುಕಿನ ವೇಳೆ 3 ಗಂಟೆಯಿಂದಲೇ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು ಈ ಹಿನ್ನೆಲೆ ಭಕ್ತರ ಸಾಲು ದೇವಸ್ಥಾನದ ಹೊರಾಂಗಣದವರೆಗೂ ಸರದಿ ಸಾಲು ಬಂದಿತ್ತು.

ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಧಾರ್ಮಿಕ ಕಾರ್ಯಗಳು ನಡೆಯಿತು. ಪರಶಿವನಿಗೆ ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಪತ್ರ ಅರ್ಚನೆ ಮುಂತಾದ ಕಾರ್ಯಗಳು ನಡೆಯಿತು.

ಮುರ್ಡೇಶ್ವರಕ್ಕೆ ಭೇಟಿ ನೀಡಿದ ಭಕ್ತಾಧಿಗಳು ಸಮುದ್ರಸ್ನಾನ ಮಾಡಿ ದೇವರಿಗೆ ವಿವಿಧ ರೂಪದಲ್ಲಿ ಅಭಿಷೇಕದೊಂದಿಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು. ದೇವರ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಭಕ್ತರು ಜತೆಗೆ ದೂರದೂರುಗಳಿಂದ ಬಂದಿದ್ದ ಪ್ರವಾಸಿಗರು ಸಾಲಿನಲ್ಲಿ ನಿಂತಿದ್ದರು. ಸಮುದ್ರತೀರ ಮತ್ತು ದೇವಸ್ಥಾನದ ಸುತ್ತಮುತ್ತ ಜನಜಾತ್ರೆಯೇ ನೆರೆದಿತ್ತು.

300x250 AD

3 ಗಂಟೆಗೆ ದೇವರ ದರ್ಶನಕ್ಕೆ ಅನುವುಮಾಡಿಕೊಟ್ಟ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ಭಕ್ತರು ಮುರುಡೇಶ್ವರಕ್ಕೆ ಆಗಮಿಸಿದರು. ದೇವಸ್ಥಾನದಲ್ಲಿ ಈ ಬಾರಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಜೊತೆಯಲ್ಲಿ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೂಡ ಭಾಗಿಯಾಗಿದ್ದರು

ಲಂಕಾಧಿಪತಿ ರಾವಣನ ತಾಯಿ ಮರಳಿನ ಲಿಂಗ ತಯಾರಿಸಿ ಪೂಜಿಸಬೇಕೆನ್ನುವಷ್ಟರಲ್ಲಿ ಅಲೆಯೊಂದು ಲಿಂಗವನ್ನು ಕೊಚ್ಚಿಕೊಂಡು ಹೋಯಿತು. ಇದರಿಂದ ವೃತನಿರಶನಳಾಗಿ ಕುಳಿತ ತನ್ನ ತಾಯಿಯ ಸಲುವಾಗಿ ರಾವಣನು ತಪಸ್ಸು ಮಾಡಿ ಶಿವನಿಂದ ಆತ್ಮಲಿಂಗ ಪಡೆದು ಹಿಂತಿರುಗುತ್ತಿದ್ದಾಗ, ಮಹಾವಿಷ್ಣು ತನ್ನ ಚಕ್ರದಿಂದ ಸೂರ್ಯನನ್ನು ಮರೆಯಾಗಿಸಿ ಸಂಜೆಯಾಗಿಸಿದ. ಬಲು ಕರ್ಮಠನಾದ ರಾವಣನು ಕೈಯಲ್ಲಿದ್ದ ಆತ್ಮಲಿಂಗವನ್ನು ಹತ್ತಿರದಲ್ಲೇ ವಟುವಿನ ರೂಪದಲ್ಲಿದ್ದ ಗಣಪನ ಕೈಯಲ್ಲಿಟ್ಟನು. ಸಂಧ್ಯಾವಂದನೆಗೆ ಮರಳುವ ಮುನ್ನವೇ ಗಣಪನು ಲಿಂಗವನ್ನು ಭೂಮಿಯಲ್ಲಿ ಪ್ರತಿಷ್ಠಾಪಿಸಿದನು.

ಅದು ಈಗ ಭೂಕೈಲಾಸವೆಂದು ಪ್ರತೀತಿಯಾದ ಗೋಕರ್ಣ ಕ್ಷೇತ್ರ. ಭೂಮಿ ಮೇಲೆ ಲಿಂಗ ಪ್ರತಿಷ್ಠಾಪಿಸಿದ್ದರಿಂದ ಕೋಪಗೊಂಡು ರಾವಣನು ಲಿಂಗವನ್ನು ಕಿತ್ತು ಎಸೆದಾಗ ಅದು ಶಿವನ ಪಂಚಕ್ಷೇತ್ರ (ಗೋಕರ್ಣೇಶ್ವರ, ಸಜ್ಜೇಶ್ವರ, ಧಾರೇಶ್ವರ, ಗುಣವಂತೇಶ್ವರ, ಮುರ್ಡೇಶ್ವರ) ಗಳಾಗಿ ಪ್ರಸಿದ್ಧಿಯಾಯಿತು. ಮುರುಡು ಮುರುಡಾಗಿ ಬಂದು ಬಿದ್ದ ಶಿವನ ಲಿಂಗದಿಂದಾಗಿ ಭಟ್ಕಳ ತಾಲ್ಲೂಕಿನಲ್ಲಿರುವ ಈ ಕ್ಷೇತ್ರ ಮುರ್ಡೇಶ್ವರ ಎಂದು ಪ್ರಸಿದ್ಧಿಯಾಯಿತು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಇಂದು ಮುರ್ಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ಕೇಂದ್ರವಾಗಿಯೂ ಖ್ಯಾತಿ ಪಡೆದಿದೆ. ನಿತ್ಯ ಸಾವಿರಾರು ಭಕ್ತಾದಿಗಳು ಮುರ್ಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಶಿವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ಮತ್ತಷ್ಟು ಜನಜಂಗುಳಿ ನೆರೆದಿರುತ್ತದೆ. ದರ್ಶನಕ್ಕೆ ಬಂದಂತಹ ಎಲ್ಲಾ ಭಕ್ತರಿಗೂ ಪಾನೀಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

Share This
300x250 AD
300x250 AD
300x250 AD
Back to top